ಸಮಾಜಘಾತುಕ ಶಕ್ತಿಗಳನ್ನು ಸೆರೆಹಿಡಿಯಲು ಶಿವಮೊಗ್ಗಕ್ಕೆ ಬಂತು 7 ಡ್ರೋನ್ ಕ್ಯಾಮೆರಾ ಇರುವ 4 ತಂಡ ! ನಿಧಾನವಾಗಿ ಸಹಜ ಸ್ಥಿತಿಯತ್ತ ಮಲೆನಾಡು

0
586

ಶಿವಮೊಗ್ಗ: ಕಳೆದ ನಾಲ್ಕು ದಿನಗಳಿಂದ ಉದ್ವಿಗ್ನಗೊಂಡಿದ್ದ ಶಿವಮೊಗ್ಗ ಶಾಂತವಾಗಿದ್ದು, ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ.

ಯುವಕ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಕಳೆದ ನಾಲ್ಕು ದಿನಗಳಿಂದಲೂ ಗಲಭೆ, ಗಲಾಟೆ, ವಾಹನಗಳಿಗೆ ಬೆಂಕಿ ಹಚ್ಚುವುದು, ಆಸ್ತಿಪಾಸ್ತಿ ನಷ್ಟ, ರಾಜಕೀಯ ಹೇಳಿಕೆಗಳಿಂದ ಹೈರಾಣಗೊಂಡಿದ್ದ ನಗರದ ಪರಿಸ್ಥಿತಿ ಈಗ ಹತೋಟಿಗೆ ಬಂದಿದೆ.

ಆದರೂ ಕೂಡ ಕರ್ಫ್ಯೂವನ್ನು ಮತ್ತೆರಡು ದಿನಗಳ ಕಾಲ ಮುಂದುವರೆಸಿದ್ದು ಪೊಲೀಸ್ ಬಿಗಿ ಬಂದೋಬಸ್ತ್ ಹೆಚ್ಚಿಸಲಾಗಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಕರ್ಫ್ಯೂ ವಿಧಿಸಿದ್ದರಿಂದ ಇಡೀ ಶಿವಮೊಗ್ಗ ನಗರದಲ್ಲಿ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದ್ದವು. ಮೆಡಿಕಲ್ ಶಾಪ್, ಆಸ್ಪತ್ರೆ, ಪೆಟ್ರೋಲ್ ಬಂಕ್, ಹಾಲಿನ ಅಂಗಡಿ ಸೇರಿದಂತೆ ಮತ್ಯಾವುದೇ ರೀತಿಯ ಅಂಗಡಿಗಳು ತೆರೆದಿರಲಿಲ್ಲ. ಗಾಂಧಿ ಬಜಾರ್, ಎನ್.ಟಿ. ರಸ್ತೆ, ಓ.ಟಿ. ರಸ್ತೆ, ಸೀಗೇಹಟ್ಟಿ, ಲಷ್ಕರ್ ಮೊಹಲ್ಲಾ, ಕ್ಲಾರ್ಕ್ ಪೇಟೆ, ಭಾರತೀ ಕಾಲೋನಿ ಸೇರಿದಂತೆ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ಜನರ ಓಡಾಟವೇ ಇರಲಿಲ್ಲ. ಸಾರ್ವಜನಿಕರು ಮನೆಯಿಂದ ಹೊರಬರುತ್ತಿರಲಿಲ್ಲ. ಪೊಲೀಸ್ ವಾಹನಗಳ ಓಡಾಟ ಬಿಟ್ಟರೆ ಹಳೆ ಶಿವಮೊಗ್ಗ ಭಾಗದಲ್ಲಿ ಸಂಪೂರ್ಣ ಬಂದ್ ವಾತಾವರಣ ಇತ್ತು.

ದುರ್ಗಿಗುಡಿ, ಕುವೆಂಪುರಸ್ತೆ, ಸವಳಂಗರಸ್ತೆ, ಆಲ್ಕೊಳ ರಸ್ತೆ, ಮುಂತಾದಕಡೆ ಜನರ ಓಡಾಟ ವಿರಳವಾಗಿತ್ತು. ಅಗತ್ಯ ಕೆಲಸಗಳಿಗಷ್ಟೇ ದ್ವಿಚಕ್ರವಾಹನ ಸವಾರರು ಪ್ರಯಾಣಿಸುತ್ತಿದ್ದುದು ಕಂಡುಬಂದಿತು. ಕೆಲ ಆಟೋಗಳ ಸಂಚಾರವಿದ್ದಿದ್ದರಿಂದ ಸಾರ್ವಜನಿಕರಿಗೆ ಅನುಕೂಲವಾಗಿತ್ತು. ಅಲ್ಲಲ್ಲಿ ಟೀ ಗೂಡಂಗಡಿಗಳು ತೆರೆದಿದ್ದು ಕಂಡುಬಂದಿತು. ಒಟ್ಟಾರೆ ಇಡೀ ಶಿವಮೊಗ್ಗ ನಗರ ಶಾಂತ ಸ್ಥಿತಿಯತ್ತ ಸಾಗಿರುವುದು ಕಂಡುಬಂದಿದೆ.

ಪೊಲೀಸ್ ಬಿಗಿಬಂದೋಬಸ್ತ್:

ಶಿವಮೊಗ್ಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಇನ್ನಷ್ಟು ಬಿಗಿ ಬಂದೋಬಸ್ತ್ ಗೆ ಕ್ರಮ ಕೈಗೊಂಡಿದ್ದಾರೆ.

ಈಗಾಗಲೇ ಪರಿಸ್ಥಿತಿಯನ್ನು ನಿಯಂತ್ರಿಸಲು ಮೂವರು ಎಸ್.ಪಿ., ಓರ್ವ ಹೆಚ್ಚುವರಿ ಎಸ್.ಪಿ., 12 ಡಿವೈಎಸ್ ಪಿ, 39 ಪಿ.ಐ., 54 ಪಿಎಸ್ ಐ 48 ಎಎಸ್ ಐ, 819 ಪಿಸಿ, 24 ಕೆ ಎಸ್ ಆರ್ ಪಿ ತುಕಡಿಗಳು, 10 ಡಿಎಆರ್ ತುಕಡಿ, 1 ಆರ್.ಎ.ಎಫ್ ತುಕಡಿಗಳನ್ನು ನಿಯೋಜಿಸಲಾಗಿತ್ತು.

ಇಂದು ಎಎನ್ ಎಫ್ ತಂಡ ನಗರಕ್ಕಾಗಮಿಸಿದ್ದು, ಬಂದೋಬಸ್ತ್ ಕಾರ್ಯದಲ್ಲಿ ತೊಡಗಿದೆ. ಪೊಲೀಸರು ಹಗಲು ರಾತ್ರಿ ಕಣ್ಗಾವಲು ಕಾಯುತ್ತಿದ್ದು, ಶಾಂತಿ ಸುವ್ಯವಸ್ಥೆಯನ್ನು ಕಾಪಾಡುತ್ತಿದ್ದಾರೆ.

7 ಡ್ರೋಣ್ ಕ್ಯಾಮೆರಾ ಬಳಕೆ :

ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ದುಷ್ಕರ್ಮಿಗಳ ಚಲನವಲನ ಗಮನಿಸಲು 7 ಡ್ರೋಣ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಇದಕ್ಕಾಗಿ 4 ತಂಡಗಳನ್ನು ಕೇರಳ, ಮಂಡ್ಯ, ಉತ್ತರ ಕನ್ನಡ, ಕರಾವಳಿ ರಕ್ಷಣಾ ಪಡೆಯ 20ಕ್ಕೂ ಹೆಚ್ಚು ಪೊಲೀಸರ ತಂಡ ಆಗಮಿಸಿದ್ದು, ಶಿವಮೊಗ್ಗ ನಗರವನ್ನು ಗ್ರೌಂಡ್ ಕಣ್ಗಾವಲಲ್ಲಿ ಪರಿಶೀಲನೆ ಮಾಡಲಿದೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಮಾಧ್ಯಮದವರ ಜೊತೆ ಮಾತನಾಡಿ, ಪರಿಸ್ಥಿತಿ ಹತೋಟಿಯಲ್ಲಿದೆ. ಆದರೂ ಸಹ ಅಹಿತಕರ ಘಟನೆಗಳ ತಡೆಗೆ ಮತ್ತು ಪರಿಶೀಲಿಸಲು ರಾಜ್ಯದ ವಿವಿಧ ಕಡೆಗಳಿಂದ 7 ಡ್ರೋಣ್ ಕ್ಯಾಮೆರಾಗಳನ್ನು ತರಿಸಲಾಗಿದೆ. ವಿಶೇಷ ಕಟ್ಟೆಚ್ಚರ ವಹಿಸಲಾಗಿದೆ. ಡ್ರೋಣ್ ಕ್ಯಾಮೆರಾಗಳನ್ನು ಎಲ್ಲೆಲ್ಲಿ ಬಳಸಬೇಕು ಎನ್ನುವುದನ್ನು ನಿರ್ಧರಿಸಲಾಗುವುದು. ಒಟ್ಟಾರೆ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಮತ್ತಿಬ್ಬರು ವಶಕ್ಕೆ:

ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯವರೆಗೆ 6 ಜನರನ್ನು ಬಂಧಿಸಲಾಗಿತ್ತು. ಇಂದು ಮತ್ತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದಾರೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ:

ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ದೊಡ್ಡಪೇಟೆ ಠಾಣೆ ಹಾಗೂ ತುಂಗಾ ನಗರ ಠಾಣೆ ವ್ಯಾಪ್ತಿಗೆ ಇಬ್ಬರು ಹಾಗೂ ಪ್ರತಿ ಠಾಣೆಗೆ ಒಬ್ಬರಂತೆ 7 ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ ಮಾಡಲಾಗಿದೆ. ದೊಡ್ಡಪೇಟೆ ಠಾಣೆ ವ್ಯಾಪ್ತಿಗೆ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ರವಿಚಂದ್ರ ನಾಯಕ್, ಶಿವಮೊಗ್ಗ ವೈದ್ಯಕೀಯ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಶಿವಕುಮಾರ್, ಕೋಟೆ ಠಾಣೆ ವ್ಯಾಪ್ತಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೊಟ್ರೇಶ್, ತುಂಗಾ ನಗರ ಠಾಣೆ ವ್ಯಾಪ್ತಿಗೆ ಮಹಾನಗರ ಪಾಲಿಕೆ ಉಪ ಆಯುಕ್ತ ಪ್ರಮೋದ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ವಿನೋಬ ನಗರ ಠಾಣೆಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್ ಕುಮಾರ್ ಅವರುಗಳನ್ನು ನೇಮಕ ಮಾಡಲಾಗಿದೆ.

ಸಂಸದರಿಂದ ಧನ್ಯವಾದ:

ಹರ್ಷ ಹತ್ಯೆ ಪ್ರಕರಣ ನಡೆದು 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧನ ಮಾಡಿದ ಪೊಲೀಸರಿಗೆ ಸಂಸದ ಬಿ.ವೈ. ರಾಘವೇಂದ್ರ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ದುಸ್ಥಿತಿ ನಮ್ಮ ಕಾರ್ಯಕರ್ತರಿಗೆ ಬರಬಾರದು. ಶಿವಮೊಗ್ಗದಲ್ಲಿ ಇಂತಹ ದುರ್ಘಟನೆ ಎಂದಿಗೂ ಸಂಭವಿಸಬಾರದು ಎಂದು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here