ಹೊಸನಗರ: ತಾಲ್ಲೂಕಿನ ಸೊನಲೆ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಆಡಳಿತ ವೈಖರಿಯನ್ನು ವಿರೋಧಿಸಿ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಜನರು ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು ಸೇರಿ ಇಲ್ಲಿನ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲು ಪಂಚಾಯಿತಿಯ ಇಓಗೆ ಮನವಿ ಸಲ್ಲಿಸಿದ ಘಟನೆ ಇಂದು ನಡೆದಿದೆ.
ಸೊನಲೆ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸಂತೋಷ ಎಂ.ಆರ್, ರವರಿಂದ ಈ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯದೇ ಬಂದಂತಹ ಅನುದಾನಗಳು ಸದ್ಬಳಕೆಯಾಗದೇ ದುರುಪಯೋಗವಾಗುತ್ತಿದೆ. ಗ್ರಾಮಸ್ಥರು ತಮಗೆ ಆಗಬೇಕಾದ ಕೆಲಸಗಳ ಬಗ್ಗೆ ಅರ್ಜಿಯನ್ನು ಸಲ್ಲಿಸಿದರೆ ಈ ಅರ್ಜಿಗಳಲ್ಲಿಯ ವಿಷಯಗಳ ಬಗ್ಗೆ ಪಂಚಾಯಿತಿಗಳಲ್ಲಿ ಸದಸ್ಯರ ಸಭೆ ನಡೆಯುವಾಗ ಸದಸ್ಯರ, ಉಪಾಧ್ಯಕ್ಷರ ಗಮನಕ್ಕೆ ತಂದು ಚರ್ಚೆ ನಡೆಸದೆ, ವಿಚಾರಣೆಯನ್ನು ಕೂಡ ಮಾಡದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರಲ್ಲದೇ, ಪಕ್ಷಾತೀತವಾಗಿ ಆಡಳಿತ ನಡೆಸಬೇಕಾದ ಪಿಡಿಒ, ಏಕಪಕ್ಷೀಯವಾಗಿ ಆಡಳಿತ ನಡೆಸುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಇವರ ಅವಧಿಯಲ್ಲಿ ಸೊನಲೆ ಗ್ರಾಮ ಪಂಚಾಯಿತಿಯಲ್ಲಿ ಅನೇಕ ರೀತಿಯಲ್ಲಿ ಅವ್ಯವಹಾರ ನಡೆದಿದೆ ಎಂಬುದು ಸ್ಥಳೀಯರಿಂದಲೇ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಇದನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಎಚ್ಚೆತ್ತು ಇವರ ಬಗ್ಗೆ ಕ್ರಮ ಕೈಗೊಳ್ಳಬೇಕು ಅಲ್ಲದೇ ಇವರನ್ನು ಕೂಡಲೇ ಬೇರೆ ಕಡೆಗೆ ವರ್ಗಾವಣೆ ಮಾಡಲು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮಕೈಗೊಳ್ಳಲು ಮುಂದಾಗಬೇಕಾಗಿದೆ.
ಇವರ ನಡುವಳಿಕೆಗಳ ಬಗ್ಗೆ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ಮತ್ತು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿರವರಿಗೆ ಮನವಿ ಸಲ್ಲಿಸಲಾಗಿತ್ತು. ಅವರು ಕೂಡ ತಮ್ಮ ಗಮನಕ್ಕೆ ತಂದರೂ ತಾವು ಸೊನಲೆ ಪಿಡಿಒ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗದೆ ಮೂಕ ಪ್ರೇಕ್ಷಕರಾಗಿದ್ದಾರೆ. ಪಂಚಾಯಿತಿಯ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು ಕೂಡಲೇ ಎಚ್ಚೆತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ ಎಂ.ಆರ್ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗದಿದ್ದರೆ, ತಾಲ್ಲೂಕು ಪಂಚಾಯಿತಿ ಎದುರು ಉಗ್ರ ಹೋರಾಟದ ಹಾದಿ ಹಿಡಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸೊನಲೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಶಾರದಮ್ಮ, ಯುವ ಮುಖಂಡರಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಮಹೇಶ್ ಗೌಡ್ರು, ನಾಗೇಶ್ ಗೌಡ್ರು, ರಾಮಚಂದ್ರ ಡಿ, ಕೃಷ್ಣಮೂರ್ತಿ, ಬಾಲಚಂದ್ರಪ್ಪ ಗೌಡ್ರು, ಪ್ರಭು ಶೆಟ್ರು, ಗ್ರಾಮಸ್ಥರಾದ ಉಮೇಶ್, ಮೂರ್ತಿರಾವ್, ವೀರಭದ್ರ ಸೇರಿದಂತೆ ಗ್ರಾಮ ಪಂಚಾಯಿತಿಯ ಸದಸ್ಯರು, ವಿವಿಧ ಪಕ್ಷಗಳ ನಾಯಕರು ಮುಖಂಡರು ಹಾಜರಿದ್ದರು.
Related