ಸೌಲಭ್ಯ ವಂಚಿತ ಹಿಂದುಳಿದವರಿಗೆ ನ್ಯಾಯ ದೊರಕಿಸಲು ಬದ್ಧ : ಜಯಪ್ರಕಾಶ್ ಹೆಗ್ಡೆ

0
223

ಚಿಕ್ಕಮಗಳೂರು: ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದರೂ, ಕೆಲವರು ದಾಖಲೆಗಳಲ್ಲಿ ಜಾತಿ ನಮೂದಿಸುವಾಗ ಉಂಟಾಗುವ ಕೆಲವು ದೋಷಗಳಿಂದ ಜಾತಿ ಪ್ರಮಾಣ ಪತ್ರ ದೊರಕದೇ, ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗಿದ್ದು, ಅಂತಹ ವ್ಯಕ್ತಿಗಳಿಗೆ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗವು ವಿಶೇಷವಾಗಿ ಗಮನಹರಿಸಿ ಕಾನೂನು ವ್ಯಾಪ್ತಿಯಲ್ಲಿ ನ್ಯಾಯ ದೊರಕಿಸಿಕೊಡಲು ಬದ್ಧವಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅರ್ಜಿಗಳಲ್ಲಿ ನೀಡಿರುವ ಜಾತಿಯ ಹೆಸರಿಗೂ ಹಾಗೂ ದಾಖಲೆಗಳಲ್ಲಿ ನಮೂದಿಸಿರುವ ಜಾತಿಯ ಹೆಸರಿಗೂ ಹೊಂದಾಣಿಕೆಯಾಗದೇ, ಆ ಜಾತಿಯೂ ಅಧಿಕೃತ ಪಟ್ಟಿಯಿಂದ ಹೊರತಾಗಿದ್ದರೆ, ಜಾತಿ ಪ್ರಮಾಣ ಪತ್ರ ನಿರಾಕರಿಸಲಾಗುತ್ತದೆ. ಆದರೂ ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಮಹಜರ ಮಾಡಿ, ಅರ್ಜಿದಾರರ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿ ಪರಿಗಣಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ತಹಶೀಲ್ದಾರರಿಗೆ ಸೂಚಿಸಿದರು.

ವಲಸಿಗರಿಗೆ ಜಾತಿ ಪ್ರಮಾಣ ಪತ್ರ ನೀಡುವ ಸಂಬಂಧ ಭಾಷೆಯು ನಿರ್ಬಂಧನೆಯಾಗಬಾರದು. ಆದರೆ ಕರ್ನಾಟಕ ರಾಜ್ಯ ಏಕೀಕರಣದ(1956) ಮುನ್ನ ಕರ್ನಾಟಕಕ್ಕೆ ಬಂದವರಿಗೆ ಮಾತ್ರ ಜಾತಿ ಪ್ರಮಾಣ ಪತ್ರ ನೀಡಲಾಗುವುದು ಎಂದರು.

ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಸದಸ್ಯ ಕಲ್ಯಾಣ್ ಕುಮಾರ್ ಹೆಚ್.ಎಸ್ ಮಾತನಾಡಿ, ಜಾತಿಯ ಹೆಸರು ಪಟ್ಟಿಯಲ್ಲಿರದಿದ್ದರೆ ಅದನ್ನು ಪಟ್ಟಿಗೆ ಸೇರಿಸಲು ಅರ್ಜಿಗಳನ್ನು ನೀಡಲು ವ್ಯಾಪಕವಾಗಿ ಪ್ರಚಾರ ಮಾಡಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ತಂದೆ-ತಾಯಿ ಅಂತರ ಜಾತಿ ವಿವಾಹವಾಗಿದ್ದು, ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಾಗ ಅಥವಾ ತಂದೆ-ತಾಯಿ ವಿಚ್ಛೇದನ ಪಡೆದಾಗ, ತಾಯಿಯ ಶುಶ್ರೂಷೆಯಲ್ಲಿ ಬೆಳೆದರೆ ಅಂತಹ ಮಕ್ಕಳಿಗೆ ತಾಯಿಯ ಜಾತಿಯನ್ನು ಪರಿಗಣಿಸಿ ಜಾತಿ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದರು.

ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ್.ವೈ ಸಭೆಗೆ ಮಾಹಿತಿ ನೀಡಿ, 2020-21 ನೇ ಸಾಲಿನ ವಿದ್ಯಾರ್ಥಿ ವೇತನ ವಿತರಣೆಯಲ್ಲಿ ರಾಜ್ಯದಲ್ಲಿ ಚಿಕ್ಕಮಗಳೂರು 2ನೇ ಸ್ಥಾನದಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಹಿಂದಿನ ಸಾಲಿಗಿಂತ 4,000 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದರು.

ವಿದ್ಯಾರ್ಥಿ ನಿಲಯಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡುವ ಬಗ್ಗೆ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ವಾಟ್ಸ್ ಅಪ್ ಗುಂಪುಗಳ ಮುಖಾಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಸದಸ್ಯರಾದ ರಾಜಶೇಖರ್.ಬಿ.ಎಸ್, ಶಾರದಾನಾಯ್ಕ್, ಅರುಣ್ ಕುಮಾರ್ ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್.ಎಂ.ಹೆಚ್ ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರುಗಳು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here