ಸಿಡಿ ಪ್ರಕರಣದಿಂದ ರಾಜ್ಯದ ಮಾನ ರಾಷ್ಟ್ರ ಮಟ್ಟದಲ್ಲಿ ಹರಾಜ್ ಆಗಿದೆ: ಬೇಳೂರು ಗೋಪಾಲಕೃಷ್ಣ

0
818

ರಿಪ್ಪನ್‌ಪೇಟೆ: ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರದ್ದೆನ್ನಲಾದ ಅಶ್ಲೀಲ ಸಿಡಿಯಿಂದ ದೇಶದಲ್ಲಿ ರಾಜ್ಯದ ಮಾನ ಹರಾಜಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.

ಪಟ್ಟಣದಲ್ಲಿ ಭಾನುವಾರ ರಾಘವೇಂದ್ರ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಬೆಳಗಾದರೆ ಮಾಧ್ಯಮಗಳಲ್ಲಿ ಸಿಡಿಯದ್ದೆ ದೃಶ್ಯಾವಳಿಗಳ ಜೊತೆಗೆ ವಿವರಣೆ ಬರುತ್ತಿದೆ. ಇದರಿಂದ ಮನೆಮಂದಿಯೆಲ್ಲ ಮುಜುಗರ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಹಳಷ್ಟು ಮನೆಗಳಲ್ಲಿ ರಾಜ್ಯ ಸರ್ಕಾರದ ಸಿಡಿಯಿಂದ ಟಿವಿ ನೋಡುವುದನ್ನೆ ಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುವ ಮೂಲಕ ರಾಜ್ಯದ ಮರ್ಯಾದೆ ರಾಷ್ಟ್ರ ಮಟ್ಟದಲ್ಲಿ ಅಪಹಾಸ್ಯಕ್ಕೊಳಗಾಗಿದೆ. ತನಿಖೆ ಪೂರ್ಣಗೊಳಿಸಿ ನಿಯಂತ್ರಿಸಬೇಕಾಗಿದ್ದ ರಾಜ್ಯ ಸರ್ಕಾರ ಉದ್ದೇಶ ಪೂರ್ವಕವಾಗಿ ವಿಳಂಬ ನೀತಿ ಅನುಸರಿಸಿ ಸರ್ಕಾರದ ವಿಫಲತೆಯನ್ನು ಮುಚ್ಚಲು ಈ ಪ್ರಕರಣವನ್ನು ದಾಳವಾಗಿಸಿಕೊಂಡಿದೆ ಎಂದರು.

ರಾಜ್ಯ ಸರ್ಕಾರದಲ್ಲಿ ಮಂತ್ರಿಯ ಆಕಾಂಕ್ಷೆ ಹೊಂದಿದವರು ಬಹಳಷ್ಟು ಜನರಿದ್ದು ಅವರಲ್ಲಿಯೇ ಯಾರೋ ಈ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ. ಒಂದೆಡೆ ರಮೇಶ್ ಜಾರಕಿಹೊಳಿಯವರನ್ನು ಹದ್ದುಬಸ್ತಿನಲ್ಲಿಟ್ಟು, ಇನ್ನೊಂದೆಡೆ ತಾವು ಸಚಿವರಾಗುವ ಹುನ್ನಾರ ಇದರಲ್ಲಡಗಿದೆ ಎಂದರು.

ಕೊರೊನಾ ನಿಯಂತ್ರಣದಲ್ಲಿ ವಿಫಲ:

ಮುಂಜಾಗ್ರತಾ ಕ್ರಮವಿಲ್ಲದ ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ವಿಫಲವಾಗಿದೆ. ಸೋಂಕು ಹರಡದಂತೆ ವಯೋಮಾನದ ಮಿತಿಯನ್ನು ಹೇರದೆ ಎಲ್ಲಾ ಜನರಿಗೂ ಸುಲಭವಾಗಿ ಶೀಘ್ರ ಲಸಿಕೆ ಹಾಕುವ ಯೋಜನೆ ಮಾಡಬೇಕಿದೆ. ಕಳೆದ ಕೆಲವು ತಿಂಗಳಿನಿಂದ ಸುಮ್ಮನಿದ್ದ ಸರ್ಕಾರ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಜನರಲ್ಲಿ ಭೀತಿಹುಟ್ಟಿಸುತ್ತಿದೆ ಎಂದು ಆಕ್ಷೇಪಿಸಿದರು.

ಸಮಾಜದಲ್ಲಿ ಕೆಲವುಗಳಿಗೆ ನಿಯಂತ್ರಣ ಇನ್ನುಳಿದವುಗಳಿಗೆ ನಿರ್ಬಂಧ ರಹಿತ ಚಟುವಟಿಕೆಗೆ ಅವಕಾಶ ಕಲ್ಪಿಸುವುದು ಅವೈಜ್ಞಾನಿಕವಾಗಿದ್ದು ಮುಂಜಾಗ್ರತ ಕ್ರಮದೊಂದಿಗೆ ಸೋಂಕು ನಿಯಂತ್ರಿಸಬೇಕು ಎಂದರು.

ವಿದ್ಯುತ್ ಕಣ್ಣಾಮುಚ್ಚಾಲೆಯಲ್ಲಿ ಶಾಸಕರ ನಾಟಕ:

ಹೊಸನಗರ ತಾಲ್ಲೂಕಿನಾದ್ಯಂತ ಕಳೆದ ಕೆಲವು ತಿಂಗಳುಗಳಿಂದ ಗುಣಮಟ್ಟವಿಲ್ಲದ ವಿದ್ಯುತ್‌ನಿಂದ ರೈತರು ತಮ್ಮ ಹೊಲ-ಗದ್ದೆಗಳಿಗೆ ನೀರುಣಿಸಲಾಗದೆ ಹೈರಾಣಾಗಿದ್ದಾರೆ. ಆದರೆ ಇಲ್ಲಿನ ಶಾಸಕರು ಮಾತ್ರ ಕಾಗೋಡು ತಿಮ್ಮಪ್ಪನವರು ಮಂಜೂರು ಮಾಡಿದ್ದ ವಿದ್ಯುತ್ ಪರಿವರ್ತಕಗಳನ್ನು ಉದ್ಘಾಟನೆ ಮಾಡಿ ಗುಣಮಟ್ಟದ ವಿದ್ಯುತ್ ನೀಡಿದ್ದೇನೆಂದು ನಾಟಕವಾಡುತ್ತಿದ್ದಾರೆ. ವಾಸ್ತವದ ಅರಿವೇ ಇಲ್ಲದ ಶಾಸಕರಿಂದ ಅಭಿವೃದ್ಧಿ ನಿರೀಕ್ಷಿಸುವುದಾದರೂ ಹೇಗೆ? ಶರಾವತಿ ಮುಳುಗಡೆ ಭಾಗದಲ್ಲಿ ನಾಡಿಗೆ ಬೆಳಕು ನೀಡಿದರೂ ದೀಪದ ಬುಡ ಕತ್ತಲೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿ, ಸಾರ್ವಜನಿಕರು ಪಾದಯಾತ್ರೆ ಮೂಲಕ ಕಳಪೆ ಗುಣಮಟ್ಟದ ವಿದ್ಯುತ್ ನೀಡಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೆ ಒಂದೇ ಒಂದು ವಿದ್ಯುತ್ ಸರಬರಾಜು ಘಟಕವಾಗಲೀ, ಉಪವಿದ್ಯುತ್ ವಿತರಣಾ ಘಟಕವಾಗಲೀ ಮಂಜೂರು ಮಾಡಿಸದ ಶಾಸಕರು ಜನರ ಮುಂದೆ ಹಗಲು ನಾಟಕ ಮಾಡುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ರಾಜ್ಯ-ಕೇಂದ್ರ ಸರಕಾರಗಳ ಜನರ ವಿರೋಧಿ ನೀತಿ, ಕ್ಷೇತ್ರ ಅಭಿವೃದ್ಧಿಯಲ್ಲಿ ಶಾಸಕರ ನಿರ್ಲಕ್ಷ್ಯದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here