ರಿಪ್ಪನ್ಪೇಟೆ : ಕೋಡೂರು ಸಮೀಪದ ಶಾಂತಪುರ ಬಳಿ ಇರುವ ಅಬ್ಬಿಗುಂಡಿ ಹೊಳೆಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಯೋರ್ವ ನೀರಿನ ಸುಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.
ಕೋಡೂರು ಗ್ರಾಪಂ ವ್ಯಾಪ್ತಿಯ ಸಿದ್ಧಗಿರಿ ನಿವಾಸಿ ಕ್ವಾರೆ ಮಂಜಣ್ಣ ಇವರ ಪುತ್ರ ಕಿರಣ್ (17) ಮೃತ ದುರ್ದೈವಿಯಾಗಿದ್ದು, ಈತ ಹೊಸನಗರ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ನೇಹಿತ ಯಶವಂತ್ ಎಂಬಾತನೊಂದಿಗೆ ಶಾಂತಪುರ ಸಮೀಪದ ಅಬ್ಬಿಗುಂಡಿ ಹೊಳೆಯಲ್ಲಿ ಈಜಲು ಹೋದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಈ ಘಟನೆ ನಡೆದ ತಕ್ಷಣ ಆತನ ಜೊತೆಗಿದ್ದ ಸ್ನೇಹಿತ ಯಶವಂತ್ ಹೊಳೆಯ ಸಮೀಪವಿದ್ದ ಮನೆಯವರಿಗೆ ಮಾಹಿತಿ ತಿಳಿಸಿದ್ದಾನೆ. ಅಷ್ಟರಲ್ಲಾಗಲೆ ಕಿರಣ್ ನೀರುಪಾಲಾಗಿದ್ದ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಈ ಘಟನೆ ಸಂಬಂಧ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.