ಸಿದ್ಧರಾಮೋತ್ಸವ ಮುಗಿದ ತಕ್ಷಣ ಕಾಂಗ್ರೆಸ್ ಎರಡು ಭಾಗವಾಗಲಿದೆ ; ಕೆಎಸ್ಈ

0
169

ಶಿವಮೊಗ್ಗ: ಸಿದ್ಧರಾಮೋತ್ಸವ ಮುಗಿದ ತಕ್ಷಣ ಕಾಂಗ್ರೆಸ್ ಎರಡು ಭಾಗವಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದು, ಧೈರ್ಯವಿದ್ದರೆ ಅದನ್ನು ವಿರೋಧಿಸಬೇಕಿತ್ತು. ಅದನ್ನು ಬಿಟ್ಟು ಸಿದ್ಧರಾಮೋತ್ಸವಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಉತ್ಸವ ಮಾಡಲು ಹೊರಟಿರುವುದು ಅವರ ಶಿಖಂಡಿತನ ತೋರಿಸುತ್ತದೆ. ಈಗಲೇ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಕಾಂಗ್ರೆಸ್‌ನಲ್ಲಿ ಒಳಜಗಳ ಶುರುವಾಗಿದೆ ಎಂದರು.

ಚುನಾವಣೆಗೆ ನಿಂತರೆ ಡಿ.ಕೆ. ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಇಬ್ಬರೂ ಸೋಲುತ್ತಾರೆ. ಇನ್ನು ಮುಖ್ಯ ಮಂತ್ರಿಯಾಗುವ ಪ್ರಶ್ನೆ ಎಲ್ಲಿಂದ ಅಧಿಕೃತ ವಿರೋಧ ಪಕ್ಷದ ಅರ್ಹತೆಯನ್ನೂ ಕಾಂಗ್ರೆಸ್ ಕಳೆದುಕೊಳ್ಳಲಿದೆ ಎಂದರು.

ನಿರ್ದೇಶಕಿ ಲೀನಾ ಮಣಿಮೇಖಲೈ ಕಾಳಿಕಾ ಮಾತೆಯ ಕೈಗೆ ಸಿಗರೇಟ್ ಕೊಟ್ಟು ಹಿಂದೂ ಸಂಸ್ಕೃತಿಗೆ ಅಪಮಾನ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಾವಿರಾರು ವರ್ಷಗಳಿಂದ ಭಾರತೀಯ ಸಂಸ್ಕೃತಿ ಸರ್ವೇಜನ ಸುಖಿನೋಭವಂತು ಎಂದು ಹೇಳುತ್ತಾ ವಿಶ್ವಕ್ಕೆ ಮಾರ್ಗದರ್ಶನ ನೀಡಿದ ಸಂಸ್ಕೃತಿ ನಮ್ಮದು. ಯಾರೋ ಒಬ್ಬರು ಅವಮಾನ ಮಾಡಿದಾಕ್ಷಣ ಕಾಳಿಕಾ ಮಾತೆಯನ್ನು ಪೂಜಿಸಿಕೊಂಡು ಬಂದವರ ಗೌರವ ಕಡಿಮೆಯಾಗುವುದಿಲ್ಲ ಎಂದರು.

ದುಷ್ಟ ಸಂಹಾರಕ್ಕೆ ಅವತಾರ ತಾಳಿದ ಕಾಳಿ ಮಾತೆ ಸರಿಯಾದ ಬುದ್ಧಿ ನೀಡುತ್ತಾಳೆ. ಹಿಂದೂಗಳ ಆಕ್ರೋಶಕ್ಕೆ ಈಗಾಗಲೇ ಅದು ಕಾರಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಆಕೆಯನ್ನು ಬಂಧಿಸುವ ಸಂಭವವಿದೆ ಎಂದರು.

ಕರ್ನಾಟಕದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ನಾಲ್ವರಿಗೆ ರಾಜ್ಯಸಭೆಯ ನಾಮನಿರ್ದೇಶನ ಸದಸ್ಯತ್ವ ನೀಡಿರುವುದನ್ನು ಸ್ವಾಗತಿಸುತ್ತೇನೆ. ಈ ಬಗ್ಗೆ ರಾಜಕಾರಣ ಸಲ್ಲದು ಎಂದರು.

ಮಳೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಮಳೆ ಬಂದ್ರೆ ಯಾಕೆ ಬಂತು ಎಂದು ನೀವು ಪ್ರಶ್ನೆ ಕೇಳುತ್ತೀರಿ. ಬಂದಿಲ್ಲ ಎಂದರೂ ಯಾಕೆ ಬಂದಿಲ್ಲ ಎಂದು ಕೇಳುತ್ತೀರಿ. ಕಳೆದ ಬಾರಿ ಮಳೆಯಿಂದಾದ ಅನಾಹುತವನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಅನೇಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಮನೆ ಬಿದ್ದವರಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡಲಾಗುವುದು ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here