23.2 C
Shimoga
Sunday, November 27, 2022

ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಡಿಕೆಶಿ ಘೋಷಿಸಲಿ ; ಆನವಟ್ಟಿಯಲ್ಲಿ ಜನ ಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಸವಾಲು

ಸೊರಬ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುನಃ ಮುಖ್ಯಮಂತ್ರಿಯಾಗುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಇದಕ್ಕೂ ಮೊದಲು ಅವರ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರೇ ನಮ್ಮ ಮುಂದಿನ ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸವಾಲು ಹಾಕಿದರು.

ತಾಲೂಕಿನ ಆನವಟ್ಟಿಯಲ್ಲಿ ಬಿಜೆಪಿ ವತಿಯಿಂದ ಮಂಗಳವಾರ ಸಂಜೆ ಹಮ್ಮಿಕೊಂಡ ಜನ ಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಾ, ಧರ್ಮಗಳಲ್ಲಿ ಒಡಕು ಮೂಡಿಸುವುದೇ ನಡೆದಿತ್ತು. ಮಿತಿ ಮೀರಿದ ಭ್ರಷ್ಟಾಚಾರವೇ ನಡೆದಿತ್ತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿದ 30 ರೂ., ಕೆ.ಜಿ ಅಕ್ಕಿಗೆ 3 ರೂ., ಚೀಲದ ಮೇಲೆ ಭಾವಚಿತ್ರ ಮುದ್ರಿಸಿಕೊಂಡು ಅನ್ನ ಭಾಗ್ಯ ಎಂದು ಭೀಗಿದ್ದು ಸಿದ್ದರಾಮಯ್ಯ ಅವರ ಸಾಧನೆಯಾಗಿದೆ. ಪ್ರಸ್ತುತ ರಾಜ್ಯ ಸರ್ಕಾರ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಸಮರ್ಥವಾಗಿ ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ಸಾವಿರಾರು ಕೋಟಿ. ರೂ., ಅನುದಾನ ಒದಗಿಸಲಾಗಿದೆ. ಆದರೆ, ವಿಪಕ್ಷಗಳಿಗೆ ಇದನ್ನು ಸಹಿಸಲಾಗದೇ ಆರೋಪ ಮಾಡುವುದೇ ಪ್ರವೃತ್ತಿಯಾಗಿದೆ ಎಂದು ಆರೋಪಿಸಿದರು.

ಹಲವು ವರ್ಷಗಳ ಬೇಡಿಕೆಯಾದ ಎಸ್ಸಿ ಮತ್ತು ಎಸ್ಟಿ ಸಮುದಾಯದ ಜನತೆಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಲು ಬಿಜೆಪಿ ಸರ್ಕಾರವೇ ಬರಬೇಕಾಯಿತು. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಹಿಂದುಳಿದವರನ್ನು ಹಿಂದುಳಿಸಿ, ತಾವು ಮಾತ್ರ ಮುಂದೆ ಬಂದರು ಎಂದ ಅವರು, ರಾಜ್ಯದಲ್ಲಿ ಅಭಿವೃದ್ಧಿಯ ಪರ್ವವೇ ನಡೆಯುತ್ತಿದೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಜೋಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ತಾಳಗುಪ್ಪ ರೈಲ್ವೆ ಮಾರ್ಗವನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಮುಖ್ಯವಾಗಿ ತಾಲೂಕಿನ ದಂಡಾವತಿ ನೀರಾವರಿ ಯೋಜನೆಯನ್ನು ರೈತರ ಜಮೀನುಗಳಿಗೆ ಯಾವುದೇ ತೊಂದರೆಯಾಗದಂತೆ ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು ಎಂದರು.

ದೇವರಾಜ್ ಅರಸು ಅವರು ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದಲ್ಲದೆ, ಗೇಣಿದಾರರ ಪರ ಕಾನೂನು ರೂಪಿಸಿದರು. ಎಸ್.ಬಂಗಾರಪ್ಪ, ಯಡಿಯೂರಪ್ಪ ಅವರು ಕೂಡ ಅದೇ ದಾರಿಯಲ್ಲಿ ನಡೆದರು. ಎಸ್. ಬಂಗಾರಪ್ಪ ಯಾವುದೇ ಪಕ್ಷದವರಾಗಿ ಗುರುತಿಸಿಕೊಂಡಿರಲಿಲ್ಲ. ಹೀಗಾಗಿ ರಾಜ್ಯದಲ್ಲಿ ಬಂಗಾರಪ್ಪ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಬಂಗಾರಪ್ಪ ಅವರು ಯಾವುದೇ ಪಕ್ಷಕ್ಕೆ ಸೀಮಿತರಲ್ಲ. ಆದರೆ, ಎಲ್ಲಾ ಪಕ್ಷಗಳು ಬಂಗಾರಪ್ಪ ಅವರದ್ದೆ ಎಂದರು.

ಬಿ.ಎಸ್. ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾದ ತರುವಾಯ ಜಿಲ್ಲೆಯ ಚಿತ್ರಣವೇ ಬದಲಾಗಿದೆ. ಪಕ್ಷದ ಸಂಘಟನೆಗಾಗಿ ರಾಜ್ಯದ ಮೂಲೆ ಮೂಲೆಗೂ ಪ್ರವಾಸ ಮಾಡುತ್ತಿದ್ದಾರೆ. ಪೈಪೋಟಿಯಲ್ಲಿ ಕೆಲಸ ಮಾಡುವ ಶಾಸಕರನ್ನು ಯಡಿಯೂರಪ್ಪ ಅವರು ಜಿಲ್ಲೆಯಲ್ಲಿ ಹುಟ್ಟುಹಾಕಿದ್ದಾರೆ. ಈಗಾಗಲೇ ತಾಲೂಕಿನಲ್ಲಿ 800 ಕೋಟಿ ಅನುದಾನದಲ್ಲಿ ನಿರ್ಮಾಣವಾದ ಕಾಮಗಾರಿಗಳನ್ನು ಸದ್ಯದಲ್ಲಿ ಉದ್ಘಾಟಿಸಲಾಗುವುದು ಎಂದರು.

ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ನಾಡಿನ ಜನತೆಗೆ ಬಿಜೆಪಿ ಸರ್ಕಾರ ಒಂದಲ್ಲಾ ಒಂದು ಸವಲತ್ತು ನೀಡಲಾಗಿದೆ. ಎಲ್ಲಾ ಜಾತಿ ಜನಾಂಗದ ಮಹನೀಯರ ಜಯಂತಿ ನಡೆಸಲಾಗುತ್ತಿದೆ. 20 ಲಕ್ಷ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ ನೀಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತವಾಗಿದ್ದು, ಪ್ರತಿ ಗ್ರಾಮದಲ್ಲಿ ಮಹಿಳಾ ತಂಡ ಕಟ್ಟಿ ಸಬಲೀಕರಣ, ಯುವಕರ ಪಡೆ ಕಟ್ಟಿ ಕಾರ್ಯಪ್ರವೃತ್ತರನ್ನಾಗಿಸುವುದು ಸೇರಿದಂತೆ ಇನ್ನಿತರೆ ಹೊಸ ಪ್ರಯತ್ನದಿಂದ ಬಿಜೆಪಿಯನ್ನು ಅಧಿಕಾರಕ್ಕೆ ತರಲಾಗುವುದು. ಸೊರಬ ತಾಲೂಕಿನಲ್ಲಿ ಆನವಟ್ಟಿ ಕ್ಷೇತ್ರ ಪ್ರಮುಖವಾಗಿದ್ದು ಸಣ್ಣ ಪುಟ್ಟ ಲೋಪ, ಗೊಂದಲಗಳನ್ನು ಮರೆತು ಪಕ್ಷ ಕಟ್ಟಬೇಕು ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಹಿಂದೂ ಸಮಾಜ ಅವಮಾನಿಸುವ ಮೂಲಕ ಆಡಳಿತ ಹಿಡಿಯುವ ಯತ್ನ ಫಲಿಸುವುದಿಲ್ಲ. ಮೂರು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಮಾಡಿಕೊಂಡಿರುವ ನಾವುಗಳು ಗಾಂಧಿ ಕುಟುಂಬಕ್ಕೆ ಚಿರ ಋಣಿಯಾಗಿರಬೇಕೆಂದು ಹೇಳುವ ರಮೇಶ್ ಕುಮಾರ್ ಕಾಂಗ್ರೆಸ್ ಆಡಳಿತದ ಭ್ರಷ್ಟಾಚಾರ ಬಹಿರಂಗ ಪಡಿಸಿದ್ದಾರೆ. ರಾಜ್ಯದಲ್ಲಿ ಪ್ರತಿದಿನ ನೂರಾರು ಕುಟುಂಬಗಳು ಮತಾಂತರ ವಾಗುತ್ತಿದ್ದು, ಈ ವಿಷಯವಾಗಿ ಸುಪ್ರೀಂ ಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿದೆ. ಅದಕ್ಕನುಗುಣವಾಗಿ ಮತಾಂತರ ತಡೆಯಲು ಮತಾಂತರ ನಿಷೇಧ ಕಾನೂನು ಜಾರಿಗೆ ತಂದಿದ್ದೇವೆ. ಪಿಎಸ್‍ಐ ಹಗರಣ ಪ್ರಕರಣವನ್ನು ಸಿಓಡಿಗೆ ತನಿಖೆಗೆ ಒಪ್ಪಿಸಲಾಗಿದ್ದು ಉನ್ನತ ಹುದ್ದೆಯ ಅಧಿಕಾರಿಗಳು ಸೇರಿದಂತೆ 106 ಮಂದಿಯನ್ನು ಬಂಧಿಸಲಾಗಿದೆ. ಬೆಂಗಳೂರು ಹೊರತು ಪಡಿಸಿ ಉಳಿದ ಕಡೆ ಭೂಕಬಳಿಕೆಗೆ ಅನ್ವಯವಾಗಿದ್ದ ಕಾನೂನನ್ನು ಹಿಂಪಡೆಯಲಾಗಿದೆ. ಸರ್ಕಾರ ಸದಾ ಜನಪರವಾಗಿ ಕೆಲಸ ಮಾಡಿದೆ ಎಂದರು.

ಶಾಸಕ ಕುಮಾರ ಬಂಗಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಸಚಿವ ಬೈರತ್ತಿ ಬಸವರಾಜ್, ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ಗ್ರಾಮಾಂತರದ ಶಾಸಕ ಅಶೋಕ್ ನಾಯ್ಕ್, ಸಾಗರ ಶಾಸಕ ಎಚ್. ಹಾಲಪ್ಪ, ವಿಧಾನ ಸಭೆ ಸದಸ್ಯರಾದ ಆಯನೂರು ಮಂಜುನಾಥ್, ರುದ್ರೇಗೌಡ, ಡಿ.ಎಸ್. ಅರುಣ್, ಮಾಜಿ ಸದಸ್ಯ ಸಿದ್ದರಾಮಣ್ಣ, ಭಾನುಪ್ರಕಾಶ್, ಕೆ.ಎಸ್. ಗುರುಮೂರ್ತಿ, ಪುರಸಭೆ ಅಧ್ಯಕ್ಷ ಈರೇಶಪ್ಪ ಮೇಸ್ತ್ರಿ, ಎಸ್. ದತ್ತಾತ್ರಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಸಾಗರ ನಗರ ಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಪವಿತ್ರಾ ರಾಮಯ್ಯ, ಬಿ.ಕೆ. ಶ್ರೀನಾಥ್ ಸೇರಿದಂತೆ ಮತ್ತಿತರರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!