23.2 C
Shimoga
Sunday, November 27, 2022

ಸಮಾಜಕ್ಕಾಗಿ ಶ್ರಮಿಸಿದವರ ಸೇವೆ ಸ್ಮರಣೀಯ ; ಶ್ರೀ ರಂಭಾಪುರಿ ಜಗದ್ಗುರುಗಳು


ಶಿವಮೊಗ್ಗ: ವೀರಶೈವ ಸಮಾಜದ ಅಭಿವೃದ್ಧಿಗಾಗಿ ಹಲವಾರು ಮಹನೀಯರು ಶ್ರಮಿಸಿದ್ದಾರೆ. ಸೇವೆ ಮಾಡಿದ ಮಹನೀಯರ ಕೊಡುಗೆಯನ್ನು ಸ್ಮರಿಸಬೇಕಾದುದು ಇಂದಿನವರ ಆದ್ಯ ಕರ್ತವ್ಯ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.


ಅವರು ನಗರದ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ನಿರ್ಮಿಸಲಾಗಿರುವ ನೂತನ ವೀರಶೈವ ಸಾಂಸ್ಕೃತಿಕ ಭವನದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.


ವೀರಶೈವ ಧರ್ಮ ಯಾವಾಗಲೂ ಸ್ವಾರ್ಥ ಬಯಸಿಲ್ಲ. ಸಂಕುಚಿತತೆಯನ್ನು ಹೊಂದಿಲ್ಲ. ಎಲ್ಲ ಸಮುದಾಯದ ಜನತೆಯನ್ನು ತಮ್ಮ ಸಹೋದರರು ಎಂಬ ಭಾವನೆಯಿಂದ ಮುನ್ನಡೆದಿದೆ. ಇತ್ತೀಚಿನ ದಿನಗಳಲ್ಲಿ ಮನುಷ್ಯ ಸ್ವಾರ್ಥ ಮತ್ತು ಸಂಕುಚಿತ ಮನೋಭಾವನೆಗೆ ಒಳಗಾಗಿ ಧರ್ಮ ಜಾತಿಗಳ ಮಧ್ಯದಲ್ಲಿ ಆಳವಾದ ಕಂದಕ ನಿರ್ಮಾಣ ಆಗುವಂಥ ಕೆಲವು ಘಟನೆಗಳು ಧರ್ಮ ಪೀಠಗಳಿಗೆ ಬಹಳಷ್ಟು ವ್ಯಥೆ ಉಂಟು ಮಾಡುತ್ತಿದೆ. ನೂರಾರು ಒಳಪಂಗಡಗಳಿಂದ ಕೂಡಿದ ವೀರಶೈವ ಧರ್ಮ. ಯಾವುದೇ ಒಳಪಂಗಡದಲ್ಲಿ ಹುಟ್ಟಿರಲಿ ಅವರೆಲ್ಲರೂ ಈ ಧರ್ಮದ ಸಹೋದರರು ಅನುಯಾಯಿಗಳು ಎಂಬುದನ್ನು ಮರೆಯಬಾರದು. ವೀರಶೈವ ಧರ್ಮಾಚಾರ್ಯರು ತೋರಿದ ದಾರಿ ಶಿವಶರಣರು ನಡೆದ ದಾರಿ ಬೇರೆ ಬೇರೆಯಲ್ಲ. ಅವರು ತೋರಿದ ದಾರಿಯಲ್ಲಿ ಎಲ್ಲರೂ ಮುನ್ನಡೆಯುವ ಪ್ರಾಮಾಣಿಕ ಪ್ರಯತ್ನ ಬೇಕು. ಎಲ್ಲ ರಂಗಗಳಲ್ಲಿ ಕಾಣುವಂಥ ಅವಘಡಗಳು ಧಾರ್ಮಿಕ ರಂಗದಲ್ಲಿಯೂ ಕಂಡು ಬರುತ್ತಿರುವುದು ನೋವಿನ ಸಂಗತಿಯಾಗಿದೆ. ಸಂಸ್ಕಾರ ಸಂಸ್ಕೃತಿಗಳ ಕೊರತೆಯಿಂದಾಗಿ ಮಕ್ಕಳು ಹಿರಿಯರ ಮಾತು ಕೇಳದಂಥ ಪರಿಸ್ಥಿತಿ ಉಂಟಾಗಿದೆ. ಒಳಪಂಗಡಗಳು ಒಂದಾಗಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದಾಗ ಏನೆಲ್ಲ ಸಾಧಿಸಲು ಸಾಧ್ಯ ಎಂಬುದಕ್ಕೆ ಸುಂದರವಾಗಿ ನಿರ್ಮಾಣಗೊಂಡಿರುವ ವೀರಶೈವ ಸಾಂಸ್ಕೃತಿಕ ಭವನ ಸಾಕ್ಷಿಯಾಗಿದೆ. ಇಲ್ಲಿ ಅರ್ಥಪೂರ್ಣವಾದ ಸಾಂಸ್ಕೃತಿಕ ಸಂಸ್ಕಾರಯುಕ್ತ ಕಾರ್ಯಕ್ರಮಗಳು ಜರುಗಲಿ. ಇದರ ಉಪಯೋಗ ಸರ್ವರಿಗೂ ದೊರೆಯಲಿ. ಇದರ ಹೆಚ್ಚಿನ ಅಭಿವೃದ್ಧಿಗಾಗಿ ಎಲ್ಲರ ಗಮನ ಇರುವಂತಾಗಲಿ. ಹರಕೆರೆಯಲ್ಲಿ ನಿರ್ಮಾಣಗೊಂಡಿರುವ ಶ್ರೀ ರಂಭಾಪುರೀಶ್ವರ ನಿವಾಸ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದ ಉದ್ಘಾಟನೆ ಶೀಘ್ರದಲ್ಲಿ ಜರುಗಲಿದೆ ಎಂದು ಅವರು ತಿಳಿಸಿದರು.


ಸಮಾರಂಭವನ್ನು ಉದ್ಘಾಟಿಸಿದ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾತನಾಡಿ, ಎಲ್ಲ ಸಮಾಜದವರನ್ನು ಒಗ್ಗೂಡಿಸಿಕೊಂಡು ವೀರಶೈವ ಸಮಾಜ ಮುನ್ನಡೆದಿದೆ. ಶಿವಮೊಗ್ಗ ನಗರ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಧಾರ್ಮಿಕವಾಗಿ ಬೆಳೆಯುತ್ತಿರುವುದು ಸಂತಸದ ಸಂಗತಿ. ವೀರಶೈವ ಸಾಂಸ್ಕೃತಿಕ ಭವನದ ಉಪಯೋಗ ಸರ್ವರೂ ಹೊಂದುವಂತಾಗಲಿ. ಡಿಶಂಬರ್ ಕೊನೆಗೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೊಳ್ಳಲಿದ್ದು ಜನತೆಯ ಕನಸು ನನಸಾಗಲಿದೆ ಎಂದರು.

ಪ್ರಸಾದ ಮಂದಿರವನ್ನು ಉದ್ಘಾಟಿಸಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ವೀರಶೈವ ಕಲ್ಯಾಣ ಮಂದಿರ ಸಮಾಜದ ಆಸ್ತಿಯಾಗಿ ಶಕ್ತಿಯಾಗಿ ಬೆಳೆದಿದೆ. ಶಿವಮೊಗ್ಗ ನಗರದಲ್ಲಿ ಕಲ್ಯಾಣ ಮಂಟಪಗಳೇ ಇಲ್ಲದ ಸಂದರ್ಭದಲ್ಲಿ ನಿರ್ಮಾಣವಾದ ವೀರಶೈವ ಕಲ್ಯಾಣ ಮಂದಿರಕ್ಕೆ ಮಾಜಿ ಪ್ರಧಾನ ಅಟಲ್ ಬಿಹಾರಿ ವಾಜಪೇಯಿಯವರು ಭೇಟಿ ನೀಡಿದ ದಾಖಲೆಯಿದೆ. ಇಂದು ನೂತನ ಸಾಂಸ್ಕೃತಿಕ ಭವನ ಉದ್ಘಾಟನೆಯಾಗಿದ್ದು ಸರಕಾರದ ನೆರವಿನೊಂದಿಗೆ ಸಮಾಜದವರು ಕೊಡುಗೆಯೂ ಇದೆ ಎಂದರು.

ನೂತನ ಕೊಠಡಿಗಳನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿ, ಸಭಾಭವನಕ್ಕೆ ತಮ್ಮ ಮಾತೋಶ್ರೀ ಮೈತ್ರಾದೇವಿಯವರ ನಾಮಕರಣ ಮಾಡಿದ್ದಕ್ಕೆ ತಮ್ಮ ಕುಟುಂಬದ ಪರವಾಗಿ ಅಭಿನಂದನೆ ಸಲ್ಲಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ಮಾತನಾಡಿದರು. ಯಡಿಯೂರು ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಮಳಲಿಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿ ತಮ್ಮ ಒಡಲಾಳದ ನುಡಿಗಳನ್ನು ನುಡಿದರು.

ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ ಮಾತನಾಡಿ ಅಂದಿನ ಹಿರಿಯರು ದೂರದೃಷ್ಟಿಯಿಂದ ಮಾಡಿದ ಕಾರ್ಯಗಳು ಇಂದು ಫಲಕಾರಿಯಾಗುತ್ತಿವೆ ಎಂದರು.

ವೀರಶೈವ ಕಲ್ಯಾಣ ಮಂದಿರದ ಗೌರವ ಕಾರ್ಯದರ್ಶಿ ಎನ್.ಜೆ.ರಾಜಶೇಖರ (ಸುಭಾಷ್) ಪ್ರಾಸ್ತಾವಿಕವಾಗಿ ಮಾತನಾಡಿ, 1959ರಲ್ಲಿ ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ವೀರಶೈವ ಕಲ್ಯಾಣ ಮಂದಿರಕ್ಕೆ ಅಡಿಗಲ್ಲು ಹಾಕಿದ್ದರು. ಮುಂದಿನ ಕಲ್ಯಾಣ ಮಂದಿರದ ಎಲ್ಲ ಕಾರ್ಯಗಳೂ ಪ್ರಸ್ತುತ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆದಿದ್ದು ಕಲ್ಯಾಣ ಮಂದಿರಕ್ಕೂ ಶ್ರೀ ರಂಭಾಪುರಿ ಪೀಠಕ್ಕೂ ಅವಿನಾಭಾವ ಸಂಬಂಧವಿದೆ ಎಂದು ತಿಳಿಸಿ ವೀರಶೈವ ಕಲ್ಯಾಣ ಮಂದಿರ ಬೆಳೆದು ಬಂದ ವಿವಿಧ ಹಂತಗಳನ್ನು ಸವಿಸ್ತಾರವಾಗಿ ತಿಳಿಸಿದರು.


ಗ್ರಾಮಾಂತರ ಶಾಸಕ ಅಶೋಕ ನಾಯಕ, ಶಿವಮೊಗ್ಗ ನಗರದ ಮಹಾಪೌರ ಶಿವಕುಮಾರ್, ಮಾಜಿ ಮಹಾಪೌರರಾದ ಸುನಿತಾ ಅಣ್ಣಪ್ಪ, ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಜಿ.ನಾಗರಾಜ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಸೇರಿದಂತೆ ಎಸ್.ಮಲ್ಲೇಶಪ್ಪ, ಕೆ.ಎಸ್.ತಾರಾನಾಥ, ಆಶಾ ಚಂದ್ರಪ್ಪ ಹಾಗೂ ಎನ್.ಡಿ.ವಿ.ಹಾಸ್ಟೆಲ್ ಟ್ರಸ್ಟನ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಅ.ಭಾ.ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಎನ್.ಸಜ್ಜನ್ ಸ್ವಾಗತಿಸಿದರು. ಪಿ.ಎಸ್.ಹಾಲಸ್ವಾಮಿ ನಿರೂಪಿಸಿದರು. ಜಿಲ್ಲಾ ವೀರಶೈವ ಜಂಗಮ ಅರ್ಚಕ ಪುರೋಹಿತರ ಸಂಘದವರಿಂದ ವೇದಘೋಷ, ವೀರಶೈವ ಜಂಗಮ ಸಮಾಜದ ಮಹಿಳಾ ಸದಸ್ಯರಿಂದ ಪ್ರಾರ್ಥನೆ ಜರುಗಿತು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!