ಸ್ವಾತಂತ್ರ್ಯ ಹೋರಾಟದ ಅಪರೂಪದ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ

0
353

ಶಿವಮೊಗ್ಗ: ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಲಾಗಿರುವ ಐದು ದಿನಗಳ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಬುಧವಾರ ಉದ್ಘಾಟಿಸಿದರು.

ಕೇಂದ್ರ ಸರ್ಕಾರದ ಕ್ಷೇತ್ರ ಪ್ರಚಾರ ಇಲಾಖೆ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ನಗರದ ಡಿವಿಎಸ್ ರಂಗಮಂದಿರದಲ್ಲಿ ಆಯೋಜಿಸಿರುವ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವ ಜನಾಂಗಕ್ಕೆ ಸ್ವಾತಂತ್ರ್ಯ ಹೋರಾಟದ ಕುರಿತಾಗಿ ಮಾಹಿತಿ ನೀಡುವ ಉದ್ದೇಶದಿಂದ ಅಪರೂಪದ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಇತಿಹಾಸ ಅರಿಯುವ ಮೂಲಕ ಭದ್ರ ಭವಿಷ್ಯವನ್ನು ಕಟ್ಟಲು ಸಾಧ್ಯವಿದೆ ಎಂದರು.

ದೇಶದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟ್ಟಗಳು, ಸಶಸ್ತ್ರ ಬಂಡಾಯಗಳು, ನಾಡಿನ ಪ್ರಮುಖ ಹೋರಾಟಗಾರರ ಜೀವನ ಚಿತ್ರಣ ಇಲ್ಲಿವೆ. ಕಿತ್ತೂರು ದಂಗೆ, ಸುರಪುರ ದಂಗೆ, ಬಾದಾಮಿ ಬಂಡಾಯ, ಬ್ರಿಟೀಷರೊಂದಿಗೆ ಟಿಪ್ಪು ಮತ್ತು ಹೈದರಾಲಿಯ ಹೋರಾಟದ ವಿವರಗಳು, ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಹೋರಾಟಗಾರರ ಮಾಹಿತಿಗಳು ಇಲ್ಲಿವೆ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರ ಉದಯ, ಇವರ ನಾಯಕತ್ವದ ಅಹಿಂಸಾ ಚಳುವಳಿಗಳಾದ, ಅಸಹಕಾರ ಚಳುವಳಿ, ಕಾನೂನು ಭಂಗ ಚಳುವಳಿ, ವಿಶ್ವ ಗಮನ ಸೆಳೆದ ದಂಡಿ ಉಪ್ಪಿನ ಸತ್ಯಾಗ್ರಹ, ಈಸೂರು ದುರಂತ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದಲ್ಲಿ ಎಲ್ಲರನ್ನು ಒಗ್ಗೂಡಿಸುವ ಬೆಳಗಾವಿ ಕಾಂಗ್ರೆಸ್ ಅಧಿವೇಶನ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ನಡೆದ ಸ್ವತಂತ್ರ ಸಂಗ್ರಾಮದ ಪೂರ್ಣ ಮಾಹಿತಿಯನ್ನು ಹಾಗೂ ಛಾಯಾಚಿತ್ರ ವನ್ನು ಪ್ರದರ್ಶಿಸಲಾಗಿದೆ.

ಕ್ಷೇತ್ರ ಪ್ರದರ್ಶನಾಧಿಕಾರಿ ಪಿ.ಜಿ.ಪಾಟೀಲ್, ಕ್ಷೇತ್ರ ಪ್ರಚಾರಾಧಿಕಾರಿ ತುಕರಾಮ ಗೌಡ, ಡಿ.ವಿ.ಎಸ್. ಸಂಸ್ಥೆ ಅಧ್ಯಕ್ಷ ಕೊಳಲೆ ರುದ್ರಪ್ಪ, ಕಾರ್ಯದರ್ಶಿ ಎಸ್.ರಾಜಶೇಖರ್, ಡಿವಿಎಸ್ ಪದವಿ ಪ್ರಾಂಶುಪಾಲ ಡಾ.ಎಚ್.ಟಿ.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here