23.2 C
Shimoga
Sunday, November 27, 2022

ಸಾಂಪ್ರದಾಯಿಕ ಕೃಷಿಯಿಂದ ವಿಮುಖರಾಗುತ್ತಿರುವುದು ಆತಂಕಕಾರಿ ಬೆಳವಣಿಗೆ; ಮೂಲೆಗದ್ದೆ ಶ್ರೀಗಳು


ಹೊಸನಗರ: ಪರಿಸರದ ಮೇಲಿನ ದೌರ್ಜನ್ಯ, ಅಧಿಕ ಇಳುವರಿಯ ಮೇಲಿನ ಆಸೆಗೆ ರಾಸಾಯನಿಕಗಳ ಬಳಕೆ ಮಾಡುತ್ತಿರುವುದು ದೀರ್ಘಾವಧಿಯಲ್ಲಿ ಬೆಳೆ ಹಾಗೂ ಭೂಮಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವುದನ್ನು ಸದಾ ನೆನಪಿನಲ್ಲಿ ಇಡಬೇಕು ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.


ಇಲ್ಲಿನ ಗಾಯತ್ರಿ ಮಂದಿರದಲ್ಲಿ ಹೊಸನಗರ ಫಾರ್ಮರ್ಸ್ ಪ್ರಡ್ಯೂರ‍್ಸ್ ಕಂಪನಿ ಅಡಕೆ ಎಲೆಚುಕ್ಕಿ ರೋಗ ನಿರ್ವಹಣೆ ಕುರಿತು ಏರ್ಪಡಿಸಿದ್ದ ಕಾರ‍್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಭೂತಾಯಿಗೆ ನಾವು ಏನನ್ನು ಕೊಡುತ್ತೇವೆಯೋ ಅದನ್ನೇ ಹತ್ತು ಪಟ್ಟು ಮರಳಿ ನಮಗೆ ದೊರೆಯುತ್ತದೆ. ಸಾಂಪ್ರದಾಯಿಕ ಕೃಷಿಯಿಂದ ವಿಮುಖರಾಗುತ್ತಿರುವುದು ಆಘಾತಕಾರಿ ಬೆಳವಣಿಗೆ. ಹಿಂದೆಂದೂ ಕಂಡು ಕೇಳರಿಯದ ರೋಗಗಳು ಕಂಡುಬಂದಾಗ ವಿಹ್ವಲರಾಗುತ್ತೇವೆ. ಕೃಷಿಯಲ್ಲಿ ದೀರ್ಘಾವಧಿ ಪರಿಣಾಮಗಳನ್ನು ಅರಿತು ಚಟುವಟಿಕೆ ಕೈಗೊಳ್ಳುವುದು ಉತ್ತಮ ಎಂದರು.


ಮಲೆನಾಡು ಭಾಗದಲ್ಲಿ ಕಂಡುಬಂದಿರುವ ಎಲೆಚುಕ್ಕಿ ರೋಗ ರೋಗ ಭಯಾನಕ ಸ್ವರೂಪ ಪಡೆಯುತ್ತಿದೆ. ಇದೇ ಗತಿಯಲ್ಲಿ ಮುಂದುವರೆದಲ್ಲಿ ಬೆಳೆಗಾರರ ಭವಿಷ್ಯ ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ. ತಜ್ಞರು ಈ ಬಗ್ಗೆ ಆದಷ್ಟು ಬೇಗನೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.


ಸಂಸ್ಥೆಯ ಅಧ್ಯಕ್ಷ ಎನ್.ಆರ್.ದೇವಾನಂದ ಪ್ರಾಸ್ತಾವಿಕ ಮಾತನಾಡಿ, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಕಂಪನಿ ಕಾರ‍್ಯಾರಾರಂಭ ಮಾಡಿದೆ ಎಂದರು.


ವಿಶ್ರಾಂತ ಪ್ರಾಧ್ಯಾಪಕ ನಾರಾಯಣ ಸ್ವಾಮಿ ಹಾಗೂ ಶಿವಮೊಗ್ಗದ ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ನಾಗರಾಜ ಅಡಿವೆಪ್ಪರ್ ಅವರು ರೈತರೊಂದಿಗೆ ಸಂವಾದ ನಡೆಸಿ, ರೋಗ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.


ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ್, ತೋಟಗಾರಿಕ ಸಹಾಯಕ ನಿರ್ದೇಶಕ ಪುಟ್ಟನಾಯ್ಕ್, ಪ್ರಮುಖರಾದ ಡಿ.ಆರ್.ವಿನಯ್‌ಕುಮಾರ್ , ಪಿ.ಎನ್.ಶಶಿಧರ್, ವಡ್ಡಿನಬೈಲು ಸುಬ್ರಮಣ್ಯ ಮತ್ತಿತರರು ಇದ್ದರು.

ಸಂಪೆಕಟ್ಟೆ ಕುಮಾರ್ ಸ್ವಾಗತಿಸಿದರು. ಕೆ.ವಿ.ಕೃಷ್ಣಮೂರ್ತಿ ಕರ‍್ಯಕ್ರಮ ನಿರ್ವಹಿಸಿದರು.
ವಿವಿಧ ಕೃಷಿ ಸಲಕರಣೆಗಳು, ಸಾವಯವ ಗೊಬ್ಬರಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!