ಹೊಂಬುಜದಲ್ಲಿ ಸಂಭ್ರಮದ ಯುಗಾದಿ ಹಬ್ಬ ಆಚರಣೆ | ಪಂಚಾಂಗ ಭವಿಷ್ಯಕ್ಕಿಂತ ಪರಿಶ್ರಮದಿಂದ ಸುಂದರ ಭವಿಷ್ಯ ನಿರ್ಮಾಣ ಸಾಧ್ಯ ; ಶ್ರೀಗಳು

0
269

ರಿಪ್ಪನ್‌ಪೇಟೆ: ಪಂಚಾಂಗದ ಭವಿಷ್ಯಕ್ಕಿಂತಲೂ ಪುರುಷಾರ್ಥ, ಪರಿಶ್ರಮಗಳಿಂದ ಪ್ರತಿಫಲದ ಅಪೇಕ್ಷೆ ಮಾಡುವ ಮೂಲಕ ಸುಂದರ ಭವಿಷ್ಯ ನಿರ್ಮಾಣ ಮಾಡಿಕೊಳ್ಳಲು ಸಾಧ್ಯ ಎಂದು ಹೊಂಬುಜದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಗಳವರು ಹೇಳಿದರು.

ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಸಂಜೆ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಶುಭ ಸಂಕಲ್ಪಗಳನ್ನು ಮಾಡುವ ಮೂಲಕ ಪ್ರತಿಯೊಬ್ಬರೂ ಪ್ರಗತಿ ಪಥದಲ್ಲಿ ಸಾಗಬೇಕು. ಜೀವನದಲ್ಲಿ ನೆನಪಿಡಬೇಕಾದ ವಿಶೇಷವೇನೆಂದರೆ ಕತ್ತಲೆಯು ಒಂದು ಸಮಸ್ಯೆಯಾದರೆ ದೀಪದ ಬೆಳಕು ಇದಕ್ಕಿರುವ ಸಮಾಧಾನ. ಅಜ್ಞಾನವು ಸಮಸ್ಯೆಯಾದರೆ ಜ್ಞಾನವು ಅದಕ್ಕಿರುವ ಸಮಾಧಾನ. ಪ್ರಯತ್ನವಿಲ್ಲದೇ ಪ್ರಕಾಶವು ಸಾಧ್ಯವಾಗದು. ದಾರಿ ಸಾಗಬೇಕೆಂದರೆ ನಾವು ದೀಪ ಹಿಡಿದು ಮುನ್ನಡೆಯಲು ಆರಂಭಿಸಬೇಕು. ಆಗ ತನಷ್ಟಕ್ಕೆ ತಾನೆ ದಾರಿ ಕಾಣುತ್ತದೆ.

ಈ ದೀಪವೆಂಬುದು ಆಧ್ಯಾತ್ಮ ಜ್ಯೋತಿಯಾಗಿದೆ. ಯುಗಾದಿ (ಯುಗ+ಆದಿ)ಯ ಶುಭ ಸಂದರ್ಭದಲ್ಲಿ ಶುಭ ಸಂಕಲ್ಪಗಳನ್ನು ಮಾಡುವ ಮೂಲಕ ಮುಂದಿನ ಒಂದು ವರ್ಷದವರೆಗೆ ಪ್ರಗತಿ ಪಥದಲ್ಲಿ ಸಾಗುವ ನಿಶ್ಚಯ ಮಾಡಿಕೊಳ್ಳುವುದು. ಮಾನವ ಸಹಜ ನೋವು-ನಲಿವುಗಳ ಮಧ್ಯೆ ಸುಮಧುರ ಭಾವನೆಗಳನ್ನು ಮನದಲ್ಲಿ ಪುನಃ ಪುನಃ ಚಿಂತಿಸುವ ಮೂಲಕ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ. ಸಮಾಜದಲ್ಲಿ ಶಾಂತಿ-ಸೌಹಾರ್ದತೆಯಿಂದ ಸಮೃದ್ಧಿ ಕಾಣುವಂತಾಗಲಿ.

ಭ|| ಶ್ರೀ ಪಾರ್ಶ್ವನಾಥ ಸ್ವಾಮಿಗೆ ಮತ್ತು ಜಗನ್ಮಾತೆ ಶ್ರೀ ಪದ್ಮಾವತಿ ದೇವಿಗೆ ವಿಶೇಷ ಅಭಿಷೇಕ ಪೂಜಾದಿ ಕಾರ್ಯಗಳು ನೆರವೇರಿದವು. ಕ್ಷೇತ್ರಕ್ಕೆ ರಾಜ್ಯ-ಹೊರರಾಜ್ಯಗಳಿಂದ ಬಂದ ಭಕ್ತರು ಶ್ರೀಮುಖ ದರ್ಶನ ಮಾಡಿ ಭಕ್ತಿ ಸಮರ್ಪಿಸಿದರು. ಅಂದು ಸಂಜೆ ಪರಮಪೂಜ್ಯ ಶ್ರೀಗಳ ಪಾವನ ಸಾನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಪ್ರತಿಷ್ಠಾಚಾರ್ಯ ಪದ್ಮರಾಜ ಇಂದ್ರರು ಪಂಚಾಂಗ ಶ್ರವಣ ವಾಚನ ಮಾಡಿದರು. ಊರಿನ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು.

ಜಾಹಿರಾತು

LEAVE A REPLY

Please enter your comment!
Please enter your name here