ಹುಟ್ಟಿದಾಗಿನಿಂದಲೂ ಶಾಲಾ-ಕಾಲೇಜು ಮೆಟ್ಟಿಲು ಹತ್ತದ ಯುವತಿ ಪಿಯುಸಿ ಪರೀಕ್ಷೆಯಲ್ಲಿ ಪಾಸ್

0
1764

ನರಸಿಂಹರಾಜಪುರ: ಹುಟ್ಟಿದಾಗಿನಿಂದ ಶಾಲಾ-ಕಾಲೇಜು ಮೆಟ್ಟಿಲು ಹತ್ತದ ತಾಲೂಕಿನ ಬಾಳೆಹೊನ್ನೂರು ಸಮೀಪದ ಅರಳಿಕೊಪ್ಪ ಗ್ರಾಮದ ಯುವತಿ ಮೊದಲ ಬಾರಿಗೆ ಪಿಯುಸಿ ಪರೀಕ್ಷೆ ಪಾಸ್ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾಳೆ.

ಹೌದು, ಶಾಲಾ-ಕಾಲೇಜಿಗೆ ಹೋಗದೆ, ಮನೆಯಲ್ಲೇ ಓದಿ ಮೊದಲ ಬಾರಿಗೆ ಪಿಯುಸಿ ಪಾಸ್ ಮಾಡಿದ ಯುವತಿ ಹೆಸರು ದೀಪಿಕಾ. ಕೋಟಿ ಜನರಲ್ಲಿ ಒಬ್ಬರಿಗೆ ಬರುವ ಖಾಯಿಲೆಯಿಂದ ಈಕೆ ಬಳಲುತ್ತಿದ್ದಾಳೆ. ಶಾಲಾ-ಕಾಲೇಜು ಸೇರಿದಂತೆ ಮನೆಯಿಂದ ಹೊರ ಹೋಗುವಂತಿಲ್ಲ. ಈಕೆಯದ್ದು ಮನೆಯೊಳಗಿನ ಜೀವನ. ಆದರೂ ಕೂಡ, ಬಾಳೆಹೊನ್ನೂರು ಸಮೀಪದ ಅರಳಿಕೊಪ್ಪ ಗ್ರಾಮದ ಸುಧಾಕರ್-ಪ್ರತಿಮಾ ದಂಪತಿ ಪುತ್ರಿ ದೀಪಕಾ ಫಸ್ಟ್ ಅಟೆಂಟ್‍ನಲ್ಲೇ ಪಿಯುಸಿ ಪಾಸ್ ಮಾಡಿ ಮಾದರಿಯಾಗಿದ್ದಾಳೆ.

ಈಕೆ ಹುಟ್ಟಿದಾಗಿನಿಂದ ಯಾವುದೇ ಶಾಲಾ-ಕಾಲೇಜಿಗೆ ಹೋಗಿಲ್ಲ. ಯಾವ ಶಿಕ್ಷಕರ ಪಾಠವನ್ನೂ ಕೇಳಿಲ್ಲ. ಯಾವ ಟ್ಯೂಷನ್‍ಗೂ ಹೋಗಿಲ್ಲ. ತಾನೇ ಓದಿ, ತನ್ನ ಗ್ರಹಿಕಾ ಶಕ್ತಿಯಿಂದ ಮೊದಲ ಹಂತದಲ್ಲೇ ಪಿಯುಸಿ ಪಾಸ್ ಮಾಡಿದ್ದಾಳೆ. ಕಳೆದ ಎರಡು ವರ್ಷದ ಹಿಂದೆ ಸರ್ಕಾರ ಖಾಸಗಿಯಾಗಿ ನಡೆಸಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನೂ ಕೂಡ ಪಾಸ್ ಮಾಡಿದ್ದಳು. ಓದಿನ ಜೊತೆಗೆ ಚಿತ್ರಕಲೆ, ಎಂಬ್ರಾಯ್ಡಿಂಗ್, ಕಂಪ್ಯೂಟರ್ ಜೊತೆ ಟೈಲರಿಂಗ್ ಕೂಡ ಮಾಡಿದ್ದಾಳೆ. ತನ್ನಂತೆ ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ತನ್ನ ತಂಗಿಗೂ ತಾನೇ ಪಾಠ ಮಾಡುತ್ತಿದ್ದಾಳೆ. ಹೆತ್ತವರು ಕೂಡ ಕಳೆದ 20 ವರ್ಷಗಳಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಕ್ಕಳನ್ನ ಯಾವುದೇ ಕೀಳಿರಿಮೆ ಬಾರದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳುತ್ತಿದ್ದಾರೆ.

ಓದಿ ದೊಡ್ಡವಳಾಗಿ ತನ್ನಂತೆ ಅಪರೂಪದ ಖಾಯಿಲೆಯಿಂದ ಬಳಲುವವರ ಸೇವೆ ಮಾಡಬೇಕೆಂದು ಆಸೆ ಇರುವ ದೀಪಿಕಾಗೆ ಆಕೆಯ ಖಾಯಿಲೆಯೇ ಅಡ್ಡಿಯಾಗಿದೆ. ಹೆತ್ತವರು ಕೂಡ ಮಗಳಿಗೆ ಯಾವುದಾದರೂ ಒಂದು ಕೆಲಸ ಸಿಕ್ಕರೆ ಅವಳ ಜೀವನಕ್ಕೂ ಸಹಕಾರಿಯಾಗಲಿದೆ. ಜೊತೆಗೆ, ನಮಗೂ ತುಸು ನೆಮ್ಮದಿ ಸಿಗಲಿದೆ ಎಂದಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here