ಹೊಂಬುಜ ಜೈನ ಮಠದಲ್ಲಿ ‘ಸಿದ್ದಾಂತ ಕೀರ್ತಿ’ ಪ್ರಶಸ್ತಿ ಪ್ರದಾನ ಸಮಾರಂಭ‌ | ಸಮಾಜದಲ್ಲಿ ಜೈನಧರ್ಮ ಪಾಲನೆಯಾದರೆ ಯುದ್ಧ, ಕ್ಷೋಭೆ, ದುರ್ಭೀಕ್ಷೆಗಳು ಘಟಿಸುವುದಿಲ್ಲ‌ ; ಹೊಂಬುಜ ಶ್ರೀಗಳು

0
184

ರಿಪ್ಪನ್‌ಪೇಟೆ: ಜೈನ ಧರ್ಮದಲ್ಲಿ ತೀರ್ಥಂಕರರು ವೈಜ್ಞಾನಿಕವಾಗಿರುವ ಶಾಶ್ವತವಾದ ಬೋಧನೆಯನ್ನು ಮಾಡಿದ್ದಾರೆ. ಅದರಂತೆ ಸಮಾಜದ ಜನರಲ್ಲಿ ಧರ್ಮಪಾಲನೆಯಾದರೆ ಎಂದಿಗೂ ಯುದ್ಧ, ಕ್ಷೋಭೆ, ದುರ್ಭೀಕ್ಷೆಗಳು ಘಟಿಸುವುದಿಲ್ಲವೆಂದು ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ತಿಳಿಸಿದರು.

ಹೊಂಬುಜದಲ್ಲಿ ಜರುಗುತ್ತಿರುವ ಭಗವಾನ್ ಶ್ರೀ ಪಾರ್ಶ್ವನಾಥಸ್ವಾಮಿ ಮತ್ತು ಮಾತೆ ಯಕ್ಷಿ ಶ್ರೀಪದ್ಮಾವತಿ ಅಮ್ಮನವರ ವಾರ್ಷಿಕ ರಥೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಸಿದ್ಧಾಂತ ಕೀರ್ತಿ ಪ್ರಶಸ್ತಿ ಪ್ರದಾನ ಹಾಗೂ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ಕಳೆದ ಎರಡು ವರ್ಷಗಳಲ್ಲಿ ಬಾದಿಸಿದ ಕೊರೊನಾ ವೈರಸ್‌ನಿಂದ ಮನುಕುಲ ಬಂಧನದ ಪರಿಸ್ಥಿತಿಯನ್ನು ಅನುಭವಿಸಿತು. ಆ ಸಂದರ್ಭದಲ್ಲಿ ಜನರು ತಮ್ಮ ಆರೋಗ್ಯ ರಕ್ಷಣೆಗಾಗಿ ಶುಚಿಯಾಗಿರುವುದು, ಅನಗತ್ಯ ತಿರುಗಾಟ ಮಾಡದಿರುವುದು, ದೇಹಕ್ಕೆ ಅಗತ್ಯವಾದ ಪ್ರೋಟೀನ್‌ಯುಕ್ತ ಯೋಗ್ಯ ಆಹಾರ ಭಕ್ಷಣೆ, ಶುದ್ಧವಾದ ಗಾಳಿ, ನೀರು ಸೇವನೆಯನ್ನು ಪಾಲಿಸಿದ್ದಾರೆ. ಇವೆಲ್ಲವೂ ಮನುಷ್ಯನ ಆರೋಗ್ಯಯುತ ಜೀವನಕ್ಕೆ ಅಗತ್ಯವಾಗಿದ್ದು, ಅನಾದಿಕಾಲದಲ್ಲಿಯೇ ತೀರ್ಥಂಕರರು ಇದನ್ನು ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ವ್ಯಕ್ತಿಯು ಜಿನಶಾಸ್ತ್ರವನ್ನು ನಿಯಮಾನುಸಾರ ಪಾಲಿಸಿದರೆ ಆತನಿಗೆ ಅನಾರೋಗ್ಯ ಕಾಡುವುದಿಲ್ಲವೆಂದು ತಿಳಿಸಿದ್ದಾರೆ. ಕೊರೊನಾ ವ್ಯಾಪಕವಾಗಿದ್ದ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ಎಲ್ಲರೂ ತಮ್ಮ ಅರಿವಿಗೆ ಬಾರದಂತೆ ಜಿನಶಾಸ್ತ್ರವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇವೆ. ಆದ್ದರಿಂದ ಜನರಿಗೀಗ ಅರಿವಾಗಿದೆ ನಮ್ಮ ರಕ್ಷಣೆ ನಮ್ಮ ಕೈಯಲ್ಲಿಯೇ ಇದೆ ಎಂದು. ಪ್ರಸ್ತುತ ವಾತಾವರಣವು ಕಲುಷಿತಗೊಂಡಿದೆ. ಮನುಷ್ಯನ ಸ್ವಾರ್ಥವೇ ಇದಕ್ಕೆಲ್ಲ ಕಾರಣವಾಗಿದ್ದು, ಇಂತಹ ಬೆಳವಣಿಗೆಯಿಂದ ಸಂಸ್ಕಾರ ಸಮಾಜ ನಾಶವಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ಜೈನಧರ್ಮದಲ್ಲಿ ಸಮಾಜದಲ್ಲಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಭೂಮಿ ಮೇಲೆ ಮಾನವ ಹುಟ್ಟಿದಾಗ ಆರಂಭವಾದ ಜೈನ ಧರ್ಮ ಯಾವುದೇ ಕಾಲಕ್ಕೆ ಅಳಿಯದೆ ಉಳಿಯಲಿದೆ. ಜಿನಶಾಸ್ತ್ರಗಳನ್ನು ಅರಿತು ಪಾಲನೆಯಾದರೆ ಜಗತ್ತಿನಲ್ಲಿ ಯಾವುದೇ ಅಸಂತುಷ್ಟ ಅಸಮಾನತೆಗಳು ಇರುವುದಿಲ್ಲ. ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಅಹಿಂಸೆ, ಶಾಂತಿಯನ್ನು ಸ್ಥಾಪಿಸಿ ಸಾಮರಸ್ಯವನ್ನು ಸದಾಕಾಲ ಉಳಿಸುವಂತಾಗಲಿ ಎಂದು ಹಾರೈಸಿದರು.

ಸಿದ್ಧಾಂತ ಕೀರ್ತಿ ಪ್ರಶಸ್ತಿ ಪುರಸ್ಕೃತರಾದ ಪ್ರೋ. ಜೀವಂಧರ್ ಕುಮಾರ್ ಹೋತಪೇಟಿ ರವರು ಮಾತನಾಡಿ, ಅರಹದ್ದಾಸರ ಕಾಲದಿಂದ್ದಲೂ ಶ್ರೀಮಠವು ಅನೇಕ ವಿದ್ವಾಂಸರುಗಳಿಗೆ ಸಿದ್ಧಾಂತ ಕೀರ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಂತೆಯೇ ಈ ಪ್ರಶಸ್ತಿಯು ನನಗೆ ಲಭಿಸಿರುವುದು ಸಂತೋಷವನ್ನುಂಟು ಮಾಡಿದೆ. ಭಟ್ಟಾರಕ ಪರಂಪರೆಯ ಜಿನಮುನಿಗಳು ಆತ್ಮಕಲ್ಯಾಣದ ಮೂಲಕ ಸಮಾಜಕೆ ಮಾರ್ಗತೋರಿದ್ದಾರೆ. ದೇವ. ಗುರು, ಶಾಸ್ತ್ರಗಳ ರಚನೆಗೆ ನಿಂತವರನ್ನು ಆಯತಮರೆಂದು ಕರೆದಿದ್ದಾರೆ. ಭಟ್ಟಾರಕರು ಇಲ್ಲದಿದ್ದರೆ ಜೈನಧರ್ಮ ಅಳಿವಿನಂಚಿಗೆ ಸಾಗುತ್ತಿತ್ತು. 20ನೇ ಶತಮಾನದಲ್ಲಿ ಜೈನಧರ್ಮಕ್ಕೆ ಹೊಳಪನ್ನು ನೀಡಿರುವ ಕೀರ್ತಿ ಶಾಂತಿಸಾಗರ ಮುನಿಗಳಿಗೆ ಸೇರುತ್ತದೆ. ಜಿನಾಲಯಗಳ ಪ್ರಾರಂಭ, ಜೈನಗ್ರಂಥ ಪ್ರಕಟಣೆ, ಬಸದಿಗಳ ರಕ್ಷಣೆಯಿಂದ 21 ನೇ ಶತಮಾನದಲ್ಲಿಯೂ ಜಗತ್ತಿಗೆ ಒಂದು ಹೊಸದೃಷ್ಠಿಕೋನವನ್ನು ಜೈನಧರ್ಮ ನೀಡಿದೆ. ಸಿದ್ಧಾಂತ ಕೀರ್ತಿ ಪ್ರಶಸ್ತಿಯ ಜೊತೆಗೆ ನೀಡಲಾದ ಮೊತ್ತವನ್ನು ಶ್ರೀಮಠದ ಸಿದ್ಧಾಂತ ಕೀರ್ತಿ ಗ್ರಂಥಮಾಲೆಗೆ ಅರ್ಪಿಸುತ್ತೇನೆಂದು ಇದೇ ಸಂದರ್ಭದಲ್ಲಿ ಘೋಷಿಸಿದರು.

ಹೊಂಬುಜ ಮಠದಲ್ಲಿ ಪ್ರಸ್ತುತ ಸಾಲಿನಿಂದ ಜೈನಧರ್ಮದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಪುರಸ್ಕರಿಸುವ ಉದ್ದೇಶದಿಂದ ‘ಧರ್ಮಭೂಷಣ’ ಪ್ರಶಸ್ತಿ ಪ್ರಧಾನ ಮಾಡುವ ಉದ್ದೇಶ ಹೊಂದಲಾಗಿದ್ದು, ಪ್ರಥಮ ವರ್ಷದಲ್ಲಿ ಅಸ್ಸಾಂನ ತಿನ್‌ಸುಖಿಯಾದ ಉದ್ಯಮಿ ಪವನ್ ಕುಮಾರ್ ರಾರಾರವರಿಗೆ ನೀಡಿ ಗೌರವಿಸಲಾಯಿತು.

ಮುಖ್ಯಅತಿಥಿಗಳಾಗಿ ಇಂಪಾಲ ವಿಜಯ್‌ಪಾಟ್ನಿ, ಮನೋಜ್‌ಕುಮಾರ ಪಾಟ್ನಿ, ಗೌಹಾಟಿ ರಾಜೇಂದ್ರಛಾವಡಿ, ತಿನ್‌ಸುಕಿಯಾ ಅಸ್ಸಾಂ ಪವನಕುಮಾರ್‌ರಾರಾ, ಬೆಂಗಳೂರು ದೀಪಕ್‌ಜೈನ್, ಶಿವಮೊಗ್ಗ ಜೈನ ಸಮಾಜ ಪ್ರಭಾಕರಗೋಗಿ, ನಿವೃತ್ತ ಶಿಕ್ಷಕ ಮಂಜಪ್ಪ, ಪೂರ್ಣಿಮಾ ಜೈನ್ ಇನ್ನಿತರರು ಭಾಗವಹಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here