ಹಿಂದೂ ಬ್ರಿಗೇಡ್‍ನ ಇನ್ನೊಂದು ಹೆಸರೇ ಕಾಂಗ್ರೆಸ್ ಬಿ ಟೀಮ್ ; ಕಲ್ಮರುಡಪ್ಪ

0
475

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಹಿಂದೂ ಬ್ರಿಗೇಡ್ ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿ ಬಿಜೆಪಿಯನ್ನು ಹಣಿಯಬೇಕೆನ್ನುವ ವ್ಯವಸ್ಥಿತ ಸಂಚು ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್. ಸಿ. ಕಲ್ಮರುಡಪ್ಪ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೂ ಬ್ರಿಗೇಡ್ ಎನ್ನುವುದು ಕಾಂಗ್ರೆಸ್ ಕೃಪಾಪೋಷಿತ ಸಂಘಟನೆಯಾಗಿದ್ದು, ನಮ್ಮ ಪಕ್ಷಕ್ಕೆ ಸಂಬಂಧ ಇಲ್ಲದೆ ಇರುವ ಕೆಲವರು ಈ ಹೆಸರಲ್ಲಿ ಬಿಜೆಪಿಗೆ ಏನೋ ತೊಂದರೆ ಕೊಡುತ್ತೇವೆ ಎನ್ನುವ ನಿಟ್ಟಿನಲ್ಲಿ ಆಲೋಚಿಸುತ್ತಿದ್ದಾರೆ. ಆದರೆ ಬಿಜೆಪಿಯ ಕಾರ್ಯಕರ್ತರು ಮತ್ತು ಶೃಂಗೇರಿ ಕ್ಷೇತ್ರದ ಮತದಾರರು ಅತ್ಯಂತ ಪ್ರಬುದ್ಧರಿದ್ದಾರೆ. ವಿಚಾರವನ್ನು ಗಮನಿಸುವ ಹಾಗೂ ಯಾವ ವ್ಯಕ್ತಿಗೆ ಎಷ್ಟು ಬೆಲೆ ಕೊಡಬೇಕೆನ್ನುವುದರಲ್ಲಿ ನಿಸ್ಸೀಮರು. ಈ ಕಾರಣಕ್ಕೆ ಇಂತಹ ಕುತಂತ್ರಗಳು ಶೃಂಗೇರಿ ಕ್ಷೇತ್ರದಲ್ಲಿ ನಡೆಯುವುದಿಲ್ಲವೆಂದರು.

ಬಿಜೆಪಿ ಹೆಸರೇಳಿಕೊಂಡೇ ಬಿಜೆಪಿಯನ್ನು ಹಣಿಯುವ ತಂತ್ರಕ್ಕೆ ಯಶಸ್ಸು ಸಿಗುವುದಿಲ್ಲ. ಶೃಂಗೇರಿ ಕ್ಷೇತ್ರದ ಜನರು, ಬಿಜೆಪಿ ಕಾರ್ಯಕರ್ತರು ಇವರ ಮಾತಿಗೆ ಬೆಲೆ ಕೊಡುವುದಿಲ್ಲ. ಈಗಾಗಲೇ ಬಿಜೆಪಿ ಕೆಲವರನ್ನು ಉಚ್ಛಾಟನೆ ಮಾಡಿ ಹಲವಾರು ವರ್ಷಗಳಾಗಿವೆ ಎಂದರು.

ಹಿಂದೂ ಬ್ರಿಗೇಡ್ ಕಾಂಗ್ರೆಸ್‍ನ ಬಿ. ಟೀಮ್ ಆಗಿದ್ದು, ಅವರೊಂದಿಗೆ ನಮ್ಮ ಯಾವುದೇ ಕಾರ್ಯಕರ್ತರು ಗುರುತಿಸಿಕೊಂಡರೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಕೊಪ್ಪ ಮಂಡಲದ ಅಧ್ಯಕ್ಷ ಸತೀಶ್ ಅದ್ದಡ, ಎನ್. ಆರ್. ಪುರ ಅಧ್ಯಕ್ಷ ಅರುಣ್, ಕಾರ್ಯದರ್ಶಿ ಮಂಜುನಾಥ್, ಶೃಂಗೇರಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ನೂತನ್, ಜಿಲ್ಲಾ ಕಾರ್ಯದರ್ಶಿ ಪುಣ್ಯಪಾಲ್ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here