ಸೊರಬದಲ್ಲಿ ಸಂಭ್ರಮದಿಂದ ಜರುಗಿದ ಶ್ರೀ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ

0
131

ಸೊರಬ: ಪಟ್ಟಣದ ಪುರದೈವ ಶ್ರೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.

ರಥೋತ್ಸವ ಅಂಗವಾಗಿ ಶ್ರೀ ದೇವರಿಗೆ ವಿಶೇಷ ಅಲಂಕಾರ ಪೂಜೆ, ಅಭಿಷೇಕ ಹಾಗೂ ಪಟ್ಟಣದ ಪ್ರಮುಖ ಬೀದಿಯಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಘನಪಾಠಿ ನಾರಾಯಣ ಭಟ್ ಮರಾಠೆ ಅವರು ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು. ರಥೋತ್ಸವಕ್ಕೆ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಚಾಲನೆ ನೀಡಿದರು. ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು, ಉತ್ತುತ್ತು, ಕಾಳು ಮೆಣಸು ಬೀರುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ರಥವು ಶಿಥಿಲಗೊಂಡಿರುವುದರಿಂದ ತಜ್ಞರ ಸಲಹೆಯಂತೆ ದೇವಸ್ಥಾನದ ಮುಂಭಾಗದಿಂದ ಕೇವಲ ಒಂದು ನೂರು ಅಡಿಯಷ್ಟು ಮಾತ್ರ ರಥವನ್ನು ಎಳೆಯಲಾಯಿತು. ನೂತನ ರಥ ಈ ಬಾರಿಯ ರಥೋತ್ಸವಕ್ಕೆ ನಿರ್ಮಾಣವಾಗಬಹುದು ಎಂಬ ಆಶಾಭಾವನೆ ಹೊಂದಿದ್ದ ಭಕ್ತರಿಗೆ ನಿರಾಶೆಯಾಯಿತು. ರಥ ಹಾದು ಹೋಗುವ ಮಾರ್ಗದಲ್ಲಿ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಚಿಕ್ಕಪೇಟೆ ಮಾರ್ಗದಲ್ಲಿ ಏಕ ಮುಖ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಆದ್ದರಿಂದ ಟ್ರಾಫಿಕ್ ಸಮಸ್ಯೆ ಎದುರಾಗಲಿಲ್ಲ.

ಭಕ್ತರಿಂದ ಭಾರತೀ ಶೆಟ್ಟಿ ಅವರಿಗೆ ಅಭಿನಂದನೆ:

ದೇವಸ್ಥಾನವು ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಭಕ್ತರಿಗಾಗಿ ಭಕ್ತರೇ ಆಯೋಜಿಸಿದ ಅನ್ನಸಂತರ್ಪಣೆ ವಿತರಿಸಲು ದೇವಸ್ಥಾನದ ಪಕ್ಕದಲ್ಲಿ ಇರುವ ಶ್ರೀ ರಂಗ ಕನ್ವೆನ್ಷನ್ ಹಾಲ್ ನೀಡಲು ತಹಶೀಲ್ದಾರ್ ಮತ್ತು ಪಿಡಬ್ಲ್ಯುಡಿ ಅಧಿಕಾರಿಗಳು ನಿರಾಕರಿಸಿದರು. ಇದ್ದರಿಂದ ಕೆಲ ಕಾಲ ಭಕ್ತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿಯಾಯಿತು. ದೇವಸ್ಥಾನದ ಆದಾಯಕ್ಕೆ ಮಾತ್ರ ಗಮನ ನೀಡುವ ಅಧಿಕಾರಿಗಳು ಭಕ್ತರಿಗೆ ಸೌಲಭ್ಯಗಳನ್ನು ಕಲ್ಪಿಸುವುದಿಲ್ಲ. ದೇವಸ್ಥಾನದಿಂದ ಲಕ್ಷಾಂತರ ರೂ., ಆದಾಯ ವಿದ್ದರೂ, ದೇವಸ್ಥಾನಕ್ಕೆ ಕನಿಷ್ಟ ಸುಣ್ಣ-ಬಣ್ಣ ಮಾಡಿಸಿಲ್ಲ ಮತ್ತು ದೇವಸ್ಥಾನವನ್ನು ಸ್ವಚ್ಚಗೊಳಿಸಲಿಲ್ಲ ಎಂದು ಭಕ್ತರು ಆರೋಪಿಸಿದರು. ಮಧ್ಯ ಪ್ರವೇಶಿಸಿದ ವಿಧಾನಪರಿಷತ್ ಸದಸ್ಯೆ ಭಾರತೀ ಶೆಟ್ಟಿ ಅವರು, ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಅನುದಾನದಲ್ಲಿ ಸುಂದರವಾದ ಕನ್ವೆನ್ಷನ್ ಹಾಲ್ ನಿರ್ಮಿಸಲಾಗಿದೆ. ದೇವಸ್ಥಾನಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಉಚಿತವಾಗಿ ನೀಡುವಂತೆ ಸೂಚನೆ ನೀಡಿದರು. ಮಣಿದ ಅಧಿಕಾರಿಗಳು ಕೊನೆಯಲ್ಲಿ ಕನ್ವೆನ್ಷನ್‌ ಹಾಲ್ ನೀಡಿದರು. ಇದಕ್ಕೆ ಭಕ್ತರು ವಿಧಾನ ಪರಿಷತ್ ಸದಸ್ಯೆ ಭಾರತೀ ಶೆಟ್ಟಿ ಅವರಿಗೆ ಅಭಿನಂದಿಸಿದರು.

ಪುರಸಭೆ ಅಧ್ಯಕ್ಷ ಈರೇಶ್ ಮೇಸ್ತ್ರಿ, ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಸದಸ್ಯರಾದ ಎಂ.ಡಿ. ಉಮೇಶ್, ಶ್ರೀರಂಜನಿ, ಯು. ನಟರಾಜ್, ಪ್ರಸನ್ನಕುಮಾರ್ ದೊಡ್ಮನೆ, ಪ್ರಭು ಮೇಸ್ತ್ರಿ, ಮಾಜಿ ಉಪಾಧ್ಯಕ್ಷೆ ಗೌರಮ್ಮ ಭಂಡಾರಿ, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲ ಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ಸುರಭಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಸ್.ಜಿ. ರಾಮಚಂದ್ರಪ್ಪ, ಪ್ರಮುಖರಾದ ಪ್ರಭಾಕರ ರಾಯ್ಕರ್, ಪಾಣಿ ರಾಜಪ್ಪ, ಗುರುಪ್ರಸನ್ನಗೌಡ ಬಾಸೂರು, ಯೋಗೇಶ್ ವಕೀಲ, ಡಿ. ಶಿವಯೋಗಿ, ಅಶೋಕ್ ಶೇಟ್, ಬಂದಗಿ ಬಸವರಾಜ ಶೇಟ್, ಸತೀಶ್ ಬೈಂದೂರು, ನೆಮ್ಮದಿ ಸುಬ್ರಹ್ಮಣ್ಯ, ನೆಮ್ಮದಿ ಶ್ರೀಧರ್, ಎಂ.ಪಿ. ರಾಘವೇಂದ್ರ, ಸುಧೀರ್ ಪೈ, ಟಿ.ಆರ್. ಸುರೇಶ್, ಮಂಜಣ್ಣ, ಪಾಂಡುರಂಗ, ಟಿ.ಎಲ್. ಗಿರೀಶ್, ನಾಗಪ್ಪ ವಕೀಲ, ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ, ಪಟ್ಟಣ ಸೇರಿದಂತೆ ಹಿರೇಶಕುನ, ಹಳೇಸೊರಬ ಗ್ರಾಮಸ್ಥರು ಹಾಗೂ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here