ಸಾಗರ ಎಪಿಎಂಸಿಯನ್ನೆ ಹೊಸನಗರಕ್ಕೆ ಸೇರ್ಪಡೆಗೊಳಿಸಿ : ಮಾಜಿ ಶಾಸಕ ಬಿ. ಸ್ವಾಮಿರಾವ್ ಆಗ್ರಹ

0
489

ಹೊಸನಗರ: ಎಪಿಎಂಸಿಯನ್ನು ಸಾಗರದೊಂದಿಗೆ ವಿಲೀನ ಮಾಡಲು ಹೊರಟಿರುವ ಸರಕಾರದ ಕ್ರಮ ಸರಿಯಲ್ಲ. ಮಲೆನಾಡು ಭಾಗದ ಎಪಿಎಂಸಿಗಳಿಗೆ ಮುಖ್ಯ ಆದಾಯ ತರುವ ಬೆಳೆ ಅಡಿಕೆಯಾಗಿದೆ. ಹೊಸನಗರ ತಾಲೂಕಿನ ಅಡಿಕೆಗೆ ವಿಶೇಷ ಮಾನ್ಯತೆಯಿದೆ. ವಿಲೀನ ಮಾಡಲೇಬೇಕು ಎನ್ನುವುದಾದರೆ ಸಾಗರ ಎಪಿಎಂಸಿಯನ್ನು ಹೊಸನಗರದೊಂದಿಗೆ ವಿಲೀನಗೊಳಿಸಿ ಇಲ್ಲಿಯೇ ಮುಖ್ಯ ಕಛೇರಿಯನ್ನು ಆರಂಭಿಸಬೇಕು ಮಾಜಿ ಶಾಸಕ ಬಿ.ಸ್ವಾಮಿರಾವ್ ಆಗ್ರಹಿಸಿದ್ದಾರೆ.

ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅನಾವಶ್ಯಕವಾಗಿ ಎಪಿಎಂಸಿ ವಿಲೀನ ಪ್ರಸ್ತಾವನೆಯನ್ನು ಮುನ್ನೆಲೆಗೆ ತರಲಾಗಿದೆ. ಹೊಸನಗರ ಎಪಿಎಂಸಿಯನ್ನು ಸಾಗರದೊಂದಿಗೆ ವಿಲೀನಗೊಳಿಸುವ ಪ್ರಶ್ನೆಯೇ ಇಲ್ಲ. ಇಂತಹ ಕ್ರಮಕ್ಕೆ ತಾಲೂಕಿನ ಬಹುತೇಕ ಜನರ ವಿರೋಧವಿದೆ. ಸತತ 3 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿರುವ ನನ್ನ ಅವಧಿಯಲ್ಲಿಯೇ ಇಲ್ಲಿನ ಎಪಿಎಂಸಿ ಪ್ರಾಂಗಣಕ್ಕೆ ಜಾಗ ಮಂಜೂರಾತಿ ದೊರೆಯಿತು. ಇದಕ್ಕಾಗಿ ನಾನು ಸಾಕಷ್ಟು ಶ್ರಮ ವಹಿಸಿದ್ದೇನೆ. ಈಗ ಇಲ್ಲಸಲ್ಲದ ಸಬೂಬು ಹೇಳಿ ಎಪಿಎಂಸಿಯನ್ನು ಸಾಗರದೊಂದಿಗೆ ವಿಲೀನಗೊಳಿಸಲು ಹೊರಟಿರುವುದು ಇಲ್ಲಿನ ಜನರ ದುರಂತವಾಗಿದೆ ಎಂದರು.

ಕ್ಷೇತ್ರದ ರಾಜಕೀಯ ಕೇಂದ್ರ ಎಂದ ಮಾತ್ರಕ್ಕೆ ಸಾಗರದಲ್ಲೇ ಎಲ್ಲವೂ ಇರಬೇಕು ಎನ್ನುವ ನಿಯಮವಿಲ್ಲ. ಜನಸಾಮಾನ್ಯರಿಗೆ ಸುಲಭದಲ್ಲಿ ಸಿಗುವಂತಿರಬೇಕು. ಅದನ್ನು ಬಿಟ್ಟು ರಾಜಕೀಯ ಲಾಭಕ್ಕಾಗಿ ರೈತರ ಹಿತ ಬಲಿಕೊಡಲು ಸಾಧ್ಯವಿಲ್ಲ. ಈ ಪ್ರಕ್ರಿಯ ಹಿಂದೇ ಯಾರೇ ಇರಲಿ, ಏನೇ ಆಗಲಿ, ನಾನು ಹೋರಾಟ ಮಾಡುವುದು ಶತಸಿದ್ಧ. ಎಪಿಎಂಸಿ ವಿಲೀನವನ್ನು ವಿರೋಧಿಸಿ ಹೋರಾಟಕ್ಕೆ ಅಣಿಯಾಗಿದ್ದೇನೆ. ಆಕ್ಷೇಪಣೆ ಸಲ್ಲಿಕೆಯಿಂದ ಆರಂಭಿಸಲಾಗಿದ್ದು, ಸಂಘಟನಾತ್ಮಕ ಹೋರಾಟ ಆರಂಭಿಸಲಾಗಿಗುವುದು ಎಂದರು.

ಹೊಸನಗರದ ರೈತರಿಗೆ ಮಾಡುವ ದ್ರೋಹ:

ವರ್ಷದಿಂದ ವರ್ಷಕ್ಕೆ ಇಲ್ಲಿನ ಎಪಿಎಂಸಿಯಲ್ಲಿ ವಹಿವಾಟು ಹೆಚ್ಚುತ್ತಿದೆ. ಎಲ್ಲಿಯೂ ನಷ್ಟ ಅನೂಭವಿಸಿಲ್ಲ. ಭೌಗೋಳಿಕವಾಗಿ ಅತಿ ದೊಡ್ಡ ತಾಲೂಕು ಆಗಿರುವ ಹೊಸನಗರ ಈಗಾಗಲೇ ಮುಳುಗಡೆ ಸಮಸ್ಯೆಯಿಂದ ನಲುಗಿದೆ. ವಿಧಾನಸಭಾ ಕ್ಷೇತ್ರವನ್ನೂ ಕಳೆದುಕೊಂಡು ಅತಂತ್ರವಾಗಿದೆ. ಈ ನಡುವೆ ಎಪಿಎಂಸಿಯನ್ನು ಸಾಗರದೊಂದಿಗೆ ವಿಲೀನ ಮಾಡುವುದು ಸರ್ವಥಾ ನ್ಯಾಯವಲ್ಲ. ಇಂತಹ ಕ್ರಮದ ಹಿಂದೆ ಯಾರೇ ಇದ್ದರೂ ನನ್ನ ತೀವ್ರ ವಿರೋಧವಿದೆ. ಒಂದು ವೇಳೆ ಹೊಸನಗರ ಎಪಿಎಂಸಿಯನ್ನು ಸಾಗರದೊಂದಿಗೆ ವಿಲೀನ ಮಾಡಿದ್ದೇ ಹೌದಾದಲ್ಲಿ ಇದು ತಾಲೂಕಿನ ರೈತಭಾಂಧವರಿಗೆ ಮಾಡಿದ ದ್ರೋಹವಾಗಲಿದೆ ಎಂದು ಕಿಡಿಕಾರಿದರು.

ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಂ.ಡಿ.ಉಸ್ಮಾನ್, ಮಹೇಶ್ ದೇವರಸಲಿಕೆ ಮತ್ತಿತರರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here