ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜೆ.ಎನ್.ಷಣ್ಮುಖಪ್ಪಗೌಡ ನಿಧನ

0
721

ರಿಪ್ಪನ್‌ಪೇಟೆ: ಸ್ವಾತಂತ್ರ್ಯ ಹೋರಾಟಗಾರ, ಪ್ರಗತಿಪರ ಕೃಷಿಕ ಹಾಗೂ ಗುರುಬಸವೇಶ್ವರ ವಿದ್ಯಾಪೀಠದ ಟ್ರಸ್ಟಿ, ಜಯದೇವ ರೈಸ್ ಮಿಲ್ ಉದ್ಯಮಿ ಜೆ.ಎನ್.ಷಣ್ಮುಖಪ್ಪಗೌಡರು (99) ತಮ್ಮ ಸ್ವಗೃಹದಲ್ಲಿ ಇಂದು ನಿಧನಹೊಂದಿದ್ದಾರೆ.

ಮೃತರು ಮೂರು ಪುತ್ರಿಯರು ಹಾಗೂ 7 ಜನಗಂಡು ಮಕ್ಕಳನ್ನು ಅಗಲಿದ್ದಾರೆ.

ಜೆ.ಎನ್ ಷಣ್ಮುಖಪ್ಪ ಗೌಡ 1942 ರಲ್ಲಿ ಮಹಾತ್ಮ ಗಾಂಧೀಜಿಯ ಕರೆಗೆ ಓಗೊಟ್ಟು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಆಂದೊಲನದಲ್ಲಿ ಭಾಗವಹಿಸಿದ್ದರು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಭತ್ಯೆಯನ್ನು ನಯವಾಗಿಯೇ ತಿರಸ್ಕರಿಸಿ ‘ನಾನು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದೇನೆ ನನಗೆ ಯಾವುದೇ ಭತ್ಯೆ ಬೇಡ’ ಎಂದಿದ್ದರು.

1958 ರ ಏಪ್ರಿಲ್ ತಿಂಗಳಿನಲ್ಲಿ ನವದೆಹಲಿಯ ವಿಜ್ಞಾನ ಭವನದಲ್ಲಿ ಮೂರನೇ ಸಹಕಾರಿ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು. ಅಂದಿನ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರ ಪ್ರಸಾದ್ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿದ್ದ ಚಹಾಕೂಟಕ್ಕೆ ರಿಪ್ಪನ್‌ಪೇಟೆಯ ಜೆ.ಎನ್ ಷಣ್ಮುಖಪ್ಪ ಗೌಡರು ಸೇರಿದಂತೆ ಅನೇಕ ಸಹಕಾರಿ ಧುರೀಣರನ್ನು ಆಹ್ವಾನಿಸಿದ್ದರು.

ಮೂಲತಃ ಕೃಷಿಕರಾಗಿದ್ದ ಷಣ್ಮುಖಪ್ಪಗೌಡರು ನಂತರ ಊರಿನಲ್ಲಿ ರೈತರಿಗೆ ನೆರವಾಗುವಂತಹ ಅಕ್ಕಿ ಗಿರಣಿಯನ್ನು ಸ್ಥಾಪಿಸಿದ್ದರು. ರಿಪ್ಪನ್‌ಪೇಟೆ ಸಹಕಾರ ಸಂಘದ ಸದಸ್ಯರಾಗಿ ನಂತರ ತಮ್ಮ ಸೇವಾ ಮನೋಭಾವದಿಂದ ಸಹಕಾರ ಸಂಘದ ಅಧ್ಯಕ್ಷರಾಗಿಯು ಕಾರ್ಯ ನಿರ್ವಹಿಸಿದ್ದರು.

ರಿಪ್ಪನ್‌ಪೇಟೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣ ಕೊಡಿಸುವಲ್ಲಿ ಜೆ.ಎನ್ ಷಣ್ಮುಖಪ್ಪ ಗೌಡರವರ ಪಾತ್ರ ತುಂಬಾ ಹಿರಿದಾಗಿದೆ. 1963 ರಲ್ಲಿ ಖಾಸಗಿಯವರ ಮನೆಯಲ್ಲಿ ಪ್ರೌಢಶಾಲೆಯನ್ನು ಆರಂಭಿಸಿದ ಇವರು ನಂತರ ತಮ್ಮ ಸ್ವಂತ ಖರ್ಚಿನಲ್ಲಿಯೇ ಶಾಲೆಗಾಗಿ ಕೊಠಡಿಗಳನ್ನು ಕಟ್ಟಿಕೊಟ್ಟಿದ್ದರು. ನಂತರ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪರವರು ರಿಪ್ಪನ್‌ಪೇಟೆಗೆ ಆಗಮಿಸಿದಾಗ ಪ್ರೌಢಶಾಲೆಯನ್ನು ಸರ್ಕಾರಕ್ಕೆ ವಹಿಸಿಕೊಟ್ಟಿದ್ದರು.

ಸಾಹಿತ್ಯದಲ್ಲೂ ಅಪಾರವಾದ ಆಸಕ್ತಿಯನ್ನು ಹೊಂದಿದ್ದ ಇವರು ರಾಮಾಯಣ, ಮಹಾಭಾರತ, ವಚನ ಸಾಹಿತ್ಯ, ಧಾರ್ಮಿಕ ಸಾಹಿತ್ಯ ಹಾಗೂ ರಾಷ್ಟ್ರನಾಯಕರ ಚರಿತ್ರೆಗಳನ್ನು ಸೇರಿದಂತೆ ಅನೇಕ ಪುಸ್ತಕಗಳನ್ನು ಸಂಗ್ರಹಿಸಿ ಮನೆಯಲ್ಲಿಯೇ ಸಣ್ಣ ಗ್ರಂಥಾಲಯವೊಂದನ್ನು ಇಟ್ಟುಕೊಡಿದ್ದರು.

ಪ್ರಾಮಾಣಿಕ, ಸರಳ, ಶಿಸ್ತುಬದ್ದ ಜೀವನ, ಊರಿನೆಡಗಿನ ಅದಮ್ಯ ಪ್ರೀತಿ ತೋರುತ್ತಿದ್ದ ಜೆ.ಎನ್ ಷಣ್ಮುಖಪ್ಪ ಗೌಡರವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ.

ಸಂತಾಪ:

ಜೆ.ಎನ್.ಷಣ್ಮುಖಪ್ಪಗೌಡರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಆನಂದಪುರ ಮುರುಘಾಮಠದ ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here