ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾಮಗಾರಿಗಳು ಅತ್ಯಂತ ಕಳಪೆಯಾಗಿದ್ದು ಮತ್ತು ಭ್ರಷ್ಟಾಚಾರದಿಂದ ಕೂಡಿದೆ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಎಸ್.ಸುಂದರೇಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಅತ್ಯಂತ ಕಳಪೆ ಮಟ್ಟದಲ್ಲಿ ನಡೆಯುತ್ತಿವೆ. ಗುಣಮಟ್ಟವಂತೂ ಕೇಳಲೇಬಾರದು. ರಸ್ತೆಗಳು, ಚರಂಡಿಗಳು, ಪುಟ್ಬಾತ್ಗಳು ಹೀಗೆ ಯಾವ ಕಾಮಗಾರಿಗಳು ಕೂಡ ಗುಣಮಟ್ಟದಿಂದ ಕೂಡಿಲ್ಲ. ಒಂದು ಮಳೆಗಾಲ ಬಂದರೆ ಸಾಕು. ಈ ಕಾಮಗಾರಿಗಳ ಬಣ್ಣ ಬಯಲಾಗುವುದರಲ್ಲಿ ಅನುಮಾನವೇ ಇಲ್ಲ. ಕೋಟ್ಯಾಂತರ ರೂ. ಇದಕ್ಕಾಗಿ ಸುರಿಯಲಾಗಿದೆ. ಎಷ್ಟೋ ಕಡೆ ಸುಂದರವಾಗಿದ್ದ ರಸ್ತೆಗಳನ್ನು ಹಾಳು ಮಾಡಿ ಮತ್ತೆ ಕಳಪೆ ಮಟ್ಟದ ರಸ್ತೆಗಳನ್ನು ನಿರ್ಮಿಸಲಾಗಿದೆ. ಡ್ರೈನೇಜ್ಗಳ ಕಥೆಯೂ ಇದೆ ಆಗಿದೆ ಎಂದರು ದೂರಿದರು.
ಸ್ಮಾರ್ಟ್ ಸಿಟಿ ಗುತ್ತಿಗೆದಾರ ಎಲ್ಲಿದ್ದಾನೋ ಗೊತ್ತಿಲ್ಲ. ಇಲ್ಲಿ ಮೇಸ್ತ್ರಿ ಮಾತ್ರ ಇರುತ್ತಾನೆ. ಗುಣಮಟ್ಟದ ಪರೀಕ್ಷೆ ಯಾರು ಮಾಡುತ್ತಾರೋ ಗೊತ್ತಿಲ್ಲ. ಇದುವರೆಗೂ ಕಾಮಗಾರಿಗಳ ಗುಣಮಟ್ಟದ ಪರೀಕ್ಷೆ ನಡೆದ ಬಗ್ಗೆ ಮಾಹಿತಿಯಿಲ್ಲ. ಯಾವುದೋ ಕಚೇರಿಯಲ್ಲಿ ಕಮಿಷನ್ ಆಧಾರದ ಮೇಲೆ ಗುಣಮಟ್ಟ ಮುಗಿದುಹೋಗುತ್ತದೆ. ಹಾಗಾಗಿ ಸ್ಮಾರ್ಟ್ ಸಿಟಿ ಎನ್ನುವುದು ಕೆಲವರಿಗೆ ವರದಾನವಾಗಿದೆ ಮತ್ತು ಭಾರಿ ಭ್ರಷ್ಟಾಚಾರದ ವಾಸನೆ ಬರುತ್ತಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಕಾಂಗ್ರೆಸ್ ಲೋಕಾಯುಕ್ತರಿಗೆ ದೂರು ಸಲ್ಲಿಸಲಿದೆ ಎಂದರು.
ಆದಿಚುಂಚನಗಿರಿ ರಸ್ತೆಯಲ್ಲಿ ನಡೆಯುತ್ತಿರುವ ಕಳಪೆ ಕಾಮಗಾರಿಯ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಆದರೆ ಕೋವಿಡ್ ಮಾರ್ಗಸೂಚಿಯ ಅನ್ವಯ ಪ್ರತಿಭಟನೆ ಕೈ ಬಿಟ್ಟಿದ್ದೇವೆ. ಆ ರಸ್ತೆಯೂ ಸೇರಿದಂತೆ ಕಾಮಗಾರಿಗಳ ಕಳಪೆ ಎದ್ದು ಕಾಣುತ್ತಿದೆ. ಟೈಲ್ಸ್ ಗಳ ಜೋಡಣೆಯಾಗಲಿ, ಗುಣಮಟ್ಟವಾಗಲಿ, ಕಾಂಕ್ರೀಟ್ ಬೆರೆಸುವಿಕೆಯಾಗಲಿ, ಒಳಚರಂಡಿಗಳ ಕಾಮಗಾರಿಗಳಾಗಲಿ, ರಸ್ತೆಗಳ ನಿರ್ಮಾಣವಾಗಲಿ ಹೀಗೆ ಯಾವ ಕಾಮಗಾರಿಗಳು ಕೂಡ ಸರಿಯಿಲ್ಲ ಎಂದು ದೂರಿದರು.
ಕೋವಿಡ್ ನಿಯಂತ್ರಣದಲ್ಲಿ ಸರ್ಕಾರಗಳು ವಿಫಲ:
ರಾಜ್ಯದಲ್ಲಿ ಈಗಾಗಲೇ 2ನೇ ಹಂತದ ಕೋವಿಡ್ ಅಲೆ ಆರಂಭವಾಗಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಮತ್ತು ದೇಶದಲ್ಲಿ ಕೋವಿಡ್ ವ್ಯಾಪಕವಾಗಿ ಹರಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಕಾರಣವಾಗಿವೆ. ಕೋವಿಡ್ ಹರಡುತ್ತದೆ ಎಂಬ ಮುನ್ಸೂಚನೆ ಇದ್ದರೂ ಕೂಡ ಮುಂಜಾಗ್ರತೆಯ ಕ್ರಮವನ್ನು ಸರ್ಕಾರಗಳು ಕೈ ಗೊಳ್ಳಲಿಲ್ಲ. ಹಾಗಾಗಿ ನಿಯಂತ್ರಣ ತಪ್ಪಿ ಇಂದು ಕೋವಿಡ್ ಹೆಚ್ಚಾಗಿದೆ. ಇದಕ್ಕೆ ಆಡಳಿತ ವೈಫಲ್ಯವೇ ಕಾರಣ. ಸರ್ಕಾರಕ್ಕೆ ಅರಿವು ಇಲ್ಲ, ಮುಂಜಾಗ್ರತೆ ಕ್ರಮವೂ ಇಲ್ಲ. ಸರ್ಕಾರ ಕೇವಲ ಜಾಹಿರಾತುಗಳ ಮೂಲಕ ಕೊರೊನಾ ನಿಯಂತ್ರಿಸಲು ಹೊರಟಿದೆ. ಆದರೆ ಆಸ್ಪತ್ರೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವ ಸೌಲಭ್ಯಗಳನ್ನು ಸರ್ಕಾರ ನೀಡಿಲ್ಲ. ವೆಂಟಿಲೇಟರ್ಗಳು ಇಲ್ಲ, ಚುಚ್ಚು ಮದ್ದು ಇಲ್ಲ, ಸುಳ್ಳು ಅಂಕಿ ಅಂಶಗಳು ನೀಡಲಾ ಗುತ್ತಿದೆ. ಔಷಧಿಗಳು ಆಸ್ಪತ್ರೆಗಳಲ್ಲಿ ಸಿಗುತ್ತಿಲ್ಲ. ಕೊರೋನಾ ಸೋಂಕಿತರಿಗೆ ಬೆಡ್ಗಳು ಇಲ್ಲ. ಹೀಗೆ ಸರ್ಕಾರಿ ಆಸ್ಪತ್ರೆಗಳು ಇಲ್ಲಗಳ ನಡುವೆ ಕೊರೋನಾ ನಿಯಂತ್ರಿಸಲು ಹೊರಟಿರುವುದು ವಿಪರ್ಯಾಸವಾಗಿದೆ. ಸರ್ಕಾರ ಮೊದಲು ಆಸ್ಪತ್ರೆಗಳಿಗೆ ಸೌಕರ್ಯವನ್ನು ನೀಡಬೇಕು ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಈ ನಿರ್ಲಕ್ಷ್ಯದಿಂದ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದರಲ್ಲದೆ ಮೃತ ಪಡುವವರ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ಕೊರೋನಾ ಲಸಿಕೆಯ ಬಗ್ಗೆ ಜನರಿಗೆ ನಂಬಿಕೆಯೇ ಇಲ್ಲವಾಗಿದೆ. ಇದಕ್ಕೆ ಉದಾಹರಣೆಯೆಂದರೆ ಮುಖ್ಯಮಂತ್ರಿಗಳು ಲಸಿಕೆ ಹಾಕಿಸಿಕೊಂಡರು ಸಹ ಮತ್ತೆ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹಾಗಾಗಿ ಲಸಿಕೆ ತೆಗೆದುಕೊಳ್ಳಲು ಕೂಡ ಜನರು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ಲಸಿಕೆ ಹಾಕಿಸಿಕೊಳ್ಳುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಮುಖಂಡರಾದ ಎಲ್.ರಾಮೇಗೌಡ, ಸಿ.ಎಸ್.ಚಂದ್ರಭೂಪಾಲ್, ಮಂಜುಳಾ ಶಿವಣ್ಣ, ಆರೀಫ್, ಬಾಲಾಜಿ, ಅಫ್ರೀದಿ, ಚಂದನ್, ಶಮೀರ್ ಖಾನ್, ಸೈಯದ್ ವಾಹಿದ್ ಅಡ್ಡು, ರಂಗೇಗೌಡ ಸೇರಿದಂತೆ ಹಲವರಿದ್ದರು.
Related