ಹಂಸಲೇಖರ ವಿರುದ್ಧ ಅವಹೇಳನಕಾರಿಯಾಗಿ ನಡೆದುಕೊಳ್ಳುವುದು ಸರಿಯಲ್ಲ

0
336

ಶಿಕಾರಿಪುರ: ಸಂಗೀತ ನಿರ್ದೇಶಕರಾದ ಹಂಸಲೇಖರವರು ವಾಸ್ತವ ಸಂಗತಿ ಜನರೆದುರು ಬಿಚ್ಚಿಟ್ಟಿದ್ದು, ಆ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಅವರ ವಿರುದ್ಧ ಅವಹೇಳನ ಕಾರಿಯಾಗಿ ನಡೆದುಕೊಳ್ಳುವುದು ಸರಿಯಲ್ಲ. ಮತ್ತು ಶಿವಮೊಗ್ಗ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಜಯಗಳಿಸಿ ಅಧ್ಯಕ್ಷರಾಗಿರುವ ಡಿ ಮಂಜುನಾಥ್ ರವರಿಗೆ ಸಂಘಟನೆಯ ಪರವಾಗಿ ಅಭಿನಂದನೆಗಳು ತಿಳಿಸುತ್ತೇವೆ ಎಂದು ತಾಲ್ಲೂಕು ದಲಿತ ಸಂಘಟನೆಯ ಅಂಬೇಡ್ಕರ್ ವಾದದ ಸಂಚಾಲಕ ಜಗದೀಶ್ ಚುರ್ಚಗುಂಡಿ ತಿಳಿಸಿದರು.

ಸೋಮವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ರಾಜಕೀಯ ಮುಖಂಡರು ಗ್ರಾಮ ವಾಸ್ತವ್ಯ ಮಾಡುವ ನೆಪದಲ್ಲಿ ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿ ಅವರ ಮನೆಯಲ್ಲಿ ಊಟ ಮಾಡಿ ಬಂದೆವು ಎಂದು ಪ್ರಚಾರಕ್ಕೆ ಸೀಮಿತವಾಗಿರುವ ಈ ಸಂದರ್ಭದಲ್ಲಿ, ಅನೇಕ ರಾಜಕೀಯ ಮುಖಂಡರು ಹಂಸಲೇಖರವರು ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ವಿಚಾರವನ್ನೇ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ. ದಲಿತರ ಮನೆಯಲ್ಲಿಯೂ ಕೂಡ ಒಳ್ಳೆ ರೀತಿಯ ಅನ್ನ ನೀರು ಊಟ ಮಾಡಲಾಗುತ್ತಿದೆ ಅದೇರೀತಿ ಬಂದಂತಹಾ ಅತಿಥಿಗಳಿಗೂ ಉಣಬಡಿಸುವ ವ್ಯವಸ್ಥೆ ಇದೆ. ಬಂದವರಿಗೆ ವಿಷ ಬೆರೆಸುವುದಿಲ್ಲ ಎಂದರು.

ದಲಿತರೆಂದೊಡನೆ ಈಗಲೂ ಸಹ ತಾತ್ಸಾರದಿಂದ ಕಾಣುವ ಪದ್ಧತಿ ಇದೆ. ಅನೇಕ ಕಡೆಗಳಲ್ಲಿ ದಲಿತರನ್ನು ಮುಟ್ಟಿರುವುದು, ಅವರನ್ನು ಕೆರೆ ಕಟ್ಟೆಗಳಲ್ಲಿ ನೀರು ತುಂಬಲು ಬಿಡದಿರುವುದು ಅಲ್ಲದೆ, ಕ್ಷೌರ ಮಾಡುತ್ತಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಉನ್ನತ ಶಿಕ್ಷಣ ಪಡೆದ ದಲಿತ ವಿದ್ಯಾರ್ಥಿಗಳ ಬಟ್ಟೆ ಬಿಚ್ಚಿಸಿ ಕಳಿಸುವುದು ಇಂತಹಾ ಪ್ರವೃತ್ತಿಯು ನಡೆಯುತ್ತಿರುವ ಈ ಸಮಯದಲ್ಲಿ, ಹಂಸಲೇಖರವರು ದಲಿತರ ಮನೆಯಲ್ಲಿ ವಾಸ್ತವ್ಯ ಹೂಡುವ ನೀವು ಅವರ ಮನೆಯಲ್ಲಿ ಮಾಂಸಾಹಾರ ಸೇವನೆ ಮಾಡಿ ಬರುತ್ತೀರಾ ಎಂದು ಮಾತನಾಡಿರುವ ವಿಚಾರವನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವ ಪ್ರಯತ್ನ ನಡೆಯುತ್ತಿದೆ.

ಜಾತಿ ವ್ಯವಸ್ಥೆಯಿಲ್ಲ ವರ್ಣ ವ್ಯವಸ್ಥೆಯಿಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿರುವ ರಾಜಕೀಯ ಮುಖಂಡರು, ದಲಿತರ ಮನೆಯಲ್ಲಿ ವಾಸ್ತವ್ಯ ಹೂಡುವ ನೆಪದಲ್ಲಿ ಹೋಟೆಲ್ ಗಳಲ್ಲಿ ತಿಂಡಿ ಊಟಗಳನ್ನು ತಂದು ತಿನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಅನೇಕ ಬಡ ಕುಟುಂಬಸ್ಥರಿಗೆ ಸೂರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಪಕ್ಷದವರಾದರೂ ದಲಿತರಿಗೆ ಒಂದು ನಿವೇಶನ ಮತ್ತು ವಸತಿ ಸೌಕರ್ಯವನ್ನು ಕಲ್ಪಿಸಿಲ್ಲ. ಅಷ್ಟೇ ಅಲ್ಲದೆ ಕಳೆದ ಎರಡು ಮೂರು ವರ್ಷಗಳಿಂದ ಯಾರಿಗೂ ನಿವೇಶನ ಹಂಚಿಕೆ ಮತ್ತು ವಸತಿ ಸೌಕರ್ಯವನ್ನು ಯಾರೂ ಕಲ್ಪಿಸಿಲ್ಲ. ಹಲವಾರು ಕಡೆ ಮೂಲ ಸೌಕರ್ಯವೇ ಇರುವುದಿಲ್ಲ ಇದರ ಬಗ್ಗೆ ಚಿಂತನೆ ನಡೆಸದೇ, ಸಣ್ಣ ಸಣ್ಣ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದು ಸೂಕ್ತ ಕ್ರಮವಲ್ಲ ಹಂಸಲೇಖ ಅವರು ವಾಸ್ತವತೆಯನ್ನು ಬಿಚ್ಚಿಟಿದ್ದಾರೆ‌ ಅವರ ಪರ ನಮ್ಮ ಬೆಂಬಲ.ಇದೆ. ಅಲ್ಲದೇ ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಡಿ ಮಂಜುನಾಥ್ ರವರಿಗೆ ನಮ್ಮ ಡಿಎಸ್ಎಸ್ ಅಂಬೇಡ್ಕರ್ ವಾದಿಗಳ ಸಂಘಟನೆಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಡಿಎಸ್ಎಸ್ ಅಂಬೇಡ್ಕರ್ ವಾದಿಗಳ ಸಂಘಟನೆಯ ಸಂಚಾಲಕ ನಾಗೇಂದ್ರ, ತಾಲ್ಲೂಕು ಸಂಘಟನಾ ಸಂಚಾಲಕ ಪರಮೇಶ್ ಈಸೂರು, ಹನುಮಂತಪ್ಪ ಶಿಕಾರಿಪುರ, ರಮೇಶ್ ಗುಡ್ಡದತುಮ್ಮಿನಕಟ್ಟೆ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here