ಸೆ.20 ರಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೆಇಬಿ ಕಚೇರಿ ಎದುರು ಬೃಹತ್ ಪ್ರತಿಭಟನೆ: ಯಾಕೆ?

0
229

ಶಿವಮೊಗ್ಗ: ಅಡಿಕೆ ಸುಲಿಯುವ ಯಂತ್ರಕ್ಕೆ ಎಲ್‌ಟಿ-5 ಬದಲಾಗಿ ಎಲ್‌ಟಿ-2 ಅಡಿಯಲ್ಲಿ ವಿದ್ಯುತ್ ಉಪಯೋಗಿಸಲು ಅನುಮತಿ ನೀಡಬೇಕು. ಸುಟ್ಟು ಹೋದ ಟಿ.ಸಿ.ಗಳನ್ನು ಕಾನೂನು ಪ್ರಕಾರ 72 ಗಂಟೆಯೊಳಗೆ ಬದಲಾವಣೆ ಮಾಡಿಕೊಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೆ.20ರ ಬೆಳಿಗ್ಗೆ 11ಗಂಟೆಗೆ ರೈಲ್ವೆ ನಿಲ್ದಾಣದ ಬಳಿಯ ಕೆಇಬಿ ಕಚೇರಿ ಎದುರು ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರು ಸ್ವಂತಕ್ಕಾಗಿ ಒಂದು ವರ್ಷದಲ್ಲಿ 1ರಿಂದ 3ತಿಂಗಳು ಮಾತ್ರ ಅಡಿಕೆ ಸುಲಿಯುವ ಯಂತ್ರವನ್ನು ಉಪಯೋಗಿಸುತ್ತಾರೆ. ಸ್ವಂತ ತೋಟದಿಂದ ಅಡಿಕೆ ಕೊಯ್ದು ಪರಿಷ್ಕರಣೆ ಮಾಡಿ, ಮಾರಾಟ ಮಾಡುತ್ತಾರೆ. ಈಗಾಗಲೇ ಮನೆಗಳಿಗೆ ವಿದ್ಯುತ್ ಸಂಪರ್ಕ ಇದ್ದು, ಮನೆಯ ಮೀಟರ್ ನಿಂದಲೇ ವಿದ್ಯುತ್ ಉಪಯೋಗಿಸಿ ಎಲ್‌ಟಿ-2 ದರಪಟ್ಟಿಯಂತೆ ಬಿಲ್ ಪಾವತಿ ಮಾಡುತ್ತಿದ್ದಾರೆ ಎಂದರು.

ಈಗ ವಿದ್ಯುತ್ ಇಲಾಖೆಯವರು ಕೈಗಾರಿಕೆಗಳಿಗೆ ಉಪಯೋಗಿಸುವ ಎಲ್‌ಟಿ-5 ವಿದ್ಯುತ್ ಸಂಪರ್ಕ ಪಡೆದು ಅಡಿಕೆ ಸುಲಿಯುವ ಯಂತ್ರ ಉಪಯೋಗಿಸಬೇಕೆಂದು ತೊಂದರೆ ನೀಡುತ್ತಿದ್ದಾರೆ. ಹೊಸ ದರ ಪಟ್ಟಿ ಪ್ರಕಾರ ಇನ್ನೂ 9 ತಿಂಗಳು ರೈತರು ವಿದ್ಯುತ್ ಉಪಯೋಗಿಸದೇ ಇದ್ದರೂ ಕನಿಷ್ಠ ಶುಲ್ಕ ಕಟ್ಟಬೇಕಾಗುತ್ತದೆ. ಆದ್ದರಿಂದ ಅಡಿಕೆ ಸುಲಿಯುವ ಯಂತ್ರಕ್ಕೆ ಎಲ್‌ಟಿ-5 ಬದಲಾಗಿ ಎಲ್‌ಟಿ-2 ಅಡಿಯಲ್ಲಿ ವಿದ್ಯುತ್ ಉಪಯೋಗಿಸಲು ಅನುಮತಿ ನೀಡಬೇಕು. ಐ.ಟಿ. ಸೆಟ್‌ಗಳಿಗೆ ಕನಿಷ್ಠ 10ಗಂಟೆ 3ಫೇಸ್ ನಿರಂತರ ವಿದ್ಯುತ್ ನೀಡಬೇಕು. ಗ್ರಾಮಗಳಲ್ಲಿ ವಿಧಿಸಿರುವ ಮಾಸಿಕ ನಿಗದಿತ ಶುಲ್ಕ ಕೈಬಿಡಬೇಕು ಸೇರಿದಂತೆ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ. ರಾಘವೇಂದ್ರ, ಎಸ್. ಶಿವಮೂರ್ತಿ, ಹಿಟ್ಟೂರು ರಾಜು, ಸಿ. ಚಂದ್ರಪ್ಪ, ರಾಜಪ್ಪ, ಎ. ಯೋಗೇಶ್ ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here