ಹೊಸನಗರ: ತಾಲ್ಲೂಕಿನ ಹುಂಚ ಹಸಿರು ಬೆಟ್ಟದಲ್ಲಿ ಮಳೆಗಾಲದಲ್ಲಿ ಗಣಿಗಾರಿಕೆ ನಡೆಸದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಜಿಲ್ಲಾಧಿಕಾರಿ ಸೆಲ್ವಮಣಿ ಸೂಚನೆ ನೀಡಿದ್ದಾರೆ ಎಂದು ವೃಕ್ಷಲಕ್ಷ ಆಂದೋಲನದ ಪ್ರಕಟಣೆಯಲ್ಲಿ ತಿಳಿಸಿದೆ.
ಹುಂಚ ಹಸಿರು ಬೆಟ್ಟದಲ್ಲಿ ಭಾರೀ ಕಲ್ಲು ಗಣಿಗಾರಿಕೆ ಆರಂಭಿಸಬಾರದು ಎಂದು ಮೂರು ವರ್ಷಗಳಿಂದ ಹೋರಾಟ ನಡೆಸಲಾಗಿದೆ. ಆದರೆ, ನ್ಯಾಯಾಲಯದ ಆದೇಶ ತಂದು ಗಣಿಗಾರಿಕೆ ಆರಂಭಿಸಿದ್ದಾರೆ. ಜಿಲ್ಲಾಡಳಿತ ತಡೆ ಮಾಡದಿದ್ದರೆ ಹುಂಚದ ಸುತ್ತಲಿನ 10 ಹಳ್ಳಿಗಳು ಭೂಕುಸಿತದ ಅಪಾಯಕ್ಕೆ ಸಿಲುಕಲಿವೆ. ಪ್ರಾಣ ಹಾನಿ, ರೈತರ ಮನೆ-ಹೊಲ ನಾಶಕ್ಕೆ ಕಾರಣವಾಗುವ ಮುನ್ನ ಅದಕ್ಕೆ ತಡೆ ನೀಡುವಂತೆ ಹುಂಚದ ರೈತರು ಹಾಗೂ ವೃಕ್ಷಲಕ್ಷ ಆಂದೋಲನದ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದರು. ಅದಕ್ಕೆ ಸ್ಪಂದನೆ ದೊರೆತಿದೆ.
ಶಿವಮೊಗ್ಗದಲ್ಲಿ ಈಚೆಗೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಹುಂಚದ ಪ್ರಚಲಿತ ವಿದ್ಯಮಾನದ ಬಗ್ಗೆ ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ ಮಾಹಿತಿ ನೀಡಿದರು. ಈ ವೇಳೆ ಹುಂಚ ನಾಗೇಂದ್ರ, ಶ್ರೀಪಾದ, ವೆಂಕಟೇಶ, ಸುರೇಶ ಈ ವೇಳೆ ಹಾಜರಿದ್ದರು.