ಸಾಗರ ಉಪವಿಭಾಗಾಧಿಕಾರಿಗಳು ದಿಢೀರ್ ಭೇಟಿ ; ಲೋಕಾಯುಕ್ತ ತನಿಖೆಯಿಂದ ಬೆಳಕಿಗೆ ಬಂದ ಸರ್ಕಾರಿ ಜಾಗದಲ್ಲಿ ಅನಧಿಕೃತ ಕಲ್ಯಾಣ ಮಂಟಪ ನಿರ್ಮಾಣ !

0
1350

ರಿಪ್ಪನ್‌ಪೇಟೆ: ಪಟ್ಟಣದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬರುವೆ ಗ್ರಾಮದ ಸರ್ಕಾರಿ ಕಂದಾಯ ಜಮೀನಿನಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಕಲ್ಯಾಣ ಮಂದಿರವನ್ನು ನಿರ್ಮಿಸಿ ಕಂದಾಯ ಇಲಾಖೆಗೆ ವಂಚಿಸುವ ಮೂಲಕ ಗ್ರಾಮಾಡಳಿತಕ್ಕೂ ಸುಮಾರು 14 ಲಕ್ಷಕ್ಕೂ ಅಧಿಕ ಹಣ ಸಂದಾಯ ಮಾಡದೇ ಲೋಕಾಯುಕ್ತ ಆದೇಶವನ್ನು ಉಲ್ಲಂಘಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಅಕ್ರಮವಾಗಿ ಬರುವೆ ಗ್ರಾಮದ ಸರ್ವೇ ನಂಬರ್ 63/1ಬಿ ರ ಕಂದಾಯ ಭೂಮಿಯನ್ನು ಒತ್ತುವರಿ ಮಾಡಿ ಭೂ ಪರಿವರ್ತನೆ ಮಾಡದೇ ವಾಣಿಜ್ಯ ಕಟ್ಟಡವನ್ನು ನಿರ್ಮಿಸಿದ್ದಾರೆಂದು ಬರುವೆ ಗ್ರಾಮದ ಸಾರ್ವಜನಿಕರು ಮಾಹಿತಿ ಹಕ್ಕಿನಡಿ ಮಾಹಿತಿ ಪಡೆದು ರಾಜ್ಯ ಲೋಕಾಯುಕ್ತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರ ಪರಿಣಾಮ ಲೋಕಾಯುಕ್ತ ನ್ಯಾಯಾಲಯ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮತ್ತು ಸಾಗರ ಉಪವಿಭಾಗಾಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಆದೇಶಿಸಿದರ ಪರಿಣಾಮ ಸಾಗರ ಉಪವಿಭಾಗಾಧಿಕಾರಿಗಳು ಮತ್ತು ತಾಲ್ಲೂಕ್ ತಹಶೀಲ್ದಾರ್, ನಾಡಕಛೇರಿ ಉಪತಹಶೀಲ್ದಾರ್ ಮತ್ತು ಗ್ರಾಮ ಪಂಚಾಯ್ತಿ ಸಿಬ್ಬಂದಿ ವರ್ಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೃಷಿ ಭೂಮಿಯಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೆ ಸರ್ಕಾರದ ನೀತಿ ನಿಯಮಗಳನ್ನು ಪಾಲಿಸದೇ ಕಲ್ಯಾಣ ಮಂದಿರ ನಿರ್ಮಿಸಲಾಗಿದೆ. ಅಲ್ಲದೆ ಗ್ರಾಮಾಡಳಿತ ಕಟ್ಟಡ ನಿರ್ಮಾಣಕ್ಕೆ ಪ್ಲಾನ್ ಅಂಡ್ ಎಸ್ಟಿಮೆಂಟ್‌ನಾದರಿಸಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಿರುತ್ತಾರೆಂದು ನ್ಯಾಯಾಲಯಕ್ಕೆ ದಾಖಲೆ ಸಹಿತ ಸಾರ್ವಜನಿಕರು ನ್ಯಾಯಾಲಕ್ಕೆ ಹಾಗೂ ಸಂಬಂಧಪಟ್ಟ ಇಲಾಖಾ ಪ್ರಾಧಿಕಾರಕ್ಕೆ ಮನವರಿಕೆ ಮಾಡಿದ್ದು ನ್ಯಾಯಾಲಯ 2019-20 ರಲ್ಲಿ 14.50 ಲಕ್ಷ ರೂ. ಹಣ ಪಂಚಾಯ್ತಿಗೆ ಸಂದಾಯ ಮಾಡುವಂತೆ ಆದೇಶ ನೀಡಲಾದರೂ ಕೂಡಾ ನಯಾ ಪೈಸೆ ಹಣ ಗ್ರಾಮ ಪಂಚಾಯ್ತಿಗೆ ಸಂದಾಯ ಮಾಡದೆ ಲೋಕಾಯುಕ್ತ ಆದೇಶವನ್ನು ಗಾಳಿಗೆ ತೂರಿ ಕಲ್ಯಾಣ ಮಂದಿರವನ್ನು ಶುಭ ಸಮಾರಂಭಗಳಿಗೆ ಬಾಡಿಗೆ ನೀಡುತ್ತಿದ್ದಾರೆ. ಆದರೂ ಗ್ರಾಮಾಡಳಿತ ಸಹ ನ್ಯಾಯಾಲಯದ ಆದೇಶದನ್ವಯ ಹಣ ವಸೂಲಿ ಮಾಡದೇ ನಿರ್ಲಕ್ಷ್ಯ ವಹಿಸಿರುವುದು ಹಲವು ಸಂಶಯಕ್ಕೆ ಎಡೆ ಮಾಡಿದಂತಾಗಿದೆ.

ಈವರೆಗೂ ತೀರ್ಥಹಳ್ಳಿ ರಸ್ತೆಯಲ್ಲಿನ ಜ್ಯೋತಿ ಮಾಂಗಲ್ಯ ಮಂದಿರವನ್ನು ಸರ್ಕಾರಿ ಜಾಗದಲ್ಲಿ ನಿರ್ಮಿಸಿ ವಿವಿಧ ಶುಬ ಸಮಾರಂಭಗಳಿಗೆ ಬಾಡಿಗೆ ನೀಡಿ ಕೋಟ್ಯಂತರ ಹಣವನ್ನು ಪಡೆಯುತ್ತಿದ್ದರೂ ಸಹ ಗ್ರಾಮ ಪಂಚಾಯ್ತಿಗೆ ಕಂದಾಯ ಸಂದಾಯ ಮಾಡದಿದ್ದರೂ ಸಹ ಗ್ರಾಮಾಡಳಿತ ನಿರ್ಲಕ್ಷ್ಯ ವಹಿಸುತ್ತಿರುವುದು ಸಾರ್ವಜನಿಕರಿಗೆ ಯಕ್ಷ ಪ್ರಶ್ನೆಯಾಗಿ ಕಾಡುವಂತಾಗಿದೆ.

ಗ್ರಾಮಾಡಳಿತ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯವನ್ನು ಅನುಸರಿಸುತ್ತಿದ್ದಾರೆಂಬುದಕ್ಕೆ ಇದೊಂದು ಸಾಕ್ಷಿಯಾಗಿ ಪರಿಣಮಿಸಿದೆ.

ಈ ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ರಾಜ್ಯದ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಈ ಅಕ್ರಮ ಕಟ್ಟಡವನ್ನು ಸರ್ಕಾರಕ್ಕೆ ಸ್ವಾಧೀನ ಪಡಿಸಿಕೊಳ್ಳಬೇಕು ಇಲ್ಲದಿದ್ದರೆ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here