ಹಡ್ಲುಬೈಲು ಸ.ಕಿ.ಪ್ರಾ.‌ ಪಾಠಶಾಲೆಯ ನೂತನ ಕೊಠಡಿ ಉದ್ಘಾಟನೆ: ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು: ಶಾಸಕ ಆರಗ ಜ್ಞಾನೇಂದ್ರ

0
736

ರಿಪ್ಪನ್‌ಪೇಟೆ: ಹಲವು ಯೋಜನೆಗಳನ್ನು ಅನುಷ್ಟಾನಗೊಳಿಸುವುದರೊಂದಿಗೆ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿದೆ ಎಂದು ಶಾಸಕ, ಗೃಹ ಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ ಹೇಳಿದರು.

ಹುಂಚ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಡ್ಲುಬೈಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ನೂತನ ಕೊಠಡಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯ ಕಟ್ಟಡ ಶಿಥಿಲವಾಗಿದ್ದು ಕಳೆದ ವರ್ಷ ಮಳೆಗಾಲದಲ್ಲಿ ಕಟ್ಟಡ ಬಿದ್ದು ಹೋಗಿತ್ತು. ತಕ್ಷಣ ಸರ್ಕಾರದಿಂದ 10 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡುವ ಮೂಲಕ ಗ್ರಾಮಾಂತರ ಪ್ರದೇಶದಲ್ಲಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿರುವುದನ್ನು ನೋಡಿ ಗುತ್ತಿಗೆದಾರರನ್ನು ಪ್ರಶಂಸಿಸಿದ ಶಾಸಕರು, ಕೇವಲ ಕಡಿಮೆ ಅವಧಿಯಲ್ಲಿ ಇಷ್ಟು ಸುರಕ್ಷಿತವಾದ ಕಟ್ಟಡವನ್ನು ನಿರ್ಮಿಸಿರುವುದು ಹರ್ಷವಾಗಿದೆ. ಕಾರಣ ಶಂಕುಸ್ಥಾಪನೆ ನೆರವೇರಿಸಿ ಐದು ವರ್ಷವಾದರೂ ಪ್ರಗತಿ ಹಂತದಲ್ಲೇ ಎಷ್ಟೋ ಕಾಮಗಾರಿಗಳು ಉಳಿದಿವೆ. ಆದರೂ ಇಂತಹ ಕುಗ್ರಾಮದಲ್ಲಿ ಇಷ್ಟು ವೇಗದಲ್ಲಿ ಕಾಮಗಾರಿ ಪೂರ್ಣಗೊಳಿಸಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ಶಿಕ್ಷಕ ಚಂದ್ರಶೇಖರ್ ರವರಿಗೆ ಸನ್ಮಾನ:

ಸರಿಯಾದ ಸಮಯಕ್ಕೆ ಶಾಲೆಗಳಿಗೆ ಶಿಕ್ಷಕರು ಬರದಂತಹ ದಿನಗಳಲ್ಲಿ ಇಲ್ಲಿನ ಗ್ರಾಮೀಣ ಪ್ರದೇಶಕ್ಕೆ ಸಮಯವನ್ನು ಲೆಕ್ಕಿಸದೆ ಶಾಲೆಗೆ ಬಂದು ತಮ್ಮ ಕರ್ತವ್ಯದ ಅವಧಿಯಲ್ಲಿ ಮಕ್ಕಳಲ್ಲಿ ಪರಿಸರ ಜಾಗೃತಿ ಬೆಳಸುವುದರೊಂದಿಗೆ ಶಾಲೆಯ ಸುತ್ತಮುತ್ತ ಹೂವಿನ ತೋಟ, ತರಕಾರಿಗಳನ್ನು ಸಾವಯವ ಗೊಬ್ಬರ ಬಳಸಿ ಮಧ್ಯಾಹ್ನದ ಬಿಸಿಯೂಟಕ್ಕೆ ಮಕ್ಕಳಿಗೆ ಪೌಷ್ಟಿಕಾಂಶದ ತರಕಾರಿಯನ್ನು ಬೆಳೆಸಿ ಮಕ್ಕಳಿಗೆ ನೀಡುತ್ತಿರುವುದು ಮತ್ತು ಜ್ಞಾನದಾಸೋಹವನ್ನು ನೀಡುತ್ತಿರುವುದರ ಬಗ್ಗೆ ಪ್ರಶಂಸಿಸಿದ ಅವರು ಅಸಕ್ತ ಶಿಕ್ಷಕರು ಇರುವಾಗ ತಾವು ತಮ್ಮ ಕರ್ತವ್ಯದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಮಕ್ಕಳ ಶೈಕ್ಷಣಿಕ ಮಟ್ಟವನ್ನು ಉತ್ತೇಜಿಸುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸಿ ಉತ್ತಮ ಪರಿಸರ ಪ್ರಶಸ್ತಿಗೆ ಪಾತ್ರರಾಗಿದ್ದಾರೆಂದು ಶಿಕ್ಷಕ ಚಂದ್ರಶೇಖರ್ ಹೆಚ್.ವೈ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿ ಸನ್ಮಾನಿಸಿದರು.

ಅರಣ್ಯಾಧಿಕಾರಿಗಳ ವಿರುದ್ಧ ಗರಂ ಆದ ಶಾಸಕ ಜ್ಞಾನೇಂದ್ರ:

ಸೊಪ್ಪಿನಬೆಟ್ಟ, ಕಾನು-ಕಾಡು, ಗೋಮಾಳ ಜಾಗದಲ್ಲಿ ವಾಸಿಸುವರಿಗೆ ಶಾಸನ ಸಭೆಯಲ್ಲಿ ತಿದ್ದುಪಡಿ ತರುವುದರೊಂದಿಗೆ ಅವರಿಗೆ ಪಟ್ಟಾಕೊಡಿಸುವುದರ ಬಗ್ಗೆ ಹೋರಾಟ ನಡೆಸಲಾಗುತ್ತಿದೆ. ಇನ್ನೂ ಅರಣ್ಯ ಭೂ ಪ್ರದೇಶವನ್ನು ಹೊಸದಾಗಿ ಒತ್ತುವರಿ ಮಾಡುವುದರ ಬಗ್ಗೆ ಅರಣ್ಯ ಇಲಾಖೆ ಕಠಿಣ ಕ್ರಮ ಜರುಗಿಸುತ್ತಿದ್ದು ಯಾರು ಯಾವುದೇ ರೀತಿಯಲ್ಲಿಯೂ ಅರಣ್ಯ ಭೂ ಪ್ರದೇಶವನ್ನು ಒತ್ತುವರಿ ಮಾಡದಂತೆ ಖಡಕ್ ಎಚ್ಚರಿಕೆ ನೀಡಿದರು. ಇನ್ನೂ ಗ್ರಾಮಗಳ ಸಂಪರ್ಕ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ವೇಳೆಯಲ್ಲಿ ಅಧಿಕಾರಿಗಳು ಅಡ್ಡಿಪಡಿಸಿದರೆ ಸರಿಯಿರದೆಂದು ಶಾಸಕ ಆರಗ ಜ್ಞಾನೇಂದ್ರ ಅರಣ್ಯಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಎಸ್.ಡಿ.ಎಂ.ಸಿ. ಅಧ್ಯಕ್ಷ ರೇವಪ್ಪ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ, ಮುಖ್ಯತಿಥಿಗಳಾಗಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸುರೇಶ್ ಸ್ವಾಮಿರಾವ್, ಕುಮಾರಿ ಶ್ವೇತಾ ಆರ್.ಬಂಡಿ, ತಾಲ್ಲೂಕ್ ಪಂಚಾಯ್ತಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಹುಂಚ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಲ್ಲವಿ, ಉಪಾಧ್ಯಕ್ಷ ದೇವೇಂದ್ರಪ್ಪ, ಗ್ರಾ.ಪಂ. ಸದಸ್ಯರಾದ ರಾಘವೇಂದ್ರ, ಶ್ರೀಧರ, ರಾಜಶೇಖರ, ಸರೋಜ, ಯಶಸ್ವತಿ ವೃಷಭರಾಜ್ ಜೈನ್, ಮಂಜುನಾಥ, ಚಂದ್ರಮತಿ, ಆಶಾ, ವೆಂಕಟೇಶ್, ಸುಮಾ ದೇವರಾಜ್‌ ಇನ್ನಿತರ ಊರಿನ ಗ್ರಾಮಸ್ಥರು ಮತ್ತು ಪೋಷಕರು ಹಾಜರಿದ್ದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ಚಂದ್ರಶೇಖರ್ ಸ್ವಾಗತಿಸಿ, ನಿರೂಪಿಸಿದರು. ರಾಘವೇಂದ್ರ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here