ಸ್ವಸಹಾಯ ಸಂಘಗಳಿಗೆ ನೆರವು ನೀಡಲು ಸೂಚನೆ

0
280

ಚಿಕ್ಕಮಗಳೂರು: ಸ್ವಸಹಾಯ ಸಂಘಗಳ ಬಲವರ್ಧನೆಗೆ ನೆರವು ನೀಡಲು ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಸೂಚಿಸಿದರು.

ಚಿಕ್ಕಮಗಳೂರು ಯೂನಿಯನ್‍ಬ್ಯಾಂಕ್, ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಯೂನಿಯನ್ ಆರ್‍ಸೆಟಿ)ಯಲ್ಲಿ ನಡೆದ 97 ಮತ್ತು 98ನೇ ಜಿಲ್ಲಾ ಮಟ್ಟದ ಆರ್‍ಸೆಟಿ ಸ್ಥಳೀಯ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಂಪ್ರದಾಯಿಕ ತರಬೇತಿಗಳಿಗೆ ಒತ್ತು ನೀಡಿ ಸ್ಥಳೀಯ ಮಾರುಕಟ್ಟೆಗೆ ವ್ಯವಸ್ಥೆ ಮಾಡಿಕೊಡಬೇಕೆಂದು ಹೇಳಿದರು.

ಸ್ಥಳೀಯ ಸ್ವ ಸಹಾಯ ಸಂಘಗಳಿಗೆ ವಿವಿಧ ತರಬೇತಿ ನೀಡಿ ಬಲವರ್ಧನೆಗೊಳಿಸುವುದರೊಂದಿಗೆ ಸರಿಯಾದ ಮಾರುಕಟ್ಟೆ ಒದಗಿಸಲು ನಬಾರ್ಡ್ ಹಾಗೂ ಸರ್ಕಾರದ ಯೋಜನೆಗಳನ್ನು ಬಳಸಿ ಮಾರುಕಟ್ಟೆ ಮಾಡಲು ಸ್ಥಳ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಎಲ್ಲಾ ಇಲಾಖೆಗಳು ಕೈಜೋಡಿಸಬೇಕು ಆ ಮೂಲಕ ನಿರುದ್ಯೋಗಿ ಯುವಕ ಯುವತಿಯರು ಹಾಗೂ ಸ್ವ ಸಹಾಯ ಸಂಘಗಳ ಮಹಿಳೆಯರು ಸ್ವಾವಲಂಬಿಯಾಗಲು ಎಲ್ಲರೂ ಸಹಕರಿಸಬೇಕೆಂದರು.

ಕಾಬ್‍ಸೆಟ್ ಸಂಸ್ಥೆಯಲ್ಲಿ ನಡೆಯುವ ತರಬೇತಿ ಕರಿತು ಚರ್ಚಿಸಲಾಯಿತು, ತರಬೇತಿ ಪಡೆದ ಫಲಾನುಭವಿಗಳು ಸ್ವ ಉದ್ಯೋಗ ಸ್ಥಾಪಿಸಿರುವ ಬಗ್ಗೆ, ಸಾಲ ಸೌಲಭ್ಯ, ಮಾರುಕಟ್ಟೆ ಬಗ್ಗೆ ಚರ್ಚಿಸಲಾಯಿತು.

ತರಬೇತಿ ಪಡೆದ ಅಭ್ಯರ್ಥಿಗಳ ಯಶೋಗಾಥೆಯನ್ನು ಪರಿಶೀಲಿಸಿ ನಂತರ ಯಶಸ್ವಿ ಉದ್ಯಮಶೀಲ ವ್ಯಕ್ತಿಗಳನ್ನು ಸಭೆಯಲ್ಲಿಯೇ ಆನ್‍ಲೈನ್ ಮೂಲಕ ಸಂಪರ್ಕಿಸಿ ಅವರ ಉದ್ಯಮಗಳ ಆಗು ಹೋಗುಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಯಿತು.

ಸಂಸ್ಥೆಯಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಇತರೆ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಸವಲತ್ತು ನೀಡಿಕೆಯಲ್ಲಿ ಪ್ರಾಮುಖ್ಯತೆ ಕೊಡಬೇಕೆಂದು ತಿಳಿಸಿದರು.

ನಬಾರ್ಡ್ ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಇ. ಪ್ರತಾಪ್ ಮಾತನಾಡಿ, ರೂರಲ್ ಮಾರ್ಟ್‍ಗಳ ಮೂಲಕ ಸ್ವ ಸಹಾಯ ಸಂಘಗಳಿಗೆ ಮಾರುಕಟ್ಟೆಯ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ವಲಯ ಕಛೇರಿ ಶಿವಮೊಗ್ಗದ ಡೆಪ್ಯೂಟಿ ಜನರಲ್ ಮ್ಯಾನೇಜರ್ ಎ. ರಾಜಮಣಿ ಅವರು ಆನ್ ಲೈನ್ ಮೂಲಕ ಸಭೆಯಲ್ಲಿ ಪಾಲ್ಗೊಂಡು ಸಂಸ್ಥೆಗೆ ಜಿಲ್ಲಾ ಪಂಚಾಯಿತಿಯಿಂದ ನೀಡುತ್ತಿರುವ ಸೌಲಭ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಡಿ. ಆರ್. ಡಿ. ಎ. ಕೋಶದ ಯೋಜನಾ ನಿರ್ದೇಶಕ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ್, ಎಂ. ಜಿ. ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಎಂ. ಕೆ. ಮುರಳಿ, ಲೀಡ್ ಜಿಲ್ಲಾ ಲೀಡ್‍ಬ್ಯಾಂಕ್ ಮ್ಯಾನೇಜರ್ ಸುರೇಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದರಾಜು, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಶಾಂತ್ ಇದ್ದರು. ಕಾಬ್‍ಸೆಟ್ ಸಂಸ್ಥೆಯ ನಿರ್ದೇಶಕ ಜಿ. ರಮೇಶ್ ಸ್ವಾಗತಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here