ತೀರ್ಥಹಳ್ಳಿ : ಪಟ್ಟಣದ ಶಾಂತವೇರಿ ಗೋಪಾಗೌಡ ರಂಗಮಂದಿದಲ್ಲಿ ಬಿಜೆಪಿ ಓಬಿಸಿ ಮೋರ್ಚಾದ ಜಿಲ್ಲಾ ಮಟ್ಟದ ಜನಜಾಗೃತಿ ಸಮಾವೇಶ ಶನಿವಾರ ನಡೆಯಿತು.
ಈ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರ ಬಾಬು, ದೇಶದಲ್ಲಿ ಶೇ.60 ಕ್ಕೂ ಹೆಚ್ಚು ಹಿಂದುಳಿದ ವರ್ಗದ ಜನರು ಇದ್ದಾರೆ. ಹಿಂದುಳಿದ ವರ್ಗದ ಜನರು ಸಂಘಟನೆಯಿಂದ ಜಾಗೃತರಾಗಿ, ಶಕ್ತಿಯುತರಾಗಬೇಕಿದೆ ಎಂದು ಕರೆ ನೀಡಿದರು.
ಕೈಗಾರಿಕೆಗಳು ಬಂದಂತೆ ಹಿಂದುಳಿದ ವರ್ಗಗಳು ತಮ್ಮ ಮೂಲ ವೃತ್ತಿಯನ್ನೇ ಕಳೆದುಕೊಂಡರು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಹಿಂದುಳಿದ ವರ್ಗಗಳು ಅಲ್ಲೇ ಉಳಿದಿವೆ. ಇದಕ್ಕೆಲ್ಲಾ ಕಾರಣ ಇಷ್ಟು ವರ್ಷ ನಮ್ಮನ್ನು ಆಳಿದ ಕಾಂಗ್ರೆಸ್ ಪಕ್ಷ . ಆದರೆ ಈಗ ಹಿಂದುಳಿದ ವರ್ಗಗಳ ಆಯೋಗಕ್ಕೆ ಮೋದಿ ನೇತೃತ್ವದ ಸರ್ಕಾರ ರಾಷ್ಟ್ರೀಯ ಮಾನ್ಯತೆ ಕೊಟ್ಟಿದೆ ಎಂದರು.
ಕೇಂದ್ರ ಸರ್ಕಾರದ ಸಂಪುಟದಲ್ಲಿ ಹಿಂದುಳಿದ ವರ್ಗದ 27 ಜನರಿಗೆ ಅವಕಾಶ ಕೊಟ್ಟಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ತತ್ವದಡಿ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ಓಬಿಸಿ ಮೋರ್ಚಾದ ಸಮಾವೇಶ ರಾಜ್ಯದ 31 ಜಿಲ್ಲೆಯಲ್ಲಿ ಕೂಡ ನಡೆಯಲಿದೆ ಎಂದರು.
ಚುನಾವಣೆಗಳಲ್ಲಿ ಓಬಿಸಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಓಬಿಸಿ ಮತದಾರರ ನೆರವಿಲ್ಲದೆ ಗೆಲ್ಲಲು ಸಾಧ್ಯವಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವಲ್ಲಿ ಒಬಿಸಿ ಹೆಚ್ಚಿನ ಶ್ರಮ ವಹಿಸಲಿದೆ ಎಂದು ತಿಳಿಸಿದರು.
ಕೇಂದ್ರದ ಅಗ್ನಿಪಥ್ ಯೋಜನೆ ವಿರೋಧಿಸುವ ಕೆಲಸ ಮಾಡಲಾಗುತ್ತಿದೆ.18 ವಯಸ್ಸಿನ ಯುವಕರಿಗೆ ಸೈನ್ಯಕ್ಕೆ ಸೇರಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇಸ್ರೇಲ್ ನಂತಹ ಹಲವು ದೇಶಗಳಲ್ಲಿ ಸೇನೆಯಲ್ಲಿ ಸೇವೆ ಮಾಡುವುದು ಕಡ್ಡಾಯವಾಗಿದೆ ಆದರೆ, ನಮ್ಮ ದೇಶದಲ್ಲಿ ಹಾಗಿಲ್ಲ. ಸ್ವಯಂಪ್ರೇರಿತವಾಗಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಅಗಾಧವಾದ ಯುವ ಶಕ್ತಿ ನಮ್ಮ ದೇಶದಲ್ಲಿದ್ದು, ಅದನ್ನು ಬಳಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಅದನ್ನು ಕಾಂಗ್ರೆಸ್ ರಾಜಕೀಯಕ್ಕಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಲಿ ಎಂದು ಒತ್ತಾಯಿಸಿದರು.
Related