23.2 C
Shimoga
Sunday, November 27, 2022

ಸಾಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ಕಲಗೋಡು ರತ್ನಾಕರ್ ಅರ್ಜಿ


ಹೊಸನಗರ: ಈಡಿಗ ಸಮುದಾಯದ ಪ್ರಭಾವಿ ನಾಯಕ, ಸುಮಾರು 3 ದಶಕಗಳ ದಣಿವರಿಯದ ರಾಜಕೀಯ ಪಯಣ ಕಂಡಿರುವ, ಮಾಜಿ ಜಿ.ಪಂ.ಅಧ್ಯಕ್ಷ ಕಲಗೋಡು ರತ್ನಾಕರ್ ಇಂದು ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಯಾಗಿ ಬೆಂಗಳೂರಿನಲ್ಲಿ ಪಕ್ಷದ ರಾಷ್ಟೀಯ ಮುಖಂಡರಿಗೆ ತಮ್ಮ ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದಾರೆ.


ಪಕ್ಷದ ನಿಯಮದಂತೆ ರೂ.2 ಲಕ್ಷ ಶುಲ್ಕ ಸಹಿತ ಅಗತ್ಯ ದಾಖಲೆಗಳೊಂದಿಗೆ ಪಕ್ಷದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸುರ್ಜಿವಾಲ ಅವರಿಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ತಮ್ಮ ರಾಜಕೀಯ ಸುರ್ಧೀಘ ಪಯಣ ಆಧಾರವಾಗಿಸಿಕೊಂಡು, ಪಕ್ಷ ಸಂಘಟನೆಗೆ ನೀಡಿದ ಸಹಕಾರ ವಿಷಯ ಸೇರಿದಂತೆ ಹಲವು ಸಂಗತಿಗಳನ್ನು ಮುಂದಿಟ್ಟುಗೊಂಡು ತಮ್ಮ ಉಮೇದುವಾರಿಕೆ ಅರ್ಜಿ ಸಲ್ಲಿಸಿರುವುದು ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ರಾಜಕೀಯ ಮುನ್ನುಡಿ ಬರೆಯುವುದಕ್ಕೆ ನಾಂದಿ ಹಾಡಿದಂತಿದೆ.


ಹೊಸನಗರ ತಾಲೂಕಿನ ಕೋಡೂರು ಸಮೀಪದ ಕಲಗೋಡು ಗ್ರಾಮದ ಯೋಗೇಂದ್ರನಾಯ್ಕರ ಮಗನಾದ ಇವರು ಮೂಲತಃ ಕೃಷಿ ಕುಟುಂಬದಿಂದ ಬಂದ ಇವರು ಸುಮಾರು 33 ವರ್ಷಗಳ ತಮ್ಮ ರಾಜಕೀಯ ಬದುಕಿನಲ್ಲಿ ಹಲವಾರು ಏರಿಳಿತ ಕಂಡಿದ್ದಾರೆ. ಆದರೂ ಎದೆಗುಂದಿಲ್ಲ. ತಾಳ್ಮೆ, ಸಾಧನೆಯ ಮಾರ್ಗ ಅವರನ್ನು ಇಂದು ಪಕ್ವ ರಾಜಕಾರಣಿ ಎನ್ನುವಂತೆ ಮಾಡಿದೆ.


1987ರಲ್ಲಿ ಮಂಡಲ ಪಂಚಾಯತಿ ಸದಸ್ಯನಾಗಿ ತಮ್ಮ ರಾಜಕೀಯ ಬದುಕು ಆರಂಭಿಸಿದ ಕಲಗೋಡು ರತ್ನಾಕರ್, 1995ರಲ್ಲಿ ತಾಲೂಕು ಪಂಚಾಯತಿ ಸದಸ್ಯರಾದರು. 2000ದಿಂದ 2021ವರೆಗೂ ನಾಲ್ಕು ಬಾರಿ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಸೋಲರಿಯದ ಸರದಾರ ಎನಿಸಿಕೊಂಡಿದ್ದಾರೆ. ಹಾಗೂ ಒಮ್ಮೆ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಹಲವಾರು ಅಭಿವೃದ್ದಿ ಕಾರ್ಯಗಳ ಅನುಷ್ಠಾಣದ ಮೂಲಕ ಕ್ಷೇತ್ರದಲ್ಲಿ ಜನಮನ ತಲುಪಿರುವುದು ಇವರ ವಿಶೇಷ.

ರಾಜ್ಯ ಕಾಂಗ್ರೆಸ್‌ ವಲಯದಲ್ಲಿನ ರಾಜಕೀಯ ಭೀಷ್ಮ ಎಂದೇ ಖ್ಯಾತರಾಗಿರುವ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪನವರು, ವಯೋವೃದ್ದರಾಗಿರುವ ಹಿನ್ನಲೆಯಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಕಾಗೋಡು ಪುತ್ರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜನಂದಿನಿ ಹಾಗೂ ಇದೀಗ ಕಲಗೋಡು ರತ್ನಾಕರ ಅವರ ಹೆಸರು ಸಹ ಟಿಕೆಟ್ ಆಕಾಂಕ್ಷಿಗಳ ಪಟ್ಟಿಗೆ ಸೇರ್ಪಡೆಗೊಂಡಿರುವುದು ಮತದಾರರಲ್ಲಿ ಹಲವು ಕೌತುಕ ಸೃಷ್ಠಿಸಿದೆ.


33 ವರ್ಷಗಳ ಕಳಂಕ ರಹಿತ ರಾಜಕಾರಣ, ಪ್ರಾಮಾಣಿಕ ಪಕ್ಷ ಸಂಘಟನೆ ಕಾರ್ಯ, ಪಕ್ಷ ನೀಡಿದ ಜವಾಬಾರಿಯನ್ನು ಸಮರ್ಥವಾಗಿ ನಿರ್ವಹಿಸಿರುವುದು ತಮಗೇ ಪಕ್ಷದ ಹೈಕಮಾಂಡ್ ಟಿಕೆಟ್ ನೀಡುವ ಭರವಸೆಯನ್ನು ಕಲಗೋಡು ರತ್ನಾಕರ್ ವ್ಯಕ್ತಪಡಿಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!