ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ; ಬಿವೈಆರ್

0
144

ಶಿಕಾರಿಪುರ : ಸ್ವಾತಂತ್ರ್ಯ ದಿನಾಚರಣೆಯನ್ನು ಹಬ್ಬದ ರೀತಿಯಲ್ಲಿ ವಿಜೃಂಭಣೆಯಿಂದ ಆಚರಣೆಗಾಗಿ ದೇಶದ ಪ್ರತಿಯೊಂದು ಮನೆ ಮನೆಯಲ್ಲೂ ತಿರಂಗಾ ಧ್ವಜವನ್ನು ಹಾರಿಸುವುದರ ಮೂಲಕ ಪ್ರತಿಯೊಬ್ಬರೂ ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ರವರು ಕರೆ ನೀಡಿದ್ದರಿಂದ, ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಸಂಸದ ಬಿ ವೈ ರಾಘವೇಂದ್ರರವರು ತಿಳಿಸಿದ್ದಾರೆ.

ಶುಕ್ರವಾರದಂದು ತಾಲ್ಲೂಕಿನ ಈಸೂರು ಗ್ರಾಮದಲ್ಲಿ ಬಿರುಕು ಬಿಟ್ಟು ಕುಸಿಯುತ್ತಿರುವ ಹೆಗ್ಗೇರಿ ಕೆರೆಯ ಏರಿಯನ್ನು ವೀಕ್ಷಿಸಿ ನಂತರ, 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆಗಾಗಿ “ನಮ್ಮ ನಡೆ ಈಸೂರು ಕಡೆಗೆ” ಎಂಬ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿರುವ ವೇದಿಕೆ ವೀಕ್ಷಿಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲೇ ಪ್ರಥಮ ಬಾರಿಗೆ ಸ್ವಾತಂತ್ರ್ಯವನ್ನ ಘೋಷಿಸಿಕೊಂಡ ಹಾಗೂ ಸ್ವಾತಂತ್ರ್ಯಕ್ಕಾಗಿ ನೇಣುಗಂಬಕ್ಕೇರಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿಯವರು ಆಜಾಧಿಕಾ ಅಮೃತ್ ಮಹೋತ್ಸವದ ಆಚರಣೆಗಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಹುತಾತ್ಮರನ್ನು ಗೌರವಿಸುವುದಕ್ಕೋಸ್ಕರ ಒಟ್ಟು ನಾಲ್ಕು ಜಾಗಗಳನ್ನು ಗುರುತಿಸಿದ್ದು, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರನ್ನು ಗೌರವಿಸುವ ಸದುದ್ದೇಶದಿಂದ ಇಂತಹದೊಂದು ಪವಿತ್ರವಾದ ಕಾರ್ಯ ನಡೆಯುತ್ತಿದೆ. ಇದರಲ್ಲಿ ತಾಲ್ಲೂಕಿನ ಈಸೂರು ಗ್ರಾಮವು ಕೂಡ ಒಂದಾಗಿದೆ.

ಏಸೂರು ಕೊಟ್ಟರೂ ಈಸೂರು ಕೊಡೆವು ಎಂದು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಸುಮಾರು 11 ಜನ ಯೋಧರಲ್ಲಿ 5 ಜನ ಗಲ್ಲಿಗೇರಿಸುವ ಕೆಲಸ ಮಾಡಲಾಗಿದ್ದು, ಇನ್ನುಳಿದಂತೆ 6 ಜನರಿಗೆ ಅಂದಿನ ಬ್ರಿಟಿಷ್ ಸರ್ಕಾರ ಜೀವಾವಧಿ ಶಿಕ್ಷೆ ವಿಧಿಸಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಈ ಯೋಧರನ್ನು ಸ್ಮರಿಸುವ ಮತ್ತು ಗೌರವಿಸುವ ಮೂಲಕ ಈ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಆಗಮಿಸಲಿದ್ದು ಹಾಗೂ ಈಸೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರೆಲ್ಲರೂ ಒಟ್ಟಾಗಿ ಸೇರಿ ನಡೆಸಿ ಕೊಡಲು ತೀರ್ಮಾನಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಈಸೂರು ಗ್ರಾಮದ ಐದು ಯೋಧರ ಕುಟುಂಬಕ್ಕೆ ಮತ್ತು ತಾಲ್ಲೂಕಿನ ಐವತ್ತಕ್ಕೂ ಹೆಚ್ಚಿನ ಯೋಧರಿಗೆ ಸನ್ಮಾನಿಸಲಾಗುವುದು ಎಂದರು.

ಈಸೂರಿನಲ್ಲಿ ದಿನಾಂಕ 14 ರಂದು ನಡೆಯುತ್ತಿರುವ ಅಮೃತ ಮಹೋತ್ಸವವು ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವರಾದ ಕು, ಶೋಭಾ ಕರಂದ್ಲಾಜೆ ರವರು, ರಾಜ್ಯ ಸರ್ಕಾರದ ಸಚಿವರಾದ ಡಾ ಕೆ ಸಿ ನಾರಾಯಣ ಗೌಡ, ಆರಗ ಜ್ಙಾನೇಂದ್ರ, ಬಿ ಎ ಬಸವರಾಜ್ (ಭೈರತಿ), ಡಾ ಅಶ್ವಥ್ ನಾರಾಯಣ ಸಿ ಎನ್, ರಾಜ್ಯ ಸರ್ಕಾರದ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ.

ಪ್ರತಿ ವರ್ಷ ಮೇ ತಿಂಗಳ ಕೊನೆಯ ವಾರದಲ್ಲಿ ಆರಂಭವಾಗಬೇಕಿದ್ದ ಮಳೆ ಜೂನ್ ತಿಂಗಳ ಎರಡನೇ ವಾರದಲ್ಲಿ ಆರಂಭವಾಯಿತು. ಈ ಮಳೆಯ ಆಧಾರದ ಮೇಲೆ ರೈತರು ತಮ್ಮ ತಮ್ಮ ಹೊಲಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿ ಮೆಕ್ಕೆಜೋಳವನ್ನು ಬಿತ್ತನೆ ಮಾಡಿದರೆ, ಹಲವು ದಿನಗಳವರೆಗೆ ಮಳೆಯಾಗಿದೆ ಬಿತ್ತನೆ ಬೀಜ ಮೊಳಕೆಯೊಡೆಯದೆ ಹಾಳಾಯಿತು. ನಂತರ ಪುನಃ ಬಂದ ಮಳೆಗೆ ರೈತರು ಮತ್ತೆ ಹೊಲಗದ್ದೆಗಳಿಗೆ ಬಿತ್ತನೆ ಮಾಡಿದರೆ ಮಳೆಯು ಜೂನ್ ಜುಲೈ ಆಗಸ್ಟ್ ತಿಂಗಳಲ್ಲಿ ನಿರಂತರವಾಗಿ ಸುರಿಯುತ್ತಿದ್ದು ರೈತರು ಬಿತ್ತನೆ ಮಾಡಿದ ಮೆಕ್ಕೆಜೋಳ ಜೌಗಿನಿಂದ ಹಾಳಾಗಿದೆ. ಜಿಲ್ಲೆಯಲ್ಲಿ ಒಟ್ಟು ನಾಲ್ಕುವರೆ ಸಾವಿರ ಹೆಕ್ಟೇರ್ ಜಮೀನಿನಲ್ಲಿ ಮೆಕ್ಕೆಜೋಳದ ಬೆಳೆಗಳು ಸಂಪೂರ್ಣ ನೆಲಕಚ್ಚಿದೆ. ತಾಲ್ಲೂಕಿನಲ್ಲಿ 25 ಹೆಕ್ಟೇರ್ ಭತ್ತ, ಹಾಗೂ ಮೆಕ್ಕೆಜೋಳ ಜೋಳ 2747 ಹೆಕ್ಟೇರ್ ಹಾನಿಯಾಗಿದೆ. ಕೇಂದ್ರದ ಎನ್ಡಿಆರ್ಎಫ್ ಪ್ರಕಾರ ಹಾನಿಗೊಳಗಾದ ರೈತರ ಬೆಳೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ. ಅಲ್ಲದೇ ಮುಂದಿನ ದಿನಗಳಲ್ಲಿ ಬೆಳೆವಿಮೆ ಮಾಡಿಸಿದ ರೈತರಿಗೂ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಗೋಷ್ಠಿಯಲ್ಲಿ ಎಂಎಡಿಬಿ ಅಧ್ಯಕ್ಷ ಕೆ ಎಸ್ ಗುರುಮೂರ್ತಿ, ಜಿಲ್ಲೆಯ ಕುವೆಂಪು ಯುನಿವರ್ಸಿಟಿಯ ಮುಖ್ಯಸ್ಥೆ ಅನುರಾಧ ಸೇರಿದಂತೆ ಚುನಾಯಿತ ಪ್ರತಿನಿಧಿಗಳು ತಾಲ್ಲೂಕಿನ ಬಿಜೆಪಿ ಪಕ್ಷದ ಅನೇಕ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here