ಹಳ್ಳಿಯಲ್ಲಿ ಹುಟ್ಟಿ ಬಂದೂಕು ಹಿಡಿದದ್ದು ಜನಪರ ಚಳವಳಿ ಭಾಗವಹಿಸಿ ಸಶಸ್ತ್ರ ಹೋರಾಟ ಮಾಡಿ ನಂತರ ಕಾಡಿನತ್ತ ಮುಖ ಮಾಡಿದ ಹೋರಾಟಗಾರ

0
803

ಚಿಕ್ಕಮಗಳೂರು : ಕುಡಿಮೀಸೆ ಮೂಡತೊಡಗಿತ್ತು. ಓದಿನೊಂದಿಗೆ ಹೋರಾಟದ ಹಂಬಲ. ಮಾರ್ಕ್ಸ್ ವಾದದತ್ತ ಆಕರ್ಷಣೆ. ಆಳವಾದ ಅಧ್ಯಯನದ ಹೆಬ್ಬಯಕೆ, ಎಲ್ಲದಕ್ಕೂ ಮಿಗಿಲಾಗಿ ಮಲೆನಾಡ ಭಾಗದಲ್ಲಿ ನಡೆಯುತ್ತಿದ್ದ ಶೋಷಣೆಗೆ ಮುಕ್ತಿ ಹಾಡಬೇಕೆಂಬ ಛಲ. ಇದೆಲ್ಲದರ ಫಲ ಶಿವಮೊಗ್ಗದಲ್ಲಿ ಕಾನೂನು ಪದವಿ ಓದುತ್ತಿದ್ದ ದಿನಗಳಲ್ಲಿ ಕರ್ನಾಟಕ ವಿಮೋಚನಾ ರಂಗ ಪ್ರವೇಶ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬುಕ್ಕಡಿಬೈಲಿನ ಕುಗ್ರಾಮದಲ್ಲಿ ಬಿ.ಜಿ ಕೃಷ್ಣಮೂರ್ತಿ ಜನಿಸಿದ್ದು ಬ್ರಾಹ್ಮಣ ಕುಟುಂಬದಲ್ಲಿ. ಕನ್ನಡ ನಾಡು – ನುಡಿ, ಭಾಷೆ, ನೆಲ – ಜಲ ಸಮಸ್ಯೆ ಬಗ್ಗೆಯೂ ತುಡಿತ. ಕನ್ನಡ ಭಾಷಾ ಹೋರಾಟ, ಕಾವೇರಿ ನೀರಿನ ಚಳವಳಿ, ರಾಯಚೂರು ನಾರಾಯಣಪುರ ಬಲದಂಡೆ ನಾಲೆ ವಿರುದ್ಧ ಸಂಘರ್ಷ, ನೈಸ್ ಸಂಸ್ಥೆ ವಿರುದ್ಧ ಪ್ರತಿರೋಧ, ಮೈಸೂರು ಬೆಂಗಳೂರು ಕಾರಿಡಾರ್ ಗೆ ತೀವ್ರ ವಿರೋಧ ನಿರಂತರ ಹೋರಾಟ.

ಮಲೆನಾಡಿನ ಗಿರಿಜನರು ಹಾಗೂ ಆದಿವಾಸಿಗಳ ಮಾರಕವಾದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ, ನಿಸರ್ಗಕ್ಕೆ ಕೊಡಲಿ ಏಟು ಹಾಕಲಿದ್ದ ಕುದುರೆಮುಖ – ಗಂಗಡಿಕಲ್ಲು ಗಣಿಗಾರಿಕೆ ವಿರೋಧಿ ಚಳವಳಿ, ಕೆಜಿಎಫ್ ಚಿನ್ನದ ಗಣಿ ವಿರುದ್ಧ ಪ್ರಬಲ ಸತ್ಯಾಗ್ರಹ, ಬಾಬಾಬುಡನ್ ಗಿರಿ ಉಳಿಸಿ ಚಳವಳಿಯಲ್ಲಿ ಸಕ್ರಿಯ ಭಾಗಿ.

ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಪುರೋಹಿತ ಶಾಹಿ ವ್ಯವಸ್ಥೆಗೆ ಬೇಸತ್ತು, ಜಾತಿ ವರ್ಗ ರಹಿತ ಸಮಾಜ ಕಟ್ಟಬೇಕೆಂಬ ತುಳಿತಕ್ಕೆ ಒಳಗಾಗಿ ಜನಪರ ಚಳವಳಿಗೆ ಧ್ವನಿಯಾಗಿ, ಪ್ರಜಾಪ್ರಭುತ್ವ ಮಾದರಿಯ ಹೋರಾಟಕ್ಕೆ ಬೇಸತ್ತು ನಂತರದ ದಿನಗಳಲ್ಲಿ 2003ರ ಬಳಿಕ ಹೊರಳಿದ್ದು ಮಾವೋವಾದಿ ಸಶಸ್ತ್ರ ಹೋರಾಟದತ್ತ.

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಕುತ್ಲೂರಿನಲ್ಲಿ ನಡೆದ ಹಾಜಿಮಾ – ಪಾರ್ವತಿ ಎನ್ಕೌಂಟರ್ ಮನಸ್ಸನ್ನು ತೀವ್ರ ಘಾಸಿಗೊಳಿಸಿತ್ತು. ಪ್ರಭುತ್ವದ ವಿರುದ್ಧ ಮತ್ತಷ್ಟು ಗಟ್ಟಿ ಸಮರ ಸಾರಬೇಕೆಂಬ ನೆತ್ತರ ತುಡಿತಕ್ಕೆ ಒಳಗಾಗಿ ಈ ಯುವಕನನ್ನು ಬೇರೆ ಜಗತ್ತಿನತ್ತ ಕೊಂಡೊಯ್ದಿತ್ತು‌. ಬಂದೂಕು ಹಿಡಿದು ಕಾಡಿನತ್ತ ಹೊರಟ ಯುವಕ ಮತ್ತೆ ಹೊರಜಗತ್ತಿಗೆ ಕಾಣಿಸಿದ್ದು ಬಲು ಅಪರೂಪ.

ಮಲೆನಾಡಿನ ದಟ್ಟ ಕಾನನ, ಬೆಟ್ಟಗುಡ್ಡಗಳು, ತೊರೆ ಹಳ್ಳ ನದಿಗಳು, ಮಳೆ ಗಾಳಿ ಚಳಿಯನ್ನು ಲೆಕ್ಕಿಸದೆ ಸಂಘಟನೆ ಸಂಘರ್ಷದಲ್ಲೆ ಬಹುತೇಕ ಬದುಕು ಸವೆತ.

ಆದರೆ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಭಾಗದಲ್ಲಿ ಕುದುರೆಮುಖ ಸಮೀಪ ಮೊದಲ ಬಾರಿಗೆ ಅರಣ್ಯ ಸಿಬ್ಬಂದಿ ಮತ್ತು ನಕ್ಸಲರ ಮಧ್ಯೆ ನಡೆದ ಗುಂಡಿನ ಚಕಮಕಿಯಿಂದ ಹಿಡಿದು ಮೆಣಸಿನಹಾಡ್ಯ ಶೇಷಪ್ಪನ ಹತ್ಯೆ, ಪೊಲೀಸ್ ಪೇದೆಯ ಅಪಹರಣ, ಹೆಬ್ರಿಯಲ್ಲಿ ಭೋಜಶೆಟ್ಟಿ ಹತ್ಯೆ. ಹೀಗೆ ನಕ್ಸಲರಿಂದ ನಡೆದ- ನಡೆಯಿತೆನ್ನಲಾದ ಬಹುತೇಕ ಪ್ರಕರಣಗಳಲ್ಲಿ ಈತನ ಹೆಸರು ಥಳಕು ಹಾಕಿಕೊಳ್ಳದೆ ಇರುತ್ತಿರಲಿಲ್ಲ. ಪರಿಣಾಮ ಶೃಂಗೇರಿ ಠಾಣೆಯಲ್ಲಿ 26 ಕ್ಕೂ ಹೆಚ್ಚು ಪ್ರಕರಣ ದಾಖಲು.

ತುಂಗಭದ್ರಾ ದಳದ ಏರಿಯಾ ಡಿಸಿಎಂ ಕೇಡರ್ ಹುದ್ದೆ ಪಡೆದಿದ್ದ ಈತ ಮಲೆನಾಡಿನ ಬಗ್ಗೆ ವಿಶೇಷ ಅಧ್ಯಯನ ನಡೆಸಿ ವರದಿಯೊಂದನ್ನು ಸಿದ್ಧಪಡಿಸಿದ್ದ ಎನ್ನುವುದು ಈಗ ಬಹಿರಂಗಗೊಂಡ ಮಾಹಿತಿ.

‘ಮಲೆನಾಡಿನ ವರ್ಗಗಳ’ ಕುರಿತು ಗಂಭೀರ ಅಧ್ಯಯನ ನಡೆಸಿ ಮಾವೋವಾದಿ ಪಕ್ಷದ ರಾಜ್ಯ ಸಮಿತಿ ಸಭೆಯಲ್ಲೂ ಪರ – ವಿರೋಧ, ತೀವ್ರ ವಿಮರ್ಶೆಗಳ ನಂತರ ಸಮಿತಿ ಒಪ್ಪಿಕೊಂಡದ್ದು ಬಹುಮುಖ್ಯ ಅಂಶ ಎನ್ನುತ್ತಾರೆ ಆತನೊಂದಿಗೆ ಇದ್ದು ಈಗ ಶರಣಾಗತಿಗೆ ಒಳಗಾಗಿರುವ ಸಹಚರರು.

ಮೆಣಸಿನಹಾಡ್ಯದ ಹತ್ಯಡ್ಕದಲ್ಲಿ ನಡೆದ ಪರಮೇಶ್ ಮತ್ತು ಇತರರ ಭೀಕರ ಎನ್ಕೌಂಟರ್ ಬಳಿಕ ಸಶಸ್ತ್ರ ಹೋರಾಟಕ್ಕೆ ಇದು ಪ್ರಶಸ್ತ ಸ್ಥಳವಲ್ಲ ಎಂಬ ನಿರ್ಧಾರಕ್ಕೆ ಬಂದ ಕೃಷ್ಣಮೂರ್ತಿ ಮತ್ತವನ ಸಹಚರರು ಮುಖ ಮಾಡಿದ್ದು ಕೇರಳದತ್ತ ಎನ್ನುತ್ತಿವೆ ಪೊಲೀಸ್ ಮೂಲಗಳು.

ಆದರೂ ಹುಟ್ಟಿ ಬೆಳೆದ ಊರಿನ ನಂಟು ಸೇರಿದಂತೆ ತಾನು ಓಡಾಡಿ ಸಂಘಟಿಸಿದ ಬೆಟ್ಟಗುಡ್ಡಗಳ ನಡುವಿನ ಕೆಲ ಮನೆಗಳಿಗೆ ಆಗಾಗ ಬಂದು ಹೋಗುತ್ತಿದ್ದ ಎನ್ನುವ ಸುದ್ದಿಯೂ ಇದೆ. ಅದನ್ನೇ ಬಂಡವಾಳ ಮಾಡಿಕೊಂಡು ನಕ್ಸಲ್ ನಿಗ್ರಹ ದಳ ಜಿಲ್ಲೆಯಲ್ಲಿ ಇನ್ನೂ ಕಾಲೂರಿ ನಿಂತಿದೆ.

ಕರ್ನಾಟಕ ಕೇರಳ ಗಡಿ ಪ್ರದೇಶ ವಯನಾಡಿನ ಸುಲ್ತಾನ್ ಬತ್ತೇರಿ ಬಳಿ ನಕ್ಸಲ್ ನಿಗ್ರಹ ದಳ ಭೂಗತ ಆಗಿದ್ದ ಈತನನ್ನು ಬಂಧಿಸಿದ್ದಾರೆ ಎನ್ನುವುದು ಮಂಗಳವಾರ ರಾತ್ರಿ ಹೊರಬಿದ್ದ ಸುದ್ದಿ. ಜತೆಗೆ ನಕ್ಸಲ್ ಚಳವಳಿಯ ಕೇಂದ್ರ ಬಿಂದು ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ. ಇವರದು ಬಂಧನವಲ್ಲ ಶರಣಾಗತಿ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಬಿ.ಜಿ. ಮೂರ್ತಿಯ ಜೊತೆ ಕಳಸ ತಾಲ್ಲೂಕಿನ ಮಾವಿನಕೆರೆಯ ಸವಿತಾ ಕೂಡ ಬಂಧನಕ್ಕೆ ಒಳಗಾಗಿದ್ದಾರೆ. ಕೃಷ್ಣಮೂರ್ತಿ ಇನ್ನೂ ಬಂಧೀಖಾನೆಯಿಂದ ಹೊರಬರೋದು ಸದ್ಯಕ್ಕೆ ದೂರದ ಮಾತು. ನಕ್ಸಲ್ ನಿಗ್ರಹ ಪಡೆಯ ಕರ್ನಾಟಕದ ಮುಖ್ಯಸ್ಥರು ಕೇರಳಕ್ಕೆ ತೆರಳಿ ಹೆಚ್ಚಿನ ವಿಚಾರಣೆಗೆ ರಾಜ್ಯಕ್ಕೆ ಕರೆತರುವ ಸಾಧ್ಯತೆಗಳೂ ಇದೆ ಎನ್ನಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here