ಸೊರಬ: ನಗರ ಸಾರಿಗೆ ಬಸ್ ಸೇವೆಗೆ ಶಾಸಕ ಕುಮಾರ್ ಬಂಗಾರಪ್ಪನವರಿಂದ ಹಸಿರು ನಿಶಾನೆ

0
955

ಸೊರಬ: ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಪುರಸಭೆ ವತಿಯಿಂದ ನಗರ ಸಾರಿಗೆ ಬಸ್ ಸೇವೆಗೆ ಶಾಸಕ ಎಸ್. ಕುಮಾರ್ ಬಂಗಾರಪ್ಪ ಹಸಿರು ನಿಶಾನೆ ತೋರುವ ಮೂಲಕ ಸೋಮವಾರ ಚಾಲನೆ ನೀಡಿದರು.

ಇದಕ್ಕೂ ಮೊದಲು ಪಟ್ಟಣದ ಪುರದೈವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಘನಪಾಠಿ ನಾರಾಯಣ ಭಟ್ ಮರಾಠೆ ಅವರು ಪೂಜಾ ಕಾರ್ಯ ನೆರವೇರಿಸಿದರು. ಬಸ್ ಸೇವೆಗೆ ಚಾಲನೆ ನೀಡಿದ ಶಾಸಕರು ಮರೂರುವರೆಗೆ ಸಾರಿಗೆ ಬಸ್‌ನಲ್ಲಿಯೇ ಪ್ರಯಾಣ ಮಾಡಿದ್ದು ವಿಶೇಷವಾಗಿತ್ತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್. ಕುಮಾರ್ ಬಂಗಾರಪ್ಪ, ಪುರಸಭೆ ವ್ಯಾಪ್ತಿಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ನಗರ ಸಾರಿಗೆ ಬಸ್ ಸೇವೆಯಿಂದ ಸಾಕಷ್ಟು ಅನುಕೂಲವಾಗಲಿದೆ. ನೆರೆಯ ಗ್ರಾಮಗಳಿಂದ ಪಟ್ಟಣಕ್ಕೆ ಆಗಮಿಸುವ ರೈತರಿಗೆ ಹಾಗೂ ತರಕಾರಿ, ಹಾಲು ಮತ್ತಿತರರ ರೈತರ ಉತ್ಪನ್ನಗಳನ್ನು ತಂದು ಮಾರುವವರಿಗೆ, ಆಸ್ಪತ್ರೆ ಹಾಗೂ ಸರ್ಕಾರಿ ಕಚೇರಿಗಳಿಗೆ ತೆರಳುವವರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಜನತೆಯ ಅನುಕೂಲಕ್ಕೆ ತಕ್ಕಂತೆ ಬಸ್ ಸೇವೆಗಳನ್ನು ಹೆಚ್ಚಿಸುವ ಕುರಿತು ಚಿಂತಿಸಲಾಗುವುದು. ಪ್ರಸ್ತುತ ಒಂದು ಬಸ್ ಪುರಸಭೆ ವ್ಯಾಪ್ತಿಗೊಳಪಡುವ ಗ್ರಾಮಗಳಲ್ಲಿ ಸಂಚರಿಸಲಿದೆ. ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು, ಪುರಸಭೆ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಜರುಗುತ್ತಿವೆ. ಮುಂದಿನ ದಿನಗಳಲ್ಲಿ ಪಟ್ಟಣವು ಸಹ ಬೆಳೆಯಲಿದೆ. ಈ ನಿಟ್ಟಿನಲ್ಲಿ ನಗರ ಸಾರಿಗೆ ಆರಂಭಿಸಲಾಗಿದೆ ಎಂದರು.

ಸಾರಿಗೆ ಸೇವೆಯು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹೊಸಪೇಟೆ ಬಡಾವಣೆ ಮಾರ್ಗವಾಗಿ ಜೇಡಗೇರಿ ಮಾರಿಗುಡಿ ಲಾಸ್ಟ್ ಸ್ಟಾಪ್, ಸರ್ಕಾರಿ ಆಸ್ಪತ್ರೆಯಿಂದ ಹೊಸಪೇಟೆ ಬಡಾವಣೆ ಮಾರ್ಗವಾಗಿ ಹಳೇಸೊರಬ, ಸರ್ಕಾರಿ ಆಸ್ಪತ್ರೆಯಿಂದ ಜ್ಯೂನಿಯರ್ ಕಾಲೇಜ್, ಕೊಡಕಣಿ ಮಾರ್ಗವಾಗಿ ಶೀಗೆಹಳ್ಳಿ, ಸರ್ಕಾರಿ ಆಸ್ಪತ್ರೆಯಿಂದ ಜಂಗಿನಕೊಪ್ಪ, ಹಾಗೂ ಸರ್ಕಾರಿ ಆಸ್ಪತ್ರೆಯಿಂದ ಶ್ರೀರಂಗನಾಥ ದೇವಸ್ಥಾನ ಮಾರ್ಗವಾಗಿ ಮರೂರಿಗೆ ಸಂಪರ್ಕಕಲ್ಪಿಸಲಿದೆ.

ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ತಹಶೀಲ್ದಾರ್ ಶಿವಾನಂದ ರಾಣೆ, ಪುರಸಭೆ ಮುಖ್ಯಾಧಿಕಾರಿ ಶೆಲ್ಜಾ ನಾಯ್ಕ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಆರ್. ನವೀನ್, ಸಾಗರ ಡಿಪೊ ಘಟಕದ ವ್ಯವಸ್ಥಾಪಕ ಡಿ.ಎಸ್. ರಾಜಪ್ಪ, ಮುಖಂಡರಾದ ಜೆ. ಶಿವಾನಂದಪ್ಪ, ಭೋಗೇಶ್ ಶಿಗ್ಗಾ, ದೇವೇಂದ್ರಪ್ಪ, ಟಿ.ಆರ್. ಸುರೇಶ್, ಶಿವಕುಮಾರ್ ಕಡಸೂರು ಸೇರಿದಂತೆ ಪುರಸಭೆ ಸದಸ್ಯರು, ಸ್ಥಳೀಯ ಮುಖಂಡರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here