ಶಿವಮೊಗ್ಗ: ಸಾಗರ ಹಾಗೂ ಹೊಸನಗರ ಎಪಿಎಂಸಿಗಳನ್ನು ಮರ್ಜ್ ಮಾಡುವ ಪ್ರಸ್ತಾವನೆಯನ್ನು ಕೈ ಬಿಡಲಾಗಿದ್ದು, ಈಗಿರುವ ಸ್ಥಿತಿಯಲ್ಲಿಯೇ ಇವು ಕಾರ್ಯನಿರ್ವಹಿಸಲಿವೆ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ಸ್ಪಷ್ಟಪಡಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡೂ ಎಪಿಎಂಸಿಗಳನ್ನು ವಿಲೀನ ಮಾಡಲಾಗುತ್ತದೆ ಎಂಬ ಗೊಂದಲ ರೈತ ಸಮುದಾಯದಲ್ಲಿ ಉಂಟಾಗಿತ್ತು. ಆದರೆ ಸರ್ಕಾರ ಈ ಪ್ರಸ್ತಾವನೆಯನ್ನು ಕೈ ಬಿಟ್ಟಿದೆ. ಇದರಿಂದಾಗಿ ಆಯ ಭಾಗದ ರೈತರಿಗೆ ಕೃಷಿ ಹುಟ್ಟುವಳಿಗಳನ್ನು ಮಾರಾಟ ಮಾಡಲು ಅನುಕೂಲವಾಗಲಿದೆ ಎಂದರು.
ಯಾವ ಕಾರಣಕ್ಕಾಗಿ ಈ ಎರಡೂ ಎಪಿಂಸಿಗಳನ್ನು ವಿಲೀನ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂಬುದು ತಮ್ಮ ಗಮನಕ್ಕೆ ಬಂದಿರಲಿಲ್ಲ. ಅಕಾರಿಗಳು ಈ ಪ್ರಸ್ತಾವನೆ ಸಲ್ಲಿಸಿರುವ ಸಾಧ್ಯತೆ ಇದೆ. ಆದರೆ ಈಗ ವಿಲೀನ ಗೊಂದಲ ಪರಿಹಾರವಾಗಿದೆ ಎಂದರು.
ಹೊಸನಗರಕ್ಕೆ ಬೈಪಾಸ್ ರಸ್ತೆ ಅಗತ್ಯವಾಗಿರುವುದರಿಂದ ಇದನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಬೇಕಾದ ಭೂಮಿಯನ್ನು ಭೂ ಮಾಲೀಕರು ಬಿಟ್ಟು ಕೊಡಲು ಮುಂದೆ ಬಂದರೆ ಸೂಕ್ತ ಪರಿಹಾರ ನೀಡಲಾಗುತ್ತದೆ. ಬೈಪಾಸ್ ರಸ್ತೆ ಮಾಡಿದರೆ ಪಟ್ಟಣದ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಮಂಗನ ಕಾಯಿಲೆ ಸಂಶೋಧನಾ ಲ್ಯಾಬ್ ಸಾಗರದಲ್ಲಿ ಆರಂಭಿಸಲು ಗುರುತಿಸಲಾಗಿತ್ತು. ಆದರೆ ವಿಜ್ಞಾನಿಗಳು ಅಲ್ಲಿಗೆ ಬರುವುದಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಆರಂಭಿಸಬೇಕೆಂಬ ಬೇಡಿಕೆ ಬಂದಿದೆ. ಆದರೆ ಶಿವಮೊಗ್ಗದಲ್ಲಾದರೂ ಲ್ಯಾಬ್ ಆರಂಭಿಸಬೇಕೆಂದು ಒತ್ತಾಯಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟಿ.ಡಿ. ಮೇಘರಾಜ್, ಅಣ್ಣಪ್ಪ ಇದ್ದರು.
Related