ಹೆಚ್ಚುವರಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ !

0
166

ಶಿವಮೊಗ್ಗ : ಕರ್ನಾಟಕ ಸರ್ಕಾರದ ಅಧಿಸೂಚನೆಯನ್ವಯ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ದಿ: 11-03-2016 ರಿಂದಲೇ ನಿಷೇಧಿಸಲಾಗಿದ್ದು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ನವದೆಹಲಿ ಇವರು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮಗಳು 2021 ರಲ್ಲಿ ಈ ನಿಷೇಧಿತ ಉತ್ಪನ್ನಗಳ ಜೊತೆಗೆ ಹೆಚ್ಚುವರಿ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು 2022 ರ ಜುಲೈ 01 ರಿಂದ ಜಾರಿಗೆ ಬರುವಂತೆ ನಿಷೇಧಿಸಿದೆ.

2016 ರಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಬ್ಯಾನರ್‍ಗಳು, ಪ್ಲಾಸ್ಟಿಕ್ ಬಂಟಿಂಗ್ಸ್, ಪ್ಲಾಸ್ಟಿಕ್ ಫ್ಲೆಕ್ಸ್, ಪ್ಲಾಸ್ಟಿಕ್ ಪ್ಲೇಟ್‍ಗಳು, ಪ್ಲಾಸ್ಟಿಕ್ ಧ್ವಜಗಳು, ಪ್ಲಾಸ್ಟಿಕ್ ಕಪ್‍ಗಳು, ಪ್ಲಾಸ್ಟಿಕ್ ಸ್ಪೂನ್‍ಗಳು, ಅಂಟಿಕೊಳ್ಳುವ ಫಿಲ್ಮ್‍ಗಳು, ಎಲ್ಲಾ ದಪ್ಪದ ಡೈಇಂಗ್ ಟೇಬಲ್ ಮೇಲೆ ಹರಡಲು ಬಳಸುವ ಪ್ಲಾಸ್ಟಿಕ್ ಹಾಳೆಗಳು, ಸ್ಟ್ರಾಗಳು, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳನ್ನು ನಿಷೇಧಿಸಲಾಗಿತ್ತು.

ಇದೀಗ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ರ ನಿಮಯ 4(2) ರ ಪ್ರಕಾರ (ತಿದ್ದುಪಡಿಯಂತೆ) ಪಾಲಿಸ್ಟ್ರೆರೀನ್ ಮತ್ತು ವಿಸ್ತರಿತ ಪಾಲಿಸ್ಟ್ರೆರೀನ್ ಸೇರಿದಂತೆ ಪ್ಲಾಸ್ಟಿಕ್ ಸ್ಟಿಕರ್‍ಗಳೊಂದಿಗೆ ಇಯರ್ ಬಡ್‍ಗಳು, ಬಲೂನ್‍ಗಳಿಗೆ ಬಳಸುವ ಪ್ಲಾಸ್ಟಿಕ್ ಸ್ಟಿಕ್‍ಗಳು, ಪ್ಲಾಸ್ಟಿಕ್ ಧ್ವಜಗಳು, ಪ್ಲಾಸ್ಟಿಕ್ ಕ್ಯಾಂಡಿ ಸ್ಟಿಕ್‍ಗಳು, ಪ್ಲಾಸ್ಟಿಕ್ ಐಸ್‍ಕ್ರೀಂ ಸ್ಟಿಕ್‍ಗಳು, ಅಲಂಕಾರಕ್ಕಾಗಿ ಬಳಸುವ ಪಾಲಿಸ್ಟ್ರೆರೀನ್(ಥರ್ಮಾಕೋಲ್), ಪ್ಲಾಸ್ಟಿಕ್ ಪ್ಲೇಟ್‍ಗಳು, ಪ್ಲಾಸ್ಟಿಕ್ ಕಪ್‍ಗಳು ಮತ್ತು ಲೋಟಗಳು, ಫೋರ್ಕ್‍ಗಳು, ಪ್ಲಾಸ್ಟಿಕ್ ಚಮಚಗಳು, ಪ್ಲಾಸ್ಟಿಕ್ ಚಾಕುಗಳು, ಪ್ಲಾಸ್ಟಿಕ್ ಟ್ರೇಗಳಂತಹ ಕಟ್ಲರಿಗಳು, ಸ್ವೀಟ್ ಬಾಕ್ಸ್ ಗಳ ಸುತ್ತ ಸುತ್ತುವ ಅಥವಾ ಪ್ಯಾಕಿಂಗ್ ಫಿಲ್ಮ್‌ ಗಳು, ಆಮಂತ್ರಣ ಪತ್ರಗಳು ಮತ್ತು ಸಿಗರೇಟ್ ಪ್ಯಾಕೆಟ್‍ಗಳು, 100 ಮೈಕ್ರಾನ್‍ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್‍ ಗಳು, ಪ್ಲಾಸ್ಟಿಕ್ ಸ್ಟಿಕರ್‍ ಗಳ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಜು.21 ರಿಂದ ನಿಷೇಧಿಸಲಾಗಿದೆ.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಟೈಮ್‍ಲೈನ್‍ಗಳ ಪ್ರಕಾರ ಮೇಲಿನ ಎಲ್ಲಾ ವಸ್ತುಗಳ ಉತ್ಪಾದಕರು, ದಾಸ್ತಾನುದಾರರು, ಚಿಲ್ಲರೆ ವ್ಯಾಪಾರಿಗಳು, ಅಂಗಡಿ ಮಾಲೀಕರುಗಳು, ಇ-ಕಾಮರ್ಸ್ ಕಂಪನಿಗಳು, ಬೀದಿ ವ್ಯಾಪಾರಿಗಳು, ವಾಣಿಜ್ಯ ಸಂಸ್ಥೆಗಳು(ಮಾಲ್‍ಗಳು/ಮಾರುಕಟ್ಟೆ ಸ್ಥಳ/ಶಾಪಿಂಗ್ ಕೇಂದ್ರಗಳು/ಸಿನಿಮಾ ಮನೆಗಳು/ಪ್ರವಾಸೋದ್ಯಮ ಸ್ಥಳಗಳು/ಶಾಲೆಗಳು/ಕಾಲೇಜುಗಳು/ಕಚೇರಿ ಸಂಕೀರ್ಣಗಳು/ಆಸ್ಪತ್ರೆಗಳು ಇತರೆ ಸಂಸ್ಥೆಗಳು ಮತ್ತು ಸಾಮಾನ್ಯ ಸಾರ್ವಜನಿಕರಿಗೆ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದನೆ, ಸಂಗ್ರಹಣೆ, ವಿತರಣೆ ಮಾರಾಟ ಮತ್ತು ಬಳಕೆಯನ್ನು ನಿಲ್ಲಿಸುವಂತೆ ತಿಳಿಸಲು ಈ ಸೂಚನೆಯನ್ನು ನೀಡಲಾಗಿದೆ.

ಇದಲ್ಲದೇ 2022 ರ ಜೂನ್ 30 ರೊಳಗೆ ಮೇಲೆ ತಿಳಿಸಲಾದ ಏಕ ಬಳಕೆಯ ಪ್ಲಾಸ್ಟಿಕ್(ಎಸ್‍ಯುಪಿ) ವಸ್ತುಗಳ ಶೂನ್ಯ ದಾಸ್ತಾನುಗಳನ್ನು ಖಚಿತಪಡಿಸಿಕೊಳ್ಳಲು ಸಂಬಂಧಿಸಿದ ಘಟಕಗಳಿಂದ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕು. ಎಲ್ಲಾ ಇ-ಕಾಮರ್ಸ್ ಕಂಪನಿಗಳ ವೆಬ್‍ಸೈಟ್‍ನಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮತ್ತು ಪ್ರದರ್ಶನ/ಜಾಹಿರಾತುಗಳನ್ನು ಕೂಡ ಜುಲೈ 01 ರಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.

ಮೇಲಿನ ಆದೇಶವನ್ನು ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳಾದ ಮಾಲ್‍ಗಳು/ಮಾರುಕಟ್ಟ ಸ್ಥಳ/ಶಾಪಿಂಗ್ ಕೇಂದ್ರಗಳು/ಸಿನಿಮಾ ಮನೆಗಳು/ಪ್ರವಾಸಿ ಸ್ಥಳಗಳು/ಶಾಲೆಗಳು/ಕಾಲೇಜುಗಳು/ಕಚೇರಿಗಳು/ಆಸ್ಪತ್ರೆಗಳು ಮತ್ತು ಇತರೆ ಸಂಸ್ಥೆಗಳು ಉಲ್ಲಂಘಿಸಿದರೆ ಪರಿಸರ (ಸಂರಕ್ಷಣೆ)ಕಾಯ್ದೆ, 1986 ರಡಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳುವ ಮತ್ತು ಅಂತಹ ಕೈಗಾರಿಕೆಗಳಿಗೆ ಮುಚ್ಚುವ ಆದೇಶವನ್ನು ನೀಡಲಾಗುವುದು. ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಹೊರಡಿಸಿದ ಮಾರ್ಗಸೂಚಿಯ ಪ್ರಕಾರ ಪರಿಸರ ಪರಿಹಾರವನ್ನು ಪ್ರತಿ ಟನ್‍ಗೆ ರೂ.5,000/- ರಂತೆ ದಂಡ ವಿಧಿಸಲಾಗುವುದು ಎಂದು ಪರಿಸರ ಅಧಿಕಾರಿ ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here