ಹೊಸನಗರ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಒಲಿಂಪಿಕ್ ಅಸೋಸಿಯೇಷನ್, ತಾಲೂಕು ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಸಂಯೋಜಿಸಿದ ತಾಲೂಕು ಮಟ್ಟದ ಪಂಚಾಯತ್ ಕ್ರೀಡಾಹಬ್ಬಕ್ಕೆ ಶಾಸಕ, ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಕ್ರೀಡಾ ಧ್ವಜಾರೋಹಣಗೈದು ವರ್ಣರಂಜಿತ ಬಲೂನುಗಳನ್ನು ಹಾರಿಬಿಡುವ ಮೂಲಕ ಅದ್ದೂರಿ ಚಾಲನೆ ನೀಡಿದರು.
ನಂತರ ಮಾತನಾಡಿ, ಈ ಕ್ರೀಡಾಕೂಟ ಜಾತಿ, ಮತ, ಪಕ್ಷ ಭೇದಗಳಿಂದ ಹೊರತಾಗಿದ್ದು ಕೆಲಸದ ಒತ್ತಡದ ನಡುವೆ ಮನಸ್ಥಿತಿಯನ್ನು ಸಂತಸದ ಲೋಕಕ್ಕೆ ಕೊಂಡೊಯ್ಯುವ ಕಾರ್ಯಕ್ರಮವಾಗಿದೆ. ಈ ಕ್ರೀಡಾಕೂಟಗಳಿಂದ ನಡೆಸಬೇಕೆಂದು ಹುಟ್ಟುಹಾಕಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಅಭಿಲಾಷೆ ನಿಜಕ್ಕೂ ಶ್ಲಾಘನೀಯ ಎಂದರು.
ಈ ಸಮಾರಂಭದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ನಿರ್ದೇಶಕ ಎನ್.ಆರ್ ದೇವಾನಂದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಎಂ.ಎಲ್ ವೈಶಾಲಿ, ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಹಾಗೂ ಉಪ ಕಾರ್ಯದರ್ಶಿ ಜಯಲಕ್ಷ್ಮಮ್ಮ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ, ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಶಶಿಕುಮಾರ್ ತಹಶೀಲ್ದಾರ್ ವಿ.ಎಸ್ ರಾಜೀವ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ತಾಲೂಕು ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷ ಚಿದಂಬರ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ತಾರಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಪ್ರವೀಣ್ ಸ್ವಾಗತಿಸಿ ಮಾತನಾಡಿ, ಪ್ರಪ್ರಥಮ ಬಾರಿಗೆ ಆಯೋಜಿಸಿದ ಪಂಚಾಯತಿ ಕ್ರೀಡಾಹಬ್ಬ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಹಾಗೂ ಕಚೇರಿ ಸಿಬ್ಬಂದಿಗಳ ನಡುವೆ ಬಾಂಧವ್ಯ ಸಮನ್ವಯತೆ ಒಗ್ಗಟ್ಟು ಬೆಳೆಯಲು ವೇದಿಕೆಯಾಗಿದೆ ಎಂದರು.
ಸುಹಾಸ್ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಕಚೇರಿ ಸಿಬ್ಬಂದಿಗಳು ಸೇರಿದಂತೆ 500ಕ್ಕೂ ಹೆಚ್ಚು ಜನರು ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಸೇರಿ ಹಬ್ಬದ ವಾತಾವರಣ ಕಲ್ಪಿಸಿದ್ದರು.