ಸಿದ್ದರಾಮಯ್ಯ ಇನ್ನಾದ್ರೂ ನಾಲಿಗೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡು ಗೌರವಯುತವಾಗಿ ಮಾತನಾಡೋದನ್ನ ಕಲಿಯಬೇಕು: ಬಿಎಸ್‌ವೈ

0
303

ಶಿವಮೊಗ್ಗ: ಸಿದ್ದರಾಮಯ್ಯ ಅವರು ಇನ್ನಾದರೂ ಗೌರವಯುತವಾಗಿ ಮಾತನಾಡಬೇಕು. ಇಲ್ಲದಿದ್ದರೆ ಜನರೇ ಅವರಿಗೆ ಪಾಠ ಕಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಖಡಕ್ ಎಚ್ಚರಿಕೆ ಕೊಟ್ಟರು.

ಶಿವಮೊಗ್ಗದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಇತ್ತೀಚೆಗೆ ಬಹಳ ಹಗುರವಾಗಿ ಮಾತನಾಡಲು ಆರಂಭಿಸಿದ್ದಾರೆ. ಒಬ್ಬ ವಿರೋಧ ಪಕ್ಷದ ನಾಯಕರಾಗಿ ಅದು ಅವರಿಗೆ ಶೋಭೆ ತರುವುದಿಲ್ಲ. ಇನ್ನಾದರೂ ನಾಲಿಗೆಯನ್ನು ಹದ್ದು ಬಸ್ತಿನಲ್ಲಿ ಇಟ್ಟುಕೊಂಡು ಗೌರವಯುತವಾಗಿ ಮಾತನಾಡುವುದನ್ನ ಕಲಿಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಉಪ ಚುನಾವಣೆ ಪ್ರಚಾರ ವಿಚಾರ ಮಾತನಾಡಿ, 20 ಹಾಗು 21 ರಂದು ಸಿಂದಗಿಯಲ್ಲಿ ಅಭ್ಯರ್ಥಿ ಪರ ಪ್ರಚಾರ ಮಾಡ್ತೇನೆ. 22 ಹಾಗು 23 ರಂದು ಹಾನಗಲ್ ನಲ್ಲಿ ಅಭ್ಯರ್ಥಿ ಪರ ಪ್ರಚಾರ ಮಾಡ್ತೇವೆ.ಅಗತ್ಯವಿದ್ದರೆ ಇನ್ನು ಒಂದು ದಿನ ಹಾನಗಲ್ ನಲ್ಲಿ ಪ್ರಚಾರ ಮಾಡ್ತೇನೆ. ನೂರಕ್ಕೆ ನೂರು ಮೋದಿ ಅವರ ಅಭಿವೃದ್ಧಿ ಕಾರ್ಯಗಳು, ರಾಜ್ಯ ಸರಕಾರ ಮಾಡಿರುವ ಅಭಿವೃದ್ಧಿ ಕಾರ್ಯ, ಬೊಮ್ಮಾಯಿ ಅವರು ಸಹ ಇತ್ತೀಚೆಗೆ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗು ಒಂದಲ್ಲ ಒಂದು ಸೌಲಭ್ಯ ಒದಗಿಸುವಲ್ಲಿ ಈಗಿನ ಸರಕಾರ ಹಾಗು ನನ್ನ ಅವಧಿಯ ಸರಕಾರ ಮಾಡಿದ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದು. ಲಕ್ಷಾಂತರ ಹೆಣ್ಣು ಮಕ್ಕಳು ತಮ್ಮ ಕಾಲು ಮೇಲೆ ನಿಂತುಕೊಂಡು ಗೌರವಯುತವಾಗಿ ಬದುಕುವ ವ್ಯವಸ್ಥೆ ಮಾಡಿದ್ದೇವೆ.

ಅಭಿವೃದ್ಧಿ ಕಾರ್ಯ ಮಾಡುವ ನಮ್ಮ ಸರಕಾರಕ್ಕೆ ಜನ ಸಂಪೂರ್ಣ ಬೆಂಬಲ ಕೊಡುವ ವಿಶ್ವಾಸ ಇದೆ. ಎರಡು ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ. ಬರುವಂತಹ ದಿನಗಳಲ್ಲಿ ಯಾವುದೇ ಚುನಾವಣೆ ಬಂದರೂ ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಎಲ್ಲಾ ಚುನಾವಣೆಗಳು ಗೆಲ್ಲಲ್ಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ ಎಂದು ಹೇಳಿದರು.

ಇನ್ನೂ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ಪಕ್ಷ ಕಡೆಗಣಿಸಬಾರದು ಎಂದು ಇತ್ತೀಚೆಗೆ ಚಿತ್ರದುರ್ಗದ ಮುರುಘಾ ಶರಣರು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅವರು ನನ್ನನ್ನು ಬಿಜೆಪಿ ಪಕ್ಷವಾಗಲಿ, ನರೇಂದ್ರ ಮೋದಿ ಅವರಾಗಲಿ, ಇನ್ನು ಯಾರೇ ಆಗಲಿ ನನ್ನನ್ನು ಎಂದಿಗೂ ಸೈಡ್‌ಲೈನ್ ಮಾಡಿಲ್ಲ ಎಂದು ಮಾಜಿ ಸ್ಪಷ್ಟಪಡಿಸಿದ್ದಾರೆ.

ಈ ವಿಷಯದ ಬಗ್ಗೆ ನಾನು ಮತ್ತೆ, ಮತ್ತೆ ಬಹಳ ಸ್ಪಷ್ಟಪಡಿಸಲು ಇಚ್ಚೆಪಡುತ್ತೇನೆ. ನಾನೇ ಸ್ವ ಇಚ್ಛೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ, ವಿನಾಃ ನನಗೆ ಯಾರೂ ಸಹ ಒತ್ತಡ ಹೇರಲಿಲ್ಲ. ಇಂತಹ ಗೊಂದಲ ತರುವಂತಹ ಪ್ರಯತ್ನ ಯಾರೂ ಮಾಡಬಾರದು. ನಾವೆಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದರು.

ಅಲ್ಪಸಂಖ್ಯಾತ ಮತಗಳ ಸೆಳೆಯುವ ವಿಚಾರವಾಗಿ ಮಾತನಾಡಿ, ಪ್ರಧಾನಿ ಮೋದಿಯವರ ಸರಕಾರ, ನನ್ನ ಅವಧಿಯ ಸರಕಾರ ಹಾಗು ಈಗಿನ ಸರಕಾರದಲ್ಲಿ ಅಲ್ಪಸಂಖ್ಯಾತರಿಗೆ ವಂಚನೆ ಮಾಡಿರುವ ಒಂದು ಉದಾಹರಣೆ ಕೊಡಿ. ಕೇಂದ್ರ ಹಾಗು ರಾಜ್ಯ ಸರಕಾರ ಎರಡು ಸಹ ಅಲ್ಪಸಂಖ್ಯಾತ, ಬಹು ಸಂಖ್ಯಾತ ಎಂಬ ಭೇಧ ಭಾವ ಮಾಡದೇ, ಎಲ್ಲರೂ ಒಂದೇ ತಾಯಿಯ ಮಕ್ಕಳು ಅಂತಾ ನೋಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೇ ಅದು ಬಿಜೆಪಿಯ ಮೋದಿ ನೇತೃತ್ವದ ಸರಕಾರ. ಅಲ್ಪಸಂಖ್ಯಾತರು ಬೇಜಾರು ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಬಾರಿ ಅಲ್ಪಸಂಖ್ಯಾತರ ಹೆಚ್ಚು ಮತವನ್ನು ನಾವು ನಿರೀಕ್ಷೆ ಮಾಡುತ್ತಿದ್ದೇವೆ ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here