ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನು ಅರಿವು-ನೆರವು ತಲುಪಬೇಕು : ನ್ಯಾ. ಮುಸ್ತಫಾ ಹುಸೇನ್

0
346

ಶಿವಮೊಗ್ಗ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಕಟ್ಟಕಡೆಯ ವ್ಯಕ್ತಿಗೂ ಕಾನೂನು ಅರಿವು, ನೆರವು ಮತ್ತು ಶೀಘ್ರನ್ಯಾಯವನ್ನು ದೊರಕಿಸಬೇಕೆಂದ ಉದ್ದೇಶದಿಂದ ಸಮಾಜದ ಕೊಂಡಿಯಾಗಿರುವ ಅಂಚೆ ಇಲಾಖೆ ಸಹಯೋಗದೊಂದಿಗೆ ಜನಸಾಮಾನ್ಯರಿಗೆ ಮಾಹಿತಿ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲರ ಸಹಕಾರದಿಂದ ಇದು ಯಶಸ್ಸು ಕಾಣಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಮುಸ್ತಫಾ ಹುಸೇನ್.ಎಸ್.ಎ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಅಂಚೆ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶ ಹಾಗೂ ಲೋಕ್ ಅದಾಲತ್‍ನಿಂದ ಆಗುವ ಪ್ರಯೋಜನೆಗಳ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವ ಭಿತ್ತಿಪತ್ರಗಳ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದ ರಾಜ್ಯ ನೀತಿಯ ನಿರ್ದೇಶಕ ತತ್ವವು ಜನಸಾಮಾನ್ಯರಿಗೆ ಕಾನೂನಿನ ಅರಿವು-ನೆರವು ನೀಡುವಂತೆ ಸೂಚಿಸಿದ್ದು, ಇದೇ ಉದ್ದೇಶದಿಂದ 1987 ರಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ರಚಿತವಾಗಿ ಜನ ಸಾಮಾನ್ಯರಿಗೆ ಉಚಿತ ಕಾನೂನು ಅರಿವು ಮತ್ತು ನೆರವು ಹಾಗೂ ಶೀಘ್ರ ನ್ಯಾಯದಾನ ಒದಗಿಸಲಾಗುತ್ತಿದೆ. ಜನ ಸಾಮಾನ್ಯರಿಗೆ ಕಾನೂನು ಬಗ್ಗೆ ಅರಿವನ್ನುಟು ಮಾಡಿ ಉಚಿತ ಕಾನೂನು ನೆರವು ಮತ್ತು ಸಲಹೆ ನೀಡುವುದು ಹಾಗೂ ಲೋಕ್ ಅದಾಲತ್ ಮೂಲಕ ನ್ಯಾಯಾಲಯದಲ್ಲಿ ಅಥವಾ ಇತರೆ ಕಚೇರಿಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗುತ್ತಿದ್ದು ಜನರು ಇದರ ಉಪಯೋಗ ಪಡೆಯಬೇಕು ಎಂದರು.

ನಾಲ್ಸಾ ಮೊಬೈಲ್ ಆಪ್ ಮೂಲಕ ಸಹಾಯ :

ಇದೀಗ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನು ಅರಿವು ಮತ್ತು ಇದರ ಉಚಿತ ಸೌಲಭ್ಯಗಳು ತಲುಪಬೇಕೆಂಬ ಉದ್ದೇಶದಿಂದ ರಾಷ್ಟ್ರಾದ್ಯಂತ ಅಂಚೆ ಇಲಾಖೆಯ ಸಹಯೋಗದೊಂದಿಗೆ ಈ ಬಗ್ಗೆ ಮಾಹಿತಿ ನೀಡುತ್ತಿದೆ. ಪ್ರತಿ ಅಂಚೆ ಕಚೇರಿಗಳಲ್ಲಿ ಭಿತ್ತಿಪತ್ರ ಮೂಲಕ ಕಾನೂನು ಸೇವಾ ಪ್ರಾಧಿಕಾರ ಮತ್ತು ಲೋಕ ಅದಾಲತ್ ಕುರಿತು ಮಾಹಿತಿ ಹಾಗೂ ಸಮಾಜದ ಸಂಪರ್ಕ ಸೇತುವಾಗಿರುವ ಪೋಸ್ಟ್ ಮ್ಯಾನ್‍ಗಳಿಗೆ ನಾಲ್ಸಾ ಮೊಬೈಲ್ ಆ್ಯಪ್ (NALSA mobile app) ನೀಡಿ, ಅವರ ಮೂಲಕ ಅಗತ್ಯವಿರುವವರಿಗೆ ಪ್ರಾಧಿಕಾರದ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸುವ ಪ್ರಯತ್ನ ಮಾಡುತ್ತಿದೆ. ಪೋಸ್ಟ್‍ಮ್ಯಾನ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಂಡು ತರಬೇತಿ ಪಡೆದು ಹಳ್ಳಿ ಹಳ್ಳಿ, ಬೀದಿ ಬೀದಿಗಳಲ್ಲಿ ಈ ಅರಿವನ್ನು ಹಂಚಬೇಕೆಂದು ಕರೆ ಅವರು ನೀಡಿದರು.

ಪ.ಜಾ, ಪ.ಪಂ ಸೇರಿದದವರು, ಮಾನಸಿಕ ಇತರೆ ನ್ಯೂನ್ಯತೆ ಹೊಂದಿರುವವರು, ಮಹಿಳೆಯರು, ಮಕ್ಕಳು, ಸಂತ್ರಸ್ತರು, ದೌರ್ಜನ್ಯಕ್ಕೊಳಗಾದವರು, ವಾರ್ಷಿಕ ಆದಾಯ ರೂ.3 ಲಕ್ಷದೊಳಗೆ ಇರುವವರು ಹಾಗೂ ಇತರೆ ಯಾವುದೇ ಕಾನೂನಿನ ಅಡಿಯಲ್ಲಿ ಉಚಿತ ಕಾನೂನು ಸಲಹೆ ಮತ್ತು ನೆರವನ್ನು ಪಡೆಯಲು ಅರ್ಹ ವ್ಯಕ್ತಿಗಳು ತಮ್ಮ ಸಮೀಪದ ನ್ಯಾಯಾಲಯದ ಆವರಣದಲ್ಲಿರುವ ತಾಲ್ಲೂಕು ಸೇವಾ ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಉಚಿತ ಕಾನೂನು ಸಲಹೆ ಮತ್ತು ನೆರವನ್ನು ಪಡೆಯಬಹುದು. ಹಾಗೂ ಪ್ರಾಧಿಕಾರದ ಟೋಲ್‍ಫ್ರೀ ಸಂಖ್ಯೆ : 1800-425-90900 ಅತವಾ 080-22111730 ಗೆ ಕರೆ ಮಾಡಿ ಉಚಿತ ಕಾನೂನು ಸಲಹೆ ಮತ್ತು ನೆರವನ್ನು ಪಡೆಯಬಹುದು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್. ಪ್ರಾಸ್ತಾವಿಕವಾಗಿ ಮಾತನಾಡಿ, ನವದೆಹಲಿಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಹೋಬಳಿ ಮಟ್ಟದಿಂದ ಹಿಡಿದು ಎಲ್ಲ ಅಂಚೆ ಇಲಾಖೆಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದಲ್ಲಿ ದೊರೆಯುವ ಸೌಲಭ್ಯಗಳನ್ನು ತಿಳಿಸುವ ಭಿತ್ತಿಪತ್ರ ಪ್ರದರ್ಶನ ಹಾಗೂ ಪೋಸ್ಟ್‍ಮ್ಯಾನ್‍ಗಳಿಗೆ ನಾಲ್ಸಾ(ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ) ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ತಮ್ಮ ಗಮನಕ್ಕೆ ಬರುವ ಅಗತ್ಯವಿರುವವರಿಗೆ ಉಚಿತ ಕಾನೂನು ನೆರವು ಹಾಗೂ ಕಾನೂನು ಸೇವಾ ಪ್ರಾಧಿಕಾರಗಳಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ ಎಲ್ಲರೂ ಇದರ ಸದುಪಯೋಗ ಪಡೆಯಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಅಂಚೆ ಇಲಾಖೆ ಅಧೀಕ್ಷಕ ಜಿ. ಹರೀಶ್ ಮಾತನಾಡಿ, ನಮ್ಮ ಪೋಸ್ಟ್ ಮ್ಯಾನ್‍ಗಳು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು ಅವರಿಗೆ ಸಮುದಾಯಗಳಲ್ಲಿನ ಸಮಸ್ಯೆಗಳ ಅರಿವು ಇರುತ್ತದೆ. ಇದೀಗ ರಾಷ್ಟ್ರೀಯ ಸೇವಾ ಕಾನೂನು ಪ್ರಾಧಿಕಾರದಿಂದ ಹೆಚ್ಚುವರಿಯಾಗಿ ನೀಡಿರುವ ಈ ಜವಾಬ್ದಾರಿಯನ್ನು ಸಹ ಅವರು ಉತ್ತಮವಾಗಿ ನಿರ್ವಹಿಸಲಿದ್ದಾರೆಂಬ ಭರವಸೆ ಇದೆ ಎಂದ ಅವರು ನಮ್ಮ ಜಿಲ್ಲೆಯಲ್ಲಿ 1500 ಸಿಬ್ಬಂದಿಗಳು ಇದ್ದು, ಹೆಚ್ಚಿನ ಸಂಖ್ಯೆಯ ಸಿಬ್ಬಂದಿಗಳು ಕಾನೂನು ಸೇವಾ ಪ್ರಾಧಿಕಾರದಿಂದ ನೀಡುವ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು, ತರಬೇತಿ ಪಡೆಯಲು ಸಹಕರಿಸುವುದಾಗಿ ತಿಳಿಸಿದರು.

ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ದೇವೇಂದ್ರಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನ ಅಂಚೆ ಕಚೇರಿ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here