ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೆ ಜನರ ಪರದಾಟ ; ವೃದ್ಧೆಯನ್ನು ಜೋಳಿಗೆಯಲ್ಲಿ ಕಟ್ಟಿಕೊಂಡು ಆಸ್ಪತ್ರೆಗೆ ಕೊಂಡೊಯ್ದ ಕುಟುಂಬ !

0
178

ಕಳಸ: ತಾಲೂಕಿನ ಗಂಟೆಮಕ್ಕಿ ಗ್ರಾಮದಲ್ಲಿ ಇಂದಿಗೂ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದಿರುವುದರಿಂದ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಅನಾರೋಗ್ಯಕ್ಕೆ ತುತ್ತಾಗುವ ಜನರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲು ಸೂಕ್ತವಾದ ರಸ್ತೆಯೇ ಇಲ್ಲವಾಗಿದೆ. ಇಂತಹ ದಾರುಣ ಘಟನೆಯೊಂದು ನಡೆದಿದ್ದು, 85 ವರ್ಷದ ವೃದ್ಧೆಯನ್ನ ಆಸ್ಪತ್ರೆಗೆ ಹೋಗಲು ದಾರಿ ಇಲ್ಲದೇ ಜೋಳಿಗೆಯಲ್ಲಿ ಕಟ್ಟಿಕೊಂಡು ಕೊಂಡೊಯ್ದಿರುವುದು ಕಂಡುಬಂದಿದೆ.

ದಿವಂಗತ ವೀರಪ್ಪ ಗೌಡ ಅವರ ಪತ್ನಿ 86 ವರ್ಷದ ವೃದ್ಧೆ ವೆಂಕಮ್ಮ ಅನಾರೋಗ್ಯ ಒಳಗಾಗಿದ್ದಾರೆ. ಆದರೆ, ಅವರನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಈ ವೃದ್ಧೆಯ ಮನೆ ತಲುಪಲು ರಸ್ತೆ ಇಲ್ಲದ ಕಾರಣ ಅವರ ಬಂಧುಗಳು ಜೋಳಿಗೆಯಲ್ಲಿ ಮಲಗಿಸಿ ಮರದ ಬಡಿಗೆಗೆ ಕಟ್ಟಿ ಹೊತ್ತುಕೊಂಡು ಹೋಗಿದ್ದಾರೆ. ಈ ಧಾರುಣ ಸ್ಥಿತಿಯಿಂದಾಗಿ ವೃದ್ದೆ ವೆಂಕಪ್ಪ ಮತ್ತಷ್ಟು ನೋವು ಅನುಭವಿಸುವಂತಾಗಿದೆ.

ವೃದ್ಧೆ ವೆಂಕಮ್ಮ ಕಳೆದ 65-70 ವರ್ಷಗಳಿಂದಲೂ ಗಂಟೆಮಕ್ಕಿ ಗ್ರಾಮದಲ್ಲೇ ವಾಸವಿದ್ದಾರೆ. ಕಳೆದೊಂದು ವಾರದಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ದಾರಿ ಇಲ್ಲದೆ ಕುಟುಂಬಸ್ಥರು ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದರು. ಆರೋಗ್ಯ ತೀವ್ರ ಹದಗೆಟ್ಟಾಗ ಸ್ಥಳೀಯರು ಹಾಗೂ ಸಂಬಂಧಿಕರು ಜೋಳಿಗೆ ಕಟ್ಟಿಕೊಂಡು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಗ್ರಾಮದಲ್ಲಿ ಸುಮಾರು 8-10 ಮನೆಗಳಿದ್ದು, ಇಲ್ಲಿನವರಿಗೆ ಓಡಾಡಲು ರಸ್ತೆಯಿಲ್ಲವಾಗಿದೆ. ಜಮೀನಿಗೆ ಹೋಗಲು, ಹೊಲ-ಗದ್ದೆಗಳಿಗೆ ಗೊಬ್ಬರ, ಮನೆಗೆ ರೇಷನ್ ಎಲ್ಲವನ್ನು ತಲೆ ಮೇಲೆ ಹೊತ್ತುಕೊಂಡು ಹೋಗಬೇಕು. ಸ್ಥಳೀಯರು ಹತ್ತಾರು ವರ್ಷಗಳಿಂದ ರಸ್ತೆ ನಿರ್ಮಿಸಿ ಕೊಡುವಂತೆ ಅಧಿಕಾರಿಗಳಿಗೆ ನೂರಾರು ಮನವಿ ಮಾಡಿದರೂ ಯಾರೂ ಸ್ಪಂದನೆ ಮಾಡಿಲ್ಲ.

ವೃದ್ದೆ ವೆಂಕಮ್ಮ ಸಹ ತನ್ನ ಮನೆ ಸಂಪರ್ಕಕ್ಕೆ ರಸ್ತೆ ಸೌಲಭ್ಯ ಬೇಕು ಎಂದು ಹಲವು ಬಾರಿ ಜಿಲ್ಲಾಧಿಕಾರಿಯಿಂದ ಹಿಡಿದು ಕಂದಾಯ ಸಚಿವರ ವರೆಗೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. 2021ರಲ್ಲಿ ಖುದ್ದು ವೆಂಕಮ್ಮನವರೇ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮನವಿ ಮಾಡಿದ್ದರು. ಚುನಾವಣೆ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಭೇಟಿ ನೀಡಿ ರಸ್ತೆ ನಿರ್ಮಿಸಿ ಕೊಡುವ ಭರವಸೆ ನೀಡುತ್ತಾರೆ. ಆದರೆ, ಈವರೆಗೂ ಯಾರು ರಸ್ತೆ ನಿರ್ಮಿಸಿ ಕೊಡುವ ಗೋಜಿಗೆ ಹೋಗಿಲ್ಲ. ಗ್ರಾಮ ಪಂಚಾಯಿತಿ, ಅಧಿಕಾರಿಗಳಿಗೆ ರಸ್ತೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿಕೊಂಡರೆ ಅಧಿಕಾರಿಗಳು ಅಕ್ಕಪಕ್ಕದ ಜಮೀನು, ಮಾಲೀಕರ ಬಳಿ ಜಾಗ ಬಿಡಿಸಿಕೊಟ್ಟರೆ ರಸ್ತೆ ನಿರ್ಮಿಸಿ ಕೊಡುತ್ತೇವೆ ಎಂದು ಹೇಳುತ್ತಾರಂತೆ. ಆದರೆ, ಅಕ್ಕಪಕ್ಕದ ಜಮೀನುಗಳ ಮಾಲೀಕರು ರಸ್ತೆ ನಿರ್ಮಿಸಲು ಜಾಗ ಬಿಟ್ಟುಕೊಡಲು ತಯಾರಿಲ್ಲ ಎನ್ನಲಾಗುತ್ತಿದೆ.

ಜಾಹಿರಾತು

LEAVE A REPLY

Please enter your comment!
Please enter your name here