ಸಿಡಿ ಪ್ರಕರಣ: ಬಿ.ಎಸ್.ವೈ. ಆರೋಪಿಯ ಪರವಾಗಿ ಮಾತನಾಡುವುದು ದುರಂತ – ಬೇಳೂರು ಗೋಪಾಲಕೃಷ್ಣ ಆರೋಪ

0
557

ಸೊರಬ: ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಯ ದೃಷ್ಟಿಯಿಂದ ಸಿಡಿ ಹಗರಣದ ಆರೋಪಿಯನ್ನು ರಾಜ್ಯ ಸರ್ಕಾರ ಎಸ್‌ಐಟಿ ಮೂಲಕ ಮುಚ್ಚಿಡುವ ಕೆಲಸ ಮಾಡುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆರೋಪಿಯ ಪರವಾಗಿ ಮಾತನಾಡುವುದು ದುರಂತ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ ಆರೋಪಿಸಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಂತ್ರಿಗಳಲ್ಲಿಯೇ ಹೊಂದಾಣಿಕೆ ಇಲ್ಲ. ಮುಖ್ಯಮಂತ್ರಿಗಳು ಯಾವುದೇ ಕಾರ್ಯಚಟುವಟಿಕೆ ಇಲ್ಲದೇ ಸ್ತಬ್ಧರಾಗಿದ್ದಾರೆ. ರಾಜ್ಯದಲ್ಲಿ ಹೆಣ್ಮು ಮಗಳು ಸಿಡಿ ಹಗರಣದಲ್ಲಿ ಬಂದರೂ ಸಹ ಆರೋಪಿ ಬಿಡುಗಡೆಯಾಗಿ ಬರುತ್ತಾರೆ ಎಂದು ಆರೋಪಿಯ ಪರವಾಗಿಯೇ ಸಿಎಂ ಮಾತನಾಡುವುದು ದುರಂತದ ಕಥೆ ಇದು. ರಾಜ್ಯ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿಯೇ ಎನ್ನುವ ಚರ್ಚೆಯಲ್ಲಿ ಜನತೆ ನಿರತರಾಗಿದ್ದಾರೆ. ಉಪ ಚುನಾವಣೆಯಲ್ಲಿ ಹಿನ್ನೆಡೆಯಾಗಬಹುದು ಎಂಬ ಆತಂಕ ಹಾಗೂ ಸರ್ಕಾರವನ್ನು ಅಸ್ತಿತ್ವಕ್ಕೆ ಬರಲು ಕಾರಣರಾದವರು ಬಂಧನವಾದರೆ ಸರ್ಕಾರ ಉರುಳಿ ಹೋಗುತ್ತದೆ ಎಂಬ ಭಯದಿಂದ ಒಂದು ತಿಂಗಳಾದರೂ ಸಿಡಿ ಹಗರಣದ ಆರೋಪಿಯನ್ನು ಈವರೆಗೂ ಬಂಧಿಸಿಲ್ಲ ಎಂದರು.

ಆರೋಪಿಗೆ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಗೆ ದಾಖಲಿಸುವುದು. ನಂತರ ಕೊರೊನಾದ ಹೆಸರಿನಲ್ಲಿ 14 ದಿನ ಕ್ವಾರಂಟೈನ್ ಮಾಡುವುದು. ನಂತರ ಬಿಪಿ, ಶುಗರ್ ಎಂದು ಕಾಲಹರಣ ಮಾಡುತ್ತಾರೆ ಎಂದು ಈ ಹಿಂದೆಯೇ ಭವಿಷ್ಯ ನುಡಿದಿದ್ದೇನು ಎಂದ ಅವರು, ಬಸವನಗೌಡ ಯತ್ನಾಳ್ ನೇರವಾಗಿ ಬಿಎಸ್‌ವೈ ಮತ್ತು ಅವರ ಮಕ್ಕಳ ಮೇಲೆ ಆರೋಪ ಮಾಡುತ್ತಿದ್ದರೆ, ಕೆ.ಎಸ್. ಈಶ್ವರಪ್ಪ ಅವರು ಸಹ ಆರೋಪಗಳಲ್ಲಿ ನಿರತರಾಗಿದ್ದಾರೆ. ಮಂತ್ರಿಗಳ ಮೇಲೆ ಸಿಎಂಗೆ ಹಿಡಿತವೇ ಇಲ್ಲ. ಆರ್‌.ಎಸ್.ಎಸ್ ಮತ್ತು ಬಿಜೆಪಿಯವರು ಯಡಿಯೂರಪ್ಪ ಅವರನ್ನು ಕೈ ಕಟ್ಟಿ ಕೂರಿಸಿದ್ದಾರೆ ಎನ್ನುವ ಅನುಮಾನ ಮೂಡುತ್ತದೆ ಎಂದರು.

ಜನತೆ ಬೀದಿಗಿಳಿದು ಹೋರಾಟ ಮಾಡುತ್ತಾರೆ ಎನ್ನುವ ಭಯದಿಂದ ಸರ್ಕಾರ ಕೊರೊನಾ ಹೆಸರಲ್ಲಿ ಕಡಿವಾಣ ಹಾಕುತ್ತಿದೆ. ಈ ಹಿಂದೆ ಕೊರೊನಾದ ಸಂದರ್ಭದಲ್ಲಿ ಜನತೆ ಸಾಕಷ್ಟು ಆರ್ಥಿಕವಾಗಿ ಕಂಗೆಟ್ಟು ಹೋಗಿದ್ದರು. ಇದೀಗ ಕಳೆದ ಎರಡು ತಿಂಗಳಿಂದ ಚೇತರಿಕೆ ಕಾಣುತ್ತಿದ್ದಾರೆ. ಸರ್ಕಾರ ಮತ್ತೆ ರಾಜ್ಯವನ್ನು ಸ್ತಬ್ಧವನ್ನಾಗಿಲು ಹೊರಟಿದೆ. ಕೇರಳ ಮತ್ತು ಮುಂಬೈನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಾಗ ರಾಜ್ಯದ ಗಡಿಗಳನ್ನು ಭದ್ರ ಮಾಡಬೇಕಿತ್ತು. ಇದೀಗ 2 ಸಾವಿರದಿಂದ 5 ಸಾವಿರಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ ತಡೆಯಲು ಸರ್ಕಾರ ವಿಫಲವಾಗಿದೆ. ರಾಜ್ಯ ಸಂಪೂರ್ಣ ಹಾಳಾಗಲು ಯಡಿಯೂರಪ್ಪ ಮತ್ತು ಅವರ ನೇತೃತ್ವದ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ತಲಗಡ್ಡೆ ಗ್ರಾಪಂ ಅಧ್ಯಕ್ಷ ಆರ್.ಟಿ. ಮಂಜುನಾಥ್, ಶಿವಕುಮಾರ್ ಬಿಳವಗೋಡು, ಹರೀಶ ಇತರರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here