ಸರ್ಕಾರಿ ಕೆಲಸ ಎನ್ನುವುದು ಬಹಳ ಒತ್ತಡದ ಕೆಲಸ : ಜಿಲ್ಲಾಧಿಕಾರಿ ಕೆ ಎನ್ ರಮೇಶ್

0
167

ಚಿಕ್ಕಮಗಳೂರು: ಸರ್ಕಾರಿ ಕೆಲಸ ಬಹಳ ಒತ್ತಡದ ಕೆಲಸವಾಗಿದ್ದು, ಕೆಲವು ಸಮಯ ಸಂಧರ್ಭದಲ್ಲಿ ರಜೆಗಳನ್ನು ಪಡೆಯದೇ ಅಧಿಕಾರಿಗಳು ಹಾಗೂ ನೌಕರರು ಕರ್ತವ್ಯ ನಿರ್ವಹಿಸಿರುವ ಉದಾಹರಣೆಗಳು ಬಹಳಷ್ಟಿವೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಎಂದರು.

ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಸಹಯೋಗದಲ್ಲಿ ಗುರುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಮತ್ತು ಜಿಲ್ಲಾ ಸರ್ವೋತ್ತಮ ನಾಗರೀಕ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನಾಗರೀಕ ಸೇವೆಗಳು ಉಕ್ಕಿನ ಕವಚದ ಮಾದರಿಯಲ್ಲಿ ರೂಪುಗೊಂಡಿದ್ದು, ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಭದ್ರಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ. ಆದ್ದರಿಂದ ಸರ್ಕಾರಿ ನೌಕರರ ದಿನಾಚರಣೆ ಸಂಧರ್ಭದಲ್ಲಿ ಸರ್ಕಾರಿ ನೌಕರರ ಜವಾಬ್ದಾರಿ, ಕರ್ತವ್ಯಗಳನ್ನು ನೆನಪಿಸಿಕೊಳ್ಳುತ್ತಾ, ಅವರ ಒಳ್ಳೆ ಕಾರ್ಯಗಳನ್ನು ಸ್ಮರಿಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಸರ್ಕಾರಿ ನೌಕರರು ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದ್ದು, ಕೋವಿಡ್ ಸಮಯದಲ್ಲಿ ಶೇಕಡಾ 99ರಷ್ಟು ರೋಗಿಗಳು ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ ಜಲಜೀವನ್ ಮೀಷನ್ ಶೇಕಡಾ 220 ಭೌತಿಕ ಗುರಿಯನ್ನು ಸಾಧಿಸಿದೆ. ಮುಖ್ಯವಾಗಿ ರಾಜ್ಯದಲ್ಲಿ ಅತಿ ಕಡಿಮೆ ಸಾರ್ವಜನಿಕ ಕುಂದು ಕೊರತೆಗಳ ದೂರನ್ನು ಹೊಂದಿರುವ ಜಿಲ್ಲೆಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್.ಎಲ್.ಭೋಜೇಗೌಡ, ಸರ್ಕಾರಿ ನೌಕರರು ಸಾರ್ವಜನಿಕ ವಲಯ ಹಾಗೂ ರಾಜಕಾರಣಿಗಳಿಂದ ಒತ್ತಡದ ನಡುವೆಯು ಉತ್ತಮ ಕಾರ್ಯಗಳನ್ನು ನಿರ್ವಹಿಸುತ್ತಾ, ಸಪ್ತ ಸಾಗರವನ್ನು ದಾಟಿ ತಮ್ಮ ಗುರಿಯನ್ನು ಮುಟ್ಟಿ, ಸರ್ವೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದರು.

ಸರ್ಕಾರಿ ನೌಕರರಿಗೆ ದುಡಿಯುವ ಶಕ್ತಿ ಕುಂದಿ, ನಿವೃತ್ತಿಯಾದ ನಂತರವು ಅವರು ಆರ್ಥಿಕವಾಗಿ ಸಧೃಡರಾಗಿ ರೂಪುಗೊಳ್ಳುವಂತಹ ವ್ಯವಸ್ಥೆ ನಿರ್ಮಾಣವಾಗಬೇಕು ಎಂದರು.

ವೇತನ ಪರಿಷ್ಕರಣೆ ಹಾಗೂ ಪಿಂಚಣಿ ಸೌಲಭ್ಯದಂತಹ ಸಂವಿಧಾನ ಬದ್ಧವಾದ ಹಕ್ಕನ್ನು ಪಡೆಯಲು ಸರ್ಕಾರಿ ನೌಕರರು ಬೀದಿಗೆ ಇಳಿದು ಹೋರಾಟ ಮಾಡುವಂತಹ ಪರಿಸ್ಥಿತಿ ಸರ್ಕಾರಿ ನೌಕರರಿಗೆ ದೊರಕಿರುವುದು ದುರದೃಷ್ಟಕರ ಎಂದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಸರ್ಕಾರಿ ನೌಕರರು ಕೇವಲ ಸಂಬಳದ ನೆಪ ಮಾತ್ರಕ್ಕೆ ಕರ್ತವ್ಯ ನಿರ್ವಹಿಸದೇ, ಸರ್ಕಾರಿ ಕೆಲಸವನ್ನು ದೇವರ ಕೆಲಸದ ರೂಪದಲ್ಲಿ ಪರಿಗಣಿಸಿ ದೇಶವನ್ನು ಉತ್ತಮ ಪಥದಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್ ಮಾತನಾಡಿ, ಸರ್ಕಾರಿ ನೌಕರರು ಕಾನೂನುಗಳನ್ನು ಅನುಷ್ಠಾನಗೊಳಿಸುವಾಗ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಸಮಾಜದ ವ್ಯವಸ್ಥೆ ರೂಪುಗೊಳ್ಳುತ್ತದೆ ಆದ್ದರಿಂದ ನಾಗರೀಕ ಸೇವೆಯಲ್ಲಿ ತೊಡಗಿರುವವರು ಕೇವಲ ಜನಹಿತ ದೃಷ್ಟಿಯಲ್ಲಿ ಮಾತ್ರ ಕಾರ್ಯ ನಿರ್ವಹಿಸಬೇಕು ಎಂದರು.

ಅಸಾಧ್ಯವಾದಂತಹ ಪರಿಸ್ಥಿತಿಯಲ್ಲಿ ಒತ್ತಡದ ನಡುವೆಯು ಸರ್ಕಾರಿ ನೌಕರರು ಕಾರ್ಯ ನಿರ್ವಹಿಸುತ್ತಾರೆ. ಆದರೆ ಸರ್ಕಾರಿ ನೌಕರರು ಒಂದು ವ್ಯಾಪ್ತಿಗೆ ಒಳಪಟ್ಟು ಪ್ರತ್ಯೇಕ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸದೇ, ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆಯಲ್ಲಿ ತೊಡಗಬೇಕು ಎಂದರು.

ಸಮಾರಂಭದಲ್ಲಿ 2022-22ನೇ ಅವಧಿಗೆ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಸರ್ಕಾರಿ ಅಧಿಕಾರಿಗಳು, ನೌಕರರಿಗೆ ಸರ್ವೋತ್ತಮ ನಾಗರೀಕ ಸೇವಾ ಪ್ರಶಸ್ತಿ ಪ್ರಧಾನ ಮಾಡಲಾಯಿತು.

2022-21ನೇ ಅವಧಿಯಲ್ಲಿ, ಚಿಕ್ಕಮಗಳೂರು ಉಪವಿಭಾಗ ಹಿರಿಯ ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಂಜುನಾಥ್.ಹೆಚ್.ಕೆ, ಜಿಲ್ಲಾ ವಿಜ್ಞಾನ ಸೂಚನಾಧಿಕಾರಿ ಸರಸ ಕೃಷ್ಣ ಕಿರಣ್, ಹಿರಿಯ ಭೂ ವಿಜ್ಞಾನಿ ವಿಂಧ್ಯಾ, ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ವೆಂಕಟೇಶ್, ಕೃಷಿ ಅಧಿಕಾರಿ ಸಿ.ಸುಜಾತ, ಶಿರಸ್ತೇದಾರ್ ಎಸ್.ಶೈಲಶ್ರೀ, ಬೆರಳಚ್ಚುಗಾರರ ಪಾರ್ವತಿ.ಎಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಛೇರಿ ಅಧೀಕ್ಷಕ ಎಂ.ಪಿ.ದೇವಾನಂದ ಜಿಲ್ಲಾ ಸರ್ವೋತ್ತಮ ನಾಗರಿಕ ಸೇವಾ ಪ್ರಶಸ್ತಿಗೆ ಭಾಜನರಾದರು.

2021-22ನೇ ಅವಧಿಯಲ್ಲಿ, ಜಿ.ಪಂ ಉಪಕಾರ್ಯದರ್ಶಿ ಎಂ.ಕಿಶೋರ್, ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕಿ ಡಾ.ಮೀರಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ವೈ. ಸೋಮಶೇಖರ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ.ಸಿ, ಶೃಂಗೇರಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಟರಾಜ್, ಕಸಬಾ ರಾಜಸ್ವ ನಿರೀಕ್ಷಕ ಸತ್ಯನಾರಾಯಣ, ಹಿರಿಯ ನರ್ಸಿಂಗ್ ಅಧಿಕಾರಿ ಎ.ಕೆ.ಅಣ್ಣಮ್ಮ, ಹರಿಹರದಹಳ್ಳಿ ಗ್ರಾ.ಪಂ ಅಭಿವೃದ್ಧಿ ಅದಿಕಾರಿ ಲಕ್ಷ್ಮಣ್.ಪಿ, ಅಮೃತಾಪುರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪವಿತ್ರ ಹಾಗೂ ಉಪವಿಭಾಗಾಧಿಕಾರಿ ಕಛೇರಿ ಶೀಘ್ರಲಿಪಿಗಾರ ಯಶೋಧ.ಡಿ.ಎಸ್ ಪ್ರಶಸ್ತಿಗೆ ಭಾಜನರಾದರು.

ಸಮಾರಂಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ರೂಪ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ದೇವೇಂದ್ರ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here