ಶಿವಮೊಗ್ಗ : ಭದ್ರಾವತಿ ತಾಲ್ಲೂಕಿನ ತಡಸಾ ಗ್ರಾಮದ ಆರೀಫ್ರವರ ಪತ್ನಿಯಾದ 22 ವರ್ಷ ವಯಸ್ಸಿನ ಆಲ್ಮಾಜ್ ಬಾನುರವರು ಇಂದು ಬೆಳಗ್ಗೆ 07.30ಕ್ಕೆ ಶಿವಮೊಗ್ಗ ನಗರದ ಸರ್ಜಿ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳಿಗೆ ಜನನ ನೀಡಿರುವುದು ವಿಶೇಷವಾಗಿದೆ.
ಹೆರಿಗೆಯಾದ ಎರಡು ಗಂಡು, ಎರಡು ಹೆಣ್ಣು ಮಕ್ಕಳು, ಹಾಗೂ ತಾಯಿಯು ಆರೋಗ್ಯವಾಗಿದ್ದಾರೆ. ವೈದ್ಯಕೀಯ ಕ್ಷೇತ್ರದ ಪ್ರಕಾರ, ನಾಲ್ಕು ಮಕ್ಕಳಿಗೆ ಜನ್ಮ ನೀಡುವ ಪ್ರಕರಣಗಳು ತುಂಬಾ ವಿರಳ, 5,12 ಲಕ್ಷ ಜನರಲ್ಲಿ ಒಬ್ಬರು ಮಾತ್ರ ಈ ರೀತಿಯಾಗಿ ನಾಲ್ಕು ಮಕ್ಕಳಿಗೆ ಜನ್ಮ ನೀಡುವುದು ಕಂಡು ಬರುತ್ತದೆ. ಅವಳಿ-ಜವಳಿ, ತ್ರಿವಳಿ ಮತ್ತು ನಾಲ್ಕು ಮಕ್ಕಳಾಗುವುದಕ್ಕೆ ಅನುವಂಶಿಯ ಅಂಶಗಳೇ ಕಾರಣ ಎಂದು ಹೆರಿಗೆ ಮಾಡಿಸಿದ ಸರ್ಜಿ ಆಸ್ಪತ್ರೆಯ ಹಿರಿಯ ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞರಾದ ಡಾ. ಚೇತನಾ ಎನ್.ರವರು ತಿಳಿಸಿದರು.
ಈ ರೀತಿಯಾಗಿ ಹೆರಿಗೆ ಮಾಡಿಸುವುದು ತುಂಬಾ ಸವಾಲಿನ ಸಂದರ್ಭವಾಗಿದ್ದು, ಸಿಝರಿಯನ್ ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ತುಂಬಾ ರಕ್ತಸ್ರಾವವಾಗುವ ಸಂಭವವಿರುತ್ತದೆ. ಇಂತಹ ಸಂದರ್ಭದಲ್ಲಿ ಅರವಳಿಕೆ ತಜ್ಞರಾದ ಮೂರ್ಕಣಪ್ಪರವರ ಸಹಕಾರ ಸಹಾಯವಾಯಿತು. ಹಾಗೂ ಈ ಸಂದರ್ಭದಲ್ಲಿ ಸಹಕಾರ ನೀಡಿದ ಮಕ್ಕಳ ತಜ್ಞ ವೈದ್ಯರಿಗೆ ಹಾಗೂ ಓಟಿ, ಸಿಬ್ಬಂದಿವರಿಗೂ ತಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
ಸರ್ಜಿ ಆಸ್ಪತ್ರೆಯ ನವಜಾತ ಶಿಶುಗಳ ಮತ್ತು ಮಕ್ಕಳ ತಜ್ಞರಾದ ಡಾ. ಅನಿಲ್ .ಬಿ.ಕಲ್ಲೇಶ್ರವರು ಮಾತನಾಡಿ, ನಾಲ್ಕೂ ಮಕ್ಕಳು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ನಾಲ್ಕೂ ಶಿಶುಗಳ ತೂಕ (1.1ಕೆಜಿ, 1.2ಕೆಜಿ, 1.3ಕೆಜಿ ಹಾಗೂ 1.8ಕೆಜಿ) ಹೊಂದಿವೆ. ನಾಲ್ಕೂ ಮಕ್ಕಳಿಗೆ ಅಲ್ಪ ಪ್ರಮಾಣದ ಉಸಿರಾಟದ ತೊಂದರೆಯಿದ್ದು, 2 ಶಿಶುಗಳಿಗೆ ಸಿಪ್ಯಾಪ್ನ್ನು ಅಳವಡಿಸಲಾಗಿದೆ, ಇನ್ನೂ 2 ಶಿಶುಗಳಿಗೆ ಆಕ್ಸಿಜನ್ನ್ನು ನೀಡಲಾಗಿದೆ. ಎಲ್ಲಾ ಶಿಶುಗಳಿಗೆ ತಾಯಿಯ ಎದೆಯ ಹಾಲನ್ನು ನೀಡಲು ಪ್ರಯತ್ನಿಸಲಾಗುತ್ತಿದ್ದು, ಶಿಶುಗಳಿಗೆ ಕೆ.ಎಂ.ಸಿ (ಕಾಂಗೂರು ಮದರ್ ಕೇರ್)ಯನ್ನೂ ಸಹ ನೀಡಲಾಗುತ್ತಿದ್ದು ಎಲ್ಲಾ ಶಿಶುಗಳು ಆರೋಗ್ಯವಾಗಿವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಧನಂಜಯ ಸರ್ಜಿಯವರು, ನಮ್ಮ ಆಸ್ಪತ್ರೆಯಲ್ಲಿ ಪ್ರಪ್ರಥಮ ಬಾರಿಗೆ ಈ ರೀತಿಯಾಗಿ 4 ಮಕ್ಕಳಿಗೆ ಜನ್ಮ ನೀಡಿರುವುದು ತುಂಬಾ ಸಂತೋಷದ ವಿಷಯ ಹಾಗೂ ಎಲ್ಲಾ ಶಿಶುಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಆ ಶಿಶುಗಳಿಗೆ ನಮ್ಮ ಆಸ್ಪತ್ರೆಯ ವತಿಯಿಂದ ಅತೀ ಕಡಿಮೆ ದರದಲ್ಲಿ ಇವರಿಗೆ ಚಿಕಿತ್ಸೆಯನ್ನು ಒದಗಿಸಿಕೊಡುತ್ತೇವೆ ಎಂದು ಸಹ ತಿಳಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿಯಾದ ಪರುಷೋತ್ತಮ ಕೆ.ಆರ್.ರವರೂ ಸಹ ಉಪಸ್ಥಿತರಿದ್ದರು.