ಕೊಪ್ಪ: ಮಲೆನಾಡಿಗರ ಜೀವನಾಡಿಯಾಗಿದ್ದ ಸಹಕಾರ ಸಾರಿಗೆ ಬಸ್ ತನ್ನ ಸೇವೆ ನಿಲ್ಲಿಸಿ ಬರೋಬ್ಬರಿ ಎರಡು ವರ್ಷಗಳು ಕಳೆದಿವೆ. ಆರ್ಥಿಕ ನಷ್ಟದ ನೆಪವೊಡ್ಡಿದ್ದ ಸಂಸ್ಥೆಯ ಆಡಳಿತದಿಂದ 300ಕ್ಕೂ ಅಧಿಕ ಕುಟುಂಬಗಳು ಬೀದಿಗೆ ಬಂದಿದ್ದಾವೆ. ಆದರೆ ಬಸ್ಗಳಂತೂ ಮತ್ತೆ ರಸ್ತೆಗಿಳಿಯುವ ಯಾವ ಲಕ್ಷಣವೂ ಕಾಣುತ್ತಿಲ್ಲ.
ಪಟ್ಡಣದ ಕೆಸವೆ ರಸ್ತೆಯಲ್ಲಿರುವ ಸಹಕಾರ ಸಾರಿಗೆ ಸಂಸ್ಥೆಯ ಆಡಳಿತ ವರ್ಗವು ಸಾಲ ಮರು ಪಾವತಿ ಮಾಡದ ಹಿನ್ನಲೆಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿಗಳ ಆದೇಶದಂತೆ ಶ್ರೀರಾಮ್ ಟ್ರಾನ್ಸ್ಪೋರ್ಟ್ ಕಂಪನಿಯು ಕೆಸವೆ ರಸ್ತೆಯ ಸರ್ವೆ ನಂ 97ರಲ್ಲಿರುವ 1 ಎಕರೆ 10 ಗುಂಟೆ ಟಿಸಿಎಸ್ ಸಂಸ್ಥೆಯ ಆಸ್ತಿಯನ್ನು ಕಂಪನಿ ವಶಕ್ಕೆ ತೆಗೆದುಕೊಂಡಿತ್ತು.
ಇದಾದ ಬಳಿಕ ಬಸ್ಗಳೂ ಕೂಡ ಸಂಸ್ಥೆಯ ಕಛೇರಿ ಬಳಿಯೇ ನಿಂತಿದ್ದು, ಕೆಲ ಖದೀಮರು ಬಸ್ಗಳ ಬಿಡಿ ಭಾಗಗಳನ್ನು ಹಗಲು ರಾತ್ರಿ ಎನ್ನದೆ ಹೊತ್ತೊಯ್ಯುತ್ತಿದ್ದಾರೆ. ಸಂಸ್ಥೆಗೆ ಶ್ರೀರಾಮ್ ಫೈನಾನ್ಸ್ ಬೀಗ ಜಡಿದ ಬಳಿಕ ಸ್ಥಳೀಯರೊಬ್ಬರನ್ನು ಸೆಕ್ಯುರಿಟಿಗಾಗಿ ನೇಮಕ ಮಾಡಿದೆ ಆದರೆ ಅವರ ಕಣ್ತಪ್ಪಿಸಿ ಕೆಲ ಖದೀಮರು ಕಾಂಪೌಂಡ್ ಹಾರಿ ಒಳ ಬಂದು ಬಿಡಿ ಭಾಗಗಳನ್ನು ಕದ್ದೊಯ್ಯುತ್ತಿದ್ದಾರೆ. ಹೀಗೆ ಕದ್ದಿಯುವಾಗ ರೆಡ್ ಹ್ಯಾಂಗ್ ಆಗಿ ಸಿಕ್ಕಿಬಿದ್ದು ತಪ್ಪಿಸಿಕೊಂಡು ಓಡಿಹೊಗಿದ್ದಾರೆ.
ಇತ್ತ ಬಸ್ಗಳಿಗೂ ನಮಗೂ ಯಾವುದೇ ಸಂಬಂಧ ಇಲ್ಲ, ನಾವು ಕೇವಲ ಸಂಸ್ಥೆಗೆ ಸೇರಿದ 1 ಎಕರೆ 10 ಗುಂಟೆ ಜಾಗವನ್ನಷ್ಟೇ ವಶಪಡಿಸಿಕೊಂಡಿದ್ದು ಬಸ್ಗಳ ಜವಾಬ್ದಾರಿ ಟಿಸಿಎಸ್ ಸಂಸ್ಥೆಗೆ ಬಿಟ್ಟಿದ್ದು ಎಂದು ಶ್ರೀರಾಮ್ ಫೈನಾನ್ಸ್ ಹೇಳಿದೆ. ಆದರೆ ಸಹಕಾರ ಸಾರಿಗೆ ಸಂಸ್ಥೆಯ ಪರವಾಗಿ ಯಾರೂ ಕೂಡ ಪೊಲೀಸ್ ಠಾಣೆಯಲ್ಲಿ ಲಿಖಿತವಾಗಿ ದೂರು ನೀಡಿಲ್ಲ. ಕೇವಲ ಮೌಖಿಕವಾಗಿ ನೀಡಿದ ದೂರಿನ ಆಧಾರದ ಮೇಲೆ ವೀಡಿಯೋದಲ್ಲಿದ್ದ ಇಬ್ಬರನ್ನು ಕರೆದು ವಿಚಾರಣೆ ಮಾಡಿದ್ದು, ಮದ್ಯಪಾನ ಮಾಡಲು ಅಲ್ಲಿಗೆ ಬಂದವರೆಂದು ಹೇಳಿದ್ದಾರೆ. ಪೊಲೀಸರೂ ಅವನನ್ನು ಬಿಟ್ಟು ಕಳುಹಿಸಿದ್ದಾರೆ. ಒಟ್ಟಿನಲ್ಲಿ ಸಂಸ್ಥೆಯ ಬೇಜವಾಬ್ದಾರಿತನಕ್ಕೆ ಕಾರ್ಮಿಕರ ಬೆವರಿನ ಹನಿಗೆ ಬೆಲೆ ಇಲ್ಲದಂತಾಗಿದ್ದು ಬಿಡಿ ಭಾಗಗಳು ಕಳ್ಳರ ಪಾಲಾಗುತ್ತಿವೆ.
ನಾವು ಕೇವಲ 1 ಎಕರೆ 10 ಗುಂಟೆ ಜಾಗವನ್ನಷ್ಟೇ ವಶಪಡಿಸಿಕೊಂಡಿದ್ದೇವೆ. ಶ್ರೀರಾಮ್ ಫೈನಾನ್ಸ್ ಗೂ ಸಂಸ್ಥೆಗೆ ಸೇರಿದ ಬಸ್ ಗಳಿಗೂ ಯಾವುದೇ ಸಂಬಂಧ ಇಲ್ಲ, ಈಗಾಗಲೇ ನಾವು ಸೆಕ್ಯೂರಿಯನ್ನೂ ನೇಮಕ ಮಾಡಿದ್ದು ಅವರ ಕಣ್ತಪ್ಪಿಸಿ ಕಳ್ಳತನ ನಡೆಯುತ್ತಿದೆ. ಈ ಕುರಿತು ದೂರು ನೀಡಲು ಸಂಸ್ಥೆಯ ಪದಾಧಿಕಾರಿಗಳು ಮುಂದೆ ಬರಬೇಕು ಎಂದು ಶ್ರೀರಾಮ್ ಫೈನಾನ್ಸ್ ವ್ಯವಸ್ಥಾಪಕ ಸಂತೃಪ್ತ್ ಹೇಳಿದ್ದಾರೆ.
ಏನಿದು ಪ್ರಕರಣ?
ಸಂಸ್ಥೆಯ ಅಧ್ಯಕ್ಷರಾದ ಈ. ಎಸ್. ಧರ್ಮಪ್ಪ ಹಾಗೂ ಆಡಳಿತ ನಿರ್ದೆಶಕರಾಗಿದ್ದ ಗಾಡ್ವಿನ್ ಜಯಪ್ರಕಾಶ್ ಶ್ರೀರಾಮ್ ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಕೆಸವೆ ರಸ್ತೆಯಲ್ಲಿರುವ ಸಂಸ್ಥೆಯ ಆಸ್ತಿಯನ್ನು ಆಧಾರವಾಗಿ ನೀಡಿ 1 ಕೋಟಿ 20 ಲಕ್ಷ ಸಾಲವನ್ನು ಪಡೆದಿದ್ದರು. 2019ರ ನಂತರ ಸಾಲವನ್ನು ಮರು ಪಾವತಿ ಮಾಡಿರಲಿಲ್ಲ. ಕಂಪನಿಯೂ ಅವರಿಗೆ ನೋಟಿಸ್ ನೀಡಿದ್ದರೂ ಸಹ ಬಡ್ಡಿ ಸಹಿತ 1,31,41,210 ರೂಪಾಯಿ ಮೊತ್ತವನ್ನು ಮರು ಪಾವತಿ ಮಾಡಲು ಹಿಂದೇಟು ಹಾಕಿದ್ದ ಕಾರಣ, ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಂಸ್ಥೆಯ ಜಾಗವನ್ನು ಶ್ರೀರಾಮ್ ಫೈನಾನ್ಸ್ ಮುಟ್ಟುಗೋಲು ಹಾಕಿಕೊಂಡಿದ್ದು ಅಲ್ಲದೆ ಅರ್ಥಿಕ ಸಂಕಷ್ಟ ದಿಂದ ಬಸ್ ಗಳು ಸಹ ಮೂಲೆ ಸೇರಿವೆ.
ಈ ಬಸುಗಳ ಬಿಡಿಭಾಗಗಳ ಬಗ್ಗೆ ಜಿಲ್ಲಾ ಟ್ರಾನ್ಸ್ ಫೋರ್ಟ್ ಮಜ್ದೂರ್ ಸಂಘದ ಅಧ್ಯಕ್ಷ ಸಂಜೀವರವರು ಮಾತನಾಡಿ ಬಿಡಿಭಾಗಗಳ ಕಳ್ಳತನ ನಡೆದಿರುವುದು ನಮ್ಮ ಗಮನಕ್ಕೆ ಬಂದಿದ್ದು, ಈ ಕುರಿತು ದೂರು ನೀಡಿದ್ದೇವೆ. ಸಭೆ ಮಾಡಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.