ಹೊಸನಗರ : ಕೇವಲ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ ಅಮಾಯಕ ಮಹಿಳೆಯರ ಮೇಲೆ ತನ್ನ ಪೌರುಷ ಪ್ರದರ್ಶಿಸುವ ಸೈಕೋ ಗಿರೀಶ್ ಆಚಾರ್ ವಿರುದ್ಧ ರಾಜ್ಯದ ಗೃಹ ಸಚಿವರು ಕ್ರಮಕೈಗೊಳ್ಳಬೇಕೆಂದು ಹೊಸನಗರ ತಾಲೂಕು ಮತ್ತಿಮನೆ ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಇಂದು ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆತನನ್ನು ಬೆಂಬಲಿಸುವವರು ನೈತಿಕತೆ ಹೊಂದಿರುವವರು ಆಗಿದ್ದರೆ ಮತ್ತಿಮನೆಗೆ ಬರಬೇಕು ಎಂದು ಸಹ ಅಲ್ಲಿನ ಗ್ರಾಮಸ್ಥರು ಸವಾಲು ಹಾಕಿದರು.
ಮತ್ತಿಮನೆಯು ಹೊಸನಗರ ತಾಲೂಕಿನ ವನಸಿರಿ ಕೊಡಚಾದ್ರಿ ಬೆಟ್ಟದ ತಪ್ಪಲಿನಲ್ಲಿ ಇದ್ದು ಈ ಭಾಗದಲ್ಲಿ ಒಂಟಿ ಮನೆಗಳೇ ಹೆಚ್ಚಿವೆ. ಮನೆಯಲ್ಲಿ ಗಂಡಸರು ಕೂಲಿ ಕೆಲಸ ಮಾಡಲು ಬೆಳಗ್ಗೆ ಮನೆ ಬಿಟ್ಟರೆ ಅವರು ಬರುವುದು ಸಂಜೆ ವೇಳೆಗೆ. ಅಲ್ಲಿಯವರೆಗೂ ಮನೆಯಲ್ಲಿ ಹೆಂಗಸರು ತಮ್ಮ ಚಿಕ್ಕಪುಟ್ಟ ಮಕ್ಕಳೊಂದಿಗೆ ಇರುತ್ತಾರೆ.
ಈ ಅಂಶವನ್ನೇ ಟಾರ್ಗೆಟ್ ಮಾಡಿಕೊಂಡು ಅಂತಹ ಮನೆಗಳನ್ನು ಆಯ್ಕೆ ಮಾಡಿಕೊಳ್ಳುವ ಗಿರೀಶ್ ಆಚಾರ್ ಆರ್.ಟಿ.ಐ ಕಾರ್ಯಕರ್ತನೆಂದು ಅಮಾಯಕ ಗ್ರಾಮಸ್ಥರನ್ನು ಬೆದರಿಸುವ ಹಾಗೂ ಒಂಟಿ ಮಹಿಳೆಯರನ್ನು ಅಶ್ಲೀಲವಾಗಿ ಕಾಣುವ ಹವ್ಯಾಸವನ್ನು ಹೊಂದಿರುವುದಾಗಿ ಗ್ರಾಮದ ಮಹಿಳೆಯರು ದೂರಿದ್ದಾರೆ.
ಅಮಾಯಕ ಮಹಿಳೆಯರು ಹೆಚ್ಚಿದ್ದು ಕಳೆದ ವಾರವಷ್ಟೇ ಅವರ ಮನೆಗೂ ನೀರು ಹಾಗೂ ಬೆಂಕಿಕಡ್ಡಿ ಕೇಳುವ ನೆಪವೊಡ್ಡಿ ಬಂದು ಅಶ್ಲೀಲವಾಗಿ ನಡೆದುಕೊಂಡ ಬಗ್ಗೆಯೂ ವಿವರಿಸಿದರು.
ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ.ವಿ ಸುಬ್ರಮಣ್ಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವರಾಮಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಶಕುಂತಲಾ, ಶ್ರೀಧರ್, ಕೆ.ವಿ ಕೃಷ್ಣಮೂರ್ತಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.