ಹೊಸನಗರ: ತಾಲೂಕಿನ ಹರಿದ್ರಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಟ್ಟೆಮಲ್ಲಪ್ಪದ ಸಂತೆ ಮಾರುಕಟ್ಟೆ ಸುಂಕ ವಸೂಲಿ ಹರಾಜು ಪ್ರಕ್ರಿಯೆಯಲ್ಲಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆದಿದ್ದು, ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯಎಚ್.ವಿ.ಅಶೋಕಗೌಡ ಆಗ್ರಹಿಸಿದ್ದಾರೆ.
ಅವರು ಶನಿವಾರ ಪತ್ರಿಕಾ ಹೇಳಿಕೆ ನೀಡಿ, 2017 ರಿಂದ 2021ರ ವರೆಗಿನ ಆರ್ಥಿಕ ವರ್ಷದಲ್ಲಿ ಸುಂಕ ವಸೂಲಿ ಹರಾಜಿನಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ. ಹಿಂದಿನ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಎಚ್.ಯು.ಸುರೇಶ್ ಹಾಗೂ ಪಿಡಿಒ ಅಶೋಕ್ ಅವರು ನೇರವಾಗಿ ಹಗರಣದಲ್ಲಿ ಶಾಮೀಲಾಗಿದ್ದಾರೆ. ಸುಂಕ ವಸೂಲಿ ಹರಾಜು ಗುತ್ತಿಗೆ ಪಡೆದ ವ್ಯಕ್ತಿ ಪಂಚಾಯಿತಿಗೆ ಕಟ್ಟ ಬೇಕಾಗಿದ್ದ ಹಣವನ್ನು ಅಧ್ಯಕ್ಷರಿಗೆ ನೀಡಿದ್ದಾನೆ. ಆದರೆ ಅಧ್ಯಕ್ಷರು ಇದನ್ನು ಪಂಚಾಯಿತಿಗೆ ನೀಡುವ ಬದಲಾಗಿ ಸ್ವಂತಕ್ಕೆ ಬಳಸಿ ಕೊಂಡಿದ್ದಾರೆ. ಇದರಿಂದ ಗ್ರಾಮ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ. ಆದಾಯ ನಷ್ಟವಾಗಿದೆ ಎಂದು ಆಪಾದಿಸಿದರು.
ಪ್ರತಿ ವರ್ಷ 1ಲಕ್ಷಕ್ಕಿಂತಲೂ ಹೆಚ್ಚು ಮೊತ್ತಕ್ಕೆ ಹರಾಜಾಗಿದ್ದು, ಹರಾಜು ಹಣ ಜಮಾ ಆಗದಿದ್ದರೂ, ಸತತವಾಗಿ ಮೂರು ವರ್ಷ ಒಬ್ಬನೇ ಗುತ್ತಿಗೆದಾರನಿಗೆ ನಿಯಮ ಬಾಹಿರವಾಗಿ ಗುತ್ತಿಗೆ ನೀಡಲಾಗಿದೆ. ಈವರೆಗೆ ಒಟ್ಟಾರೆ 2.30 ಲಕ್ಷ ರೂ. ಹಣ ಗ್ರಾಮ ಪಂಚಾಯಿತಿಗೆ ಗುತ್ತಿಗೆದಾರನಿಂದ ಬಾಕಿ ಇದೆ. ಆದರೆ ಗುತ್ತಿಗೆದಾರರು ತಾವು ಸಂಪೂರ್ಣ ಹಣವನ್ನು ಆಗಿನ ಅಧ್ಯಕ್ಷರ ಹತ್ತಿರ ನೀಡಿರುವುದಾಗಿ ಲಿಖಿತವಾಗಿ ತಿಳಿಸಿದ್ದಾರೆ. ಪಿಡಿಓ ಹಾಗೂ ಅಧ್ಯಕ್ಷರು ಒಟ್ಟಾಗಿ ಈ ಅವ್ಯವಹಾರ ನಡೆಸಿದ್ದು, ಈಗ ಬೆಳಕಿಗೆ ಬಂದಿದೆ. ಸದರಿ ಅವ್ಯವಹಾರ ಕುರಿತು ಲೆಕ್ಕ ಪರಿಶೋಧಕರು ಆಕ್ಷೇಪಣೆ ಎತ್ತಿದ್ದಾರೆ. ತಮ್ಮನ್ನೂ ಸೇರಿದಂತೆ ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯರಾಗಿರುವ ಪೂರ್ಣಿಮ, ಗುರುಮೂರ್ತಿ, ಸೀತ ಎಂಬುವವರು ಒಟ್ಟಾಗಿ ಈ ಅವ್ಯವಹಾರದ ತನಿಖೆ ನಡೆಸುವಂತೆ ತಾಲೂಕು ಪಂಚಾಯಿತಿಗೆ ದೂರು ಸಲ್ಲಿಸಿದ್ದೇವೆ. ಕೂಡಲೇ ತನಿಖೆ ಕೈಗೊಂಡು ಅವ್ಯವಹಾರದಲ್ಲಿ ಶಾಮೀಲಾದ ವ್ಯಕ್ತಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
Related
You cannot copy content of this page