ಹರ್ಷ ಹತ್ಯೆ ಹಿಂದೆ ಕಾಣದ ಕೈಗಳ ಕೈವಾಡವಿದೆ ; ನಳಿನ್‌ಕುಮಾರ್ ಕಟೀಲ್

0
291

ಶಿವಮೊಗ್ಗ : ಹರ್ಷ ಹತ್ಯೆ ಹಿಂದೆ ಕಾಣದ ಕೈಗಳ ಕೈವಾಡವಿದ್ದು, ಸೂಕ್ತ ತನಿಖೆ ನಡೆಸುವ ಮೂಲಕ ನಮ್ಮ ಸರ್ಕಾರ ಬಹಿರಂಗ ಪಡಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರು.

ಅವರು ಇಂದು ಮೃತ ಹರ್ಷನ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 8 ಜನರನ್ನು ಬಂಧಿಸಲಾಗಿದೆ. ಘಟನೆ ನಡೆದ ನಂತರ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಲ್ಲಿ ಶಿವಮೊಗ್ಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಅವರಿಗೆ ಅಭಿನಂದನೆಗಳು. ಪರಿಸ್ಥಿತಿ ಈಗ ಹತೋಟಿಯಲ್ಲಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಹಂತಕರು ಯಾವುದೇ ರೀತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ತನಿಖೆ ನಡೆಯುತ್ತಿದೆ. ಬಂಧಿತರ ವಿಚಾರಣೆಯೂ ಆಗುತ್ತಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನಮ್ಮ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಸರ್ಕಾರ ಇದಕ್ಕಾಗಿ ಈಗಾಗಲೇ ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸುತ್ತಿದೆ ಎಂದರು.

ಕುಟುಂಬಕ್ಕೆ ಸಾಂತ್ವನ ಹೇಳಿದ ಕಟೀಲ್, ಹರ್ಷನ ತಾಯಿಗೆ ಊಟ ಮಾಡುವಂತೆ ಮನವಿ ಮಾಡಿದರು. ಕುಟುಂಬಕ್ಕೆ ಧೈರ್ಯ ತಂದುಕೊಳ್ಳಿ. ನಿಮ್ಮ ಜೊತೆ ನಾವಿದ್ದೇವೆ. ಸರ್ಕಾರದಿಂದ ನೆರವು ಕೊಡಲು ಪ್ರಯತ್ನಿಸುತ್ತೇವೆ. ಆರೋಗ್ಯವನ್ನ ಕಾಪಾಡಿಕೊಳ್ಳಿ ಎಂದರು.

ಸಚಿವ. ಕೆ.ಎಸ್. ಈಶ್ವರಪ್ಪ ಮಾತನಾಡಿ, ಹರ್ಷನ ಕಗ್ಗೊಲೆಯಾಗುತ್ತೆ ಎಂಬ ಕಲ್ಪನೆ ನಮಗ್ಯಾರಿಗೂ ಇರಲಿಲ್ಲ. ರಾಜ್ಯ ಸರ್ಕಾರ ಈಗಾಗಲೇ ಕೊಲೆ ಮಾಡಿದ ಗೂಂಡಾಗಳನ್ನು ಬಂಧಿಸಿದ್ದಾರೆ. ರಾಜ್ಯಾಧ್ಯಕ್ಷರು ಕೂಡ ಈ ಬಗ್ಗೆ ಭರವಸೆ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಮಾಜಿ ಜಿ.ಪಂ. ಸದಸ್ಯ ಕೆ.ಇ.ಕಾಂತೇಶ್ ಸೇರಿದಂತೆ ಹಲವರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here