ಸಾರ್ವಜನಿಕರ ಚರ್ಚೆಗೆ ತಂದು ಎನ್ಇಪಿ ಜಾರಿಗೊಳಿಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್

0
279

ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಪೂರ್ಣ ವಿರೋಧವಿದ್ದು, ಸಾರ್ವಜನಿಕರ ಚರ್ಚೆಗೆ ತಂದು ಜಾರಿಗೊಳಿಸಲಿ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಹೇಳಿದರು.

ಅವರು ನಗರದಲ್ಲಿಂದು ಪ್ರೆಸ್ ಟ್ರಸ್ಟ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಇದು ಮುಂದಿನ 40 ರಿಂದ 50 ವರ್ಷದ ಜನಾಂಗವನ್ನು ರೂಪಿಸುವಂತಹ ಮಹತ್ವದ ವಿಷಯವಾಗಿದೆ. ಇಷ್ಟೊಂದು ಮಹತ್ವದ ನೀತಿ‌ ಸಂಸತ್, ದೇಶದ ಯಾವುದೇ ರಾಜ್ಯದ ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಚರ್ಚೆಯೇ ಆಗಿಲ್ಲ. ಟೆಂಡರ್ ಕರೆದು ಮುಚ್ಚಿದ ಲಕೋಟೆಯಲ್ಲಿಟ್ಟು ಪ್ರಕಟಿಸಿದಂತೆ ಎನ್ಇಪಿ ಜಾರಿಗೆ ಬಂದಿದೆ. ಯಾವುದೇ ಕಾರಣಕ್ಕೂ ಈ ವರ್ಷ ಎನ್ಇಪಿ ಜಾರಿಯಾಗಬಾರದು. ಇದು ದೇಶದ 130 ಕೋಟಿ ಜನರ ಭವಿಷ್ಯದ ಪ್ರಶ್ನೆಯಾಗಿದೆ ಎಂದರು.

ದೇಶದ ಬಹು ಸಂಸ್ಕ್ರತಿಯನ್ನು ಗಮನದಲ್ಲಿಟ್ಟುಕೊಂಡು ನೀತಿ ಜಾರಿಗೊಳಿಸಬೇಕು. ಇದು ಶಿಕ್ಷಣ ಕ್ಷೇತ್ರದ ಖಾಸಗೀಕರಣದ ಮೊದಲ ಹೆಜ್ಜೆ. ನೋಟು ಅಮಾನ್ಯೀಕರಣ, ಜಿಎಸ್ಟಿ, ರೈಲ್ವೆ, ಟೆಲಿಕಾಂ ವಿಷಯದಲ್ಲಿ ತೆಗೆದುಕೊಂಡಂತೆ ಎನ್ಇಪಿ ವಿಷಯದಲ್ಲೂ ಪ್ರಧಾನಿ ಮೋದಿ ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ. ಶಿಕ್ಷಕರ ಸಂಘಟನೆ, ಶಿಕ್ಷಣ ತಜ್ಞರೊಂದಿಗೆ ಅವರು ಚರ್ಚೆಯೇ ನಡೆಸಿಲ್ಲ. 3 ರಿಂದ 18ನೇ ವರ್ಷದ ವರೆಗಿನ ಮಕ್ಕಳ ಶಿಕ್ಷಣದ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದರು.

ಇನ್ನೂ ಎನ್ಇಪಿ ಜಾರಿಯಿಂದ ಬಿಎಡ್ ಕಾಲೇಜುಗಳು ಮುಚ್ಚಿ, ಅಂಗನವಾಡಿ ಕಾರ್ಯಕರ್ತರು ನಿರುದ್ಯೋಗಿಗಳಾಗಲಿದ್ದಾರೆ. ಈ ನೀತಿಯಿಂದ ಬಡ ಮಕ್ಕಳು, ವಿಕಲಚೇತನರು, ಶಾಲೆ ಬಿಟ್ಟವರು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಹಾಲಿ ಇರುವ ಶಿಕ್ಷಣ ನೀತಿಯಲ್ಲಿ ಇದಕ್ಕೆ ಅವಕಾಶ ಇದೆ. ಆದರೆ ನೂತನ ಎನ್ಇಪಿಯಲ್ಲಿ ಇದರ ಬಗ್ಗೆ ಚಕಾರವಿಲ್ಲ. ಪ್ರಜಾಸತ್ತಾತ್ಮಕ ದೇಶದಲ್ಲಿ ಚರ್ಚೆಗೆ ಅವಕಾಶವೇ ಇಲ್ಲದಂತಾಗಿದೆ. ಹಾಗಾಗಿ ಈ ರೀತಿಯ ಅವೈಜ್ಞಾನಿಕ ನೀತಿಗಳು ಜಾರಿಗೊಳ್ಳುತ್ತಿದೆ ಎಂದು ಕಿಮ್ಮನೆ ರತ್ನಾಕರ್ ಕಿಡಿಕಾರಿದರು.

ಜಾಹಿರಾತು

LEAVE A REPLY

Please enter your comment!
Please enter your name here