ಸ್ಫೋಟದ ತೀವ್ರತೆಯ ಪರೀಕ್ಷೆ ಆಗುವ ತನಕ ಕಲ್ಲು ಕ್ವಾರೆ ಕೆಲಸ ನಿಲ್ಲಿಸಿ ; ಡಿಸಿ

0
520

ಸೊರಬ : ಸ್ಫೋಟದ ತೀವ್ರತೆಯ ಪರೀಕ್ಷೆ ಆಗುವ ತನಕ ಕ್ವಾರೆ ಕೆಲಸ ನಿಲ್ಲಿಸಿ, ವರದಿ ಬಂದ ನಂತರ ಮುಂದಿನ ಕ್ರಮದ ಕುರಿತು ನಾನು ತಿಳಿಸುತ್ತೇನೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಗಣಿಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಹಿಂದೆ ತಾಲ್ಲೂಕು ಚಂದ್ರಗುತ್ತಿ ಹೋಬಳಿ ಬಸ್ತಿಕೊಪ್ಪದ ಬಿಳಿಕಲ್ಲು ಗಣಿಗಾರಿಕೆ ಸಮಸ್ಯೆ ಕುರಿತಂತೆ ಗ್ರಾಮಸ್ಥರು ಹಾಗೂ ವೃಕ್ಷಲಕ್ಷ ಆಂದೋಲನದವರು ಸಲ್ಲಿಸಿದ್ದ ಮನವಿ ಮೇರೆಗೆ ಗ್ರಾಮಕ್ಕಾಗಮಿಸಿದ ಅವರು, ಗಣಿವಿಜ್ಞಾನಿ ಪಿ.ಎಸ್.ನವೀನ್ ಅವರೊಂದಿಗೆ ಸ್ಫೋಟಕದ ಕುರಿತು ಮಾಹಿತಿ, ಗಣಿಗಾರಿಕೆ ನಡೆಯುತ್ತಿರುವ ಸ್ಥಳದಿಂದ ವಾಸದ ಮನೆಗಳು ಎಷ್ಟು ದೂರದಲ್ಲಿದೆ. ತೀವ್ರತೆಯ ಪ್ರಮಾಣ, ಪರಿಸರದ ಮೇಲಾಗುತ್ತಿರುವ ಹಾನಿ ಮುಂತಾದ ತಾಂತ್ರಿಕ ವಿಷಯಗಳ ಕುರಿತು ಸ್ಪಷ್ಟ ಮಾಹಿತಿ ಚರ್ಚಿಸಿದರು.

ಗ್ರಾಮಸ್ಥರು ಗಣಿಗಾರಿಕೆಯಿಂದ ಆಗುತ್ತಿರುವ ತೊಂದರೆ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಪ್ರತಿ ದಿನ ಸಂಜೆ 2 ಬಾರಿ ಭಾರೀ ಸ್ಫೋಟಕಗಳನ್ನು ಬಳಸಿ ಕಲ್ಲು ಪರ್ವತವನ್ನು ಸೀಳುತ್ತಾರೆ. ಗಣಿಗಾರಿಕೆ ನಡೆಸುತ್ತಾರೆ. ಬಾಂಬ್ ಸ್ಫೋಟಕಗಳು ಸುತ್ತಲಿನ ಹಳ್ಳಿಗಳ ಮನೆಗಳನ್ನು ಅದುರುವಂತೆ ಮಾಡುತ್ತವೆ. ಮನೆಗಳ ಗೋಡೆಗಳು ಬಿರುಕು ಬಂದಿವೆ. 2 ಕುಟುಂಬಗಳು ಬೀಳಲಿರುವ ಮನೆ ಬಿಟ್ಟು ಬೇರೆ ಗುಡಿಸಲು ಕಟ್ಟಿಕೊಂಡಿವೆ. ಸ್ಫೋಟಕ ಸಂದರ್ಭದಲ್ಲಿ ಉಂಟಾಗುವ ಹೊಗೆ, ವಿಷಯುಕ್ತ ಧೂಳು, ಹಳ್ಳಿಗಳ ಮಕ್ಕಳು ಮಹಿಳೆಯರನ್ನು ಅನಾರೋಗ್ಯಕ್ಕೆ ತಳ್ಳಿವೆ. ಸ್ಫೋಟಕದ ನಂತರ ಹಳ್ಳಿಯ ಮಕ್ಕಳು ವಾಂತಿ ಮಾಡಿಕೊಳ್ಳುತ್ತಾರೆ. ಮಂಜು ತುಂಬಿದಂತೆ ವಿಷಯುಕ್ತ ಹೊಗೆ ಹಳ್ಳಿಗಳ ಸುತ್ತ ಹರಡುತ್ತದೆ. ಗ್ರಾಮದ ನೂರಾರು ಎಕರೆ ಕೃಷಿ ಭೂಮಿ ಕ್ರಷರ್, ಗಣಿಯ ಧೂಳಿನಿಂದ ತುಂಬಿ ಕೃಷಿಗೆ ತೊಂದರೆಯಾಗಿದೆ. ಮಳೆಗಾಲದಲ್ಲಿ ಗುಡ್ಡದಿಂದ ಗಣಿಯ ಕಲ್ಲು ಪುಡಿ ಮಿಶ್ರಿತ ನೀರು ಕೃಷಿ ಭೂಮಿಗೆ ತುಂಬಿಕೊಳ್ಳುತ್ತದೆ. ಹಿಂದುಳಿದ ಜನಾಂಗದವರೇ ಇರುವ ಬಸ್ತಿಕೊಪ್ಪ ಹಳ್ಳಿಯ ರೈತರಿಗೆ ಬೆಳೆ ಬೆಳೆದರೂ ಬೆಳೆ ಕೈಗೆ ಸಿಗದಂತಾಗಿದೆ, ನಮಗೆ ಊರು ತೊರೆಯುವ ಅನಾಥ ಪರಿಸ್ಥಿತಿ ಇದೆ. ಪುನಃ ಇಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿ ನಮ್ಮನ್ನು ಪರೀಕ್ಷಿಸದೆ ನಿರಂತರ ಈ ಗಣಿಗಾರಿಕೆ ನಿಲ್ಲುವಂತೆ ಸಹಕರಿಸಿ ಎಂದು ಒತ್ತಾಯಿಸಿದರು. ಗ್ರಾಮದ ರಸ್ತೆ, ವಿದ್ಯುತ್, ಇನ್ನಿತರ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಗ್ರಾಮಸ್ಥರ ಹಲವು ಆತಂಕ, ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ನಿಮ್ಮ ಸಮಸ್ಯೆ ಅರ್ಥವಾಗಿದೆ, ವೈಜ್ಞಾನಿಕ ಪರೀಕ್ಷೆ ವಿವೇಚನೆ ಹಿನ್ನೆಲೆಯಲ್ಲಿ ಕೂಲಂಕುಷವಾಗಿ ಪರಿಶೀಲಿಸಲಾಗುತ್ತದೆ ಸದ್ಯಕ್ಕೆ ಗಣಿಯಲ್ಲಿ ಸ್ಫೋಟ ಕಾರ್ಯ ನಡೆಸದಂತೆ ತಿಳಿಸಲಾಗಿದೆ ಆತಂಕ ಬೇಡ ಎಂದರು.

ಎಡಿಸಿ ನಾಗೇಂದ್ರ ಹೊನ್ನಳ್ಳಿ, ಸಾಗರ ಉಪವಿಭಾಗಾಧಿಕಾರಿ ಎಲ್ ನಾಗರಾಜ್, ತಹಶೀಲ್ದಾರ್ ಮಂಜುಳಾ, ವಲಯ ಅರಣ್ಯಾಧಿಕಾರಿ ಪ್ರಭುರಾಜ್ ಪಾಟೀಲ್, ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್, ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಕಾರ್ಯದರ್ಶಿ ಸಿ.ಪಿ.ಈರೇಶಗೌಡ, ಉಪ ತಹಶೀಲ್ದಾರ್ ವೆಂಕಟೇಶ್, ರಾಜಸ್ವ ನಿರೀಕ್ಷಕ ಶಿವಪ್ರಸಾದ್, ಚಂದ್ರಗುತ್ತಿ ಹಾಗೂ ಬಸ್ತಿಕೊಪ್ಪ ಗ್ರಾಮಸ್ಥರಾದ ಪ್ರಸನ್ನಶೇಟ್, ರಾಘು, ಲಕ್ಷ್ಮಣ್, ಗಣಪತಿ, ಕೃಷ್ಣ, ಪ್ರವೀಣ್, ರಘು, ನೂರ್ ಅಹಮದ್, ಚಿದು, ರಾಜು, ಶಶಿಧರ್, ಮಂಜು, ಹೇಮಂತ್, ಸೇರಿದಂತೆ ಕಂದಾಯ, ಅರಣ್ಯ ಇಲಾಖೆಯವರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here