ಸರ್ಫೇಸಿ ಕಾಯ್ದೆ ಜಾರಿ ಮಾಡದಂತೆ ಹಣಕಾಸು ಇಲಾಖೆಗೆ ಸೂಕ್ತ ನಿರ್ದೇಶನ: ಕೇಂದ್ರ ಸಚಿವರ ಭರವಸೆ

0
212

ಚಿಕ್ಕಮಗಳೂರು: ಕಾಫಿ ಬೆಳೆಗಾರರಿಗೆ ಮಾರಕವಾಗಿರುವ ಸರ್ಫೇಸಿ ಕಾಯ್ದೆ ಜಾರಿ ಮಾಡದಿರುವಂತೆ ಹಣಕಾಸು ಇಲಾಖೆಗೆ ಸೂಕ್ತ ಆದೇಶ ಹೊರಡಿಸುವಂತೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸೂಚನೆ ನೀಡಿರುವುದಾಗಿ ಕರ್ನಾಟಕ ಬೆಳೆಗಾರರ ಒಕ್ಕೂಟ ತಿಳಿಸಿದೆ.

ಕರ್ನಾಟಕ ಬೆಳೆಗಾರರ ಒಕ್ಕೂಟ ಇತರೆ ಸಂಘಟನೆಗಳ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿ ಕಾಫಿ ಉದ್ಯಮದ ಸಂಕಷ್ಟಗಳನ್ನು ಮನವರಿಕೆ ಮಾಡಿದ್ದು ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಎಂದು ಒಕ್ಕೂಟ ಹೇಳಿದೆ.

ಕಾಫಿ ಕೃಷಿ ಸಂಕಷ್ಟದಲ್ಲಿದ್ದು, ವಿಶೇಷ ಪ್ಯಾಕೇಜ್ ದೊರಕಿಸಿಕೊಡಬೇಕೆಂದು ಮಾಡಿದ ಮನವಿಗೆ ಮುಂದಿನ ಆಯ-ವ್ಯಯದಲ್ಲಿ ಸೇರ್ಪಡೆಗೊಳಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದಿದೆ.

ಬೆಳೆಗಾರರು ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲದ ಮರುಹೊಂದಾಣಿಕೆಗೆ ಸೂಕ್ತ ಕ್ರಮಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವವದಾಗಿ ಹೇಳಿದ್ದಾರೆ ಎಂದಿದೆ. ಪ್ರಧಾನಮಂತ್ರಿ ಫಸಲ್‌ಭಿಮಾ ಯೋಜನೆಯಲ್ಲಿ ಕಾಫಿ ಕೃಷಿಯನ್ನು ಸೇರ್ಪಡೆಗೊಳಿಸುವಲ್ಲಿ ಪ್ರಯತ್ನಪಡುವುದಾಗಿ ತಿಳಿಸಿದ್ದಾರೆ.

ಕಾಫಿ ಉತ್ಪಾದನೆಯನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ ಕಾಫಿ ಸಂಶೋಧನಾ ಸಂಸ್ಥೆಗಳು ಹೊಸ ತಂತ್ರಜ್ಞಾನ ಬಳಸಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಆದ್ಯತೆ ನೀಡುವಂತೆ ಸಚಿವರಲ್ಲಿ ಮನವಿ ಮಾಡಲಾಗಿದೆ.

ಅರೇಬಿಕಾ ಕಾಫಿ ಬಿಳಿಕಾಂಡಕೊರಕ ರೋಗ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳಲು ಕಾಫಿ ಸಂಶೋಧನಾ ಸಂಸ್ಥೆಗಳಿಗೆ ಶಿಫಾರಸ್ಸು ಮಾಡಲು ಕೋರಲಾಗಿದೆ.

ಕಾಫಿ ಮಂಡಳಿಯನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸದೆ ಕಾಫಿಗೆ ನೋಡೆಲ್ ಅಧಿಕಾರಿಯಾಗಿ ಕೃಷಿ ಇಲಾಖೆಯ ಅಧಿಕಾರಿಗಳನ್ನು ನೇಮಕಗೊಳಿಸುವ ಸಾಧ್ಯತೆಗಳಿವೆ ಒಕ್ಕೂಟ ತಿಳಿಸಿದೆ.

ಪ್ರಕೃತಿ ವಿಕೋಪದಿಂದ ನಷ್ಟವಾದ ಸಂದರ್ಭದಲ್ಲಿ ಕಾಫಿ ಬೆಳೆಗಾರರಿಗೆ ಪ್ರಸ್ತುತ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ನೀಡುತ್ತಿರುವ ಪರಿಹಾರ ಕಡಿಮೆಯಿದ್ದು, ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಬೇಡಿಕೆ ಮುಂದಿಡಲಾಗಿದೆ.

ಎಲ್ಲಾ ಕೃಷಿಕರಿಗೂ ಕೊಡುವ ರಿಯಾಯಿತಿಗಳನ್ನು ಕಾಫಿ ಬೆಳೆಗಾರರಿಗೂ ಕೊಡಲು ಕೃಷಿ ಇಲಾಖೆ ಜೊತೆ ಸಂಪರ್ಕ ಮಾಡಿ, ಸಿಗುವಂತೆ ಆದೇಶ ಮಾಡಲು ಪ್ರಯತ್ನಪಡುವುದಾಗಿ ಭರವಸೆ ಕೊಟ್ಟಿರುವುದಾಗಿ ಒಕ್ಕೂಟ ಹೇಳಿದೆ.

ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಜೋಜೇಗೌಡ, ಉಪಾಧ್ಯಕ್ಷ ಮಹಾಬಲ, ಕಾಫಿ ಮಂಡಳಿ ಕಾರ್ಯದರ್ಶಿ ಡಾ|| ಕೆ.ಜಿ.ಜಗದೀಶ್‌ ನಿಯೋಗದಲ್ಲಿದ್ದರು .ಕಾಫಿ ಮಂಡಳಿಯ ಹಣಕಾಸು ನಿರ್ದೇಶಕ ನರೇಂದ್ರ, ಸಂಶೋಧನಾ ನಿರ್ದೇಶಕ ಸೂರ್ಯಪ್ರಕಾಶ್‌ರಾವ್ ಇದ್ದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ವತಿಯಿಂದ ಅಧ್ಯಕ್ಷರಾದ ಡಾ. ಹೆಚ್.ಟಿ.ಮೋಹನ್‌ಕುಮಾರ್, ಉಪಾಧ್ಯಕ್ಷ, ನಂದಾಬೆಳ್ಳಿಯಪ್ಪ, ಸಂಘಟನಾ ಕಾರ್ಯದರ್ಶಿ ಕೆ.ಕೆ.ವಿಶ್ವನಾಥ್, ಮಾಜಿ ಅಧ್ಯಕ್ಷ ಬಿ.ಎ.ಜಗನ್ನಾಥ್‌ ಸಚಿವರ ಭೇಟಿ ಸಂದರ್ಭದಲ್ಲಿ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here