ತೀರ್ಥಹಳ್ಳಿ: ಸರಳ ವಾಸ್ತು ಚಂದ್ರಶೇಖರ ಗುರೂಜಿ ಅವರ ಹತ್ಯೆ ನಂತರ ಮಂಡಗದ್ದೆ ಸಮೀಪದ ಅವರ ಪತ್ನಿ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಚಂದ್ರಶೇಖರ ಗುರೂಜಿ ಅವರ ಪತ್ನಿ ಅಂಕಿತಾ, ತಾಲೂಕಿನ ಮಂಡಗದ್ದೆ ಸಮೀಪದ ಹೆಮ್ಮಕ್ಕಿ ಗ್ರಾಮದವರು. ಮೂರು ವರ್ಷದ ಹಿಂದೆ ಚಂದ್ರಶೇಖರ ಗುರೂಜಿ ಅವರು ಹೆಮ್ಮಕ್ಕಿ ಅಂಕಿತಾ ಅವರನ್ನ ವಿವಾಹವಾಗಿದ್ದರು. ಕಳೆದ ತಿಂಗಳಷ್ಟೆ ಪತ್ನಿಯೊಂದಿಗೆ ಬಂದು ನಾಲ್ಕು ದಿನ ಉಳಿದಿದ್ದರು. ಪತಿ, ಪತ್ನಿ ಮುಂಬೈನಲ್ಲಿ ನೆಲೆಸಿದ್ದರು.
ಹೆಮ್ಮಕ್ಕಿಗೆ ಬಂದಾಗ ಚಂದ್ರಶೇಖರ ಅವರು ಎಲ್ಲರೊಂದಿಗೆ ಬೆರೆಯುತ್ತಿದ್ದರು. ಪ್ರೀತಿ, ಸ್ನೇಹದಿಂದ ಎಲ್ಲರನ್ನು ಮಾತನಾಡಿಸುತ್ತಿದ್ದರು. ಸ್ವಾಮೀಜಿ ಅಣ್ಣನ ಮಗನ ಮಗ ಮೃತಪಟ್ಟಿದ್ದರಿಂದ ಕಾರ್ಯಕ್ಕಾಗಿ ಹುಬ್ಬಳ್ಳಿಗೆ ಬಂದಿದ್ದರು. ಆ ವೇಳೆ ಈ ದುರ್ಘಟನೆ ನಡೆದಿದೆ. ಚಂದ್ರಶೇಖರ ಗುರೂಜಿಯನ್ನು ಕಳೆದುಕೊಂಡು ದೇವರನ್ನೇ ಕಳೆದುಕೊಂಡಂತಾಗಿದೆ ಎಂದು ಅಂಕಿತಾ ಅವರ ಅಜ್ಜಿ ಸಾವಿತ್ರಮ್ಮ ಕಣ್ಣೀರಾಗಿದ್ದಾರೆ.
ಚಂದ್ರಶೇಖರ ಗುರೂಜಿ ಅವರ ಹತ್ಯೆಯಾದ ವಿಚಾರ ತಿಳಿಯುತ್ತಿದ್ದಂತೆ ಹೆಮ್ಮಕ್ಕಿಯಲ್ಲಿದ್ದ ಅಂಕಿತಾ ಅವರ ತಂದೆ ರಮೇಶ್ ಮತ್ತು ತಾಯಿ ಶೈಲಾ ಅವರು ಹುಬ್ಬಳಿಗೆ ತೆರಳಿದ್ದಾರೆ.
ಅಂಕಿತಾ ಅವರ ಮನೆಯಲ್ಲಿ ನೀರವ ಮೌನ ಆವರಿಸಿದೆ. ಹೆಮ್ಮಕ್ಕಿ ಗ್ರಾಮದಲ್ಲಿ ಗುರೂಜಿಯೊಂದಿಗೆ ಸ್ನೇಹದಿಂದ ಬೆರೆತವರು ಈಗ ಅವರನ್ನು ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ.
Related