ಹೊಸನಗರ: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಆರೋಗ್ಯ ಇಲಾಖೆ ಇಲ್ಲಿನ ಸಾರ್ವಜನಿಕಆಸ್ಪತ್ರೆಯಲ್ಲಿ ಏ.27ರಂದು ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಮೇಳೆ ಕೇವಲ ಕಾಟಾಚಾರಕ್ಕೆ ಎನ್ನುವಂತಾಯಿತು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದರೂ, ಇಲ್ಲಿನ ಅಧಿಕಾರಿ ವರ್ಗ ಆರೋಗ್ಯ ಮೇಳ ಸದ್ಬಳಕೆ ಆಗುವಂತೆ ಮಾಡುವಲ್ಲಿ ವಿಫಲವಾಗಿರುವುದು ಕಂಡು ಬಂದಿತು.

ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ನೀಡಬೇಕಿದ್ದ ಆರೋಗ್ಯ ಇಲಾಖೆ ಕರಪತ್ರ ಹಂಚುವಿಕೆ, ಗ್ರಾಮ, ಹೋಬಳಿ ಮಟ್ಟದಲ್ಲಿ ಪ್ರಚಾರ ಮಾಡಲಿಲ್ಲ. ಪಟ್ಟಣ ಪಂಚಾಯಿತಿಯ ಕಸ ತುಂಬುವ ವಾಹನದಲ್ಲಿ ಧ್ವನಿ ವರ್ಧಕದ ಮೂಲಕ ಪ್ರಚಾರ ಬಿಟ್ಟರೆ ಬೇರೆ ಯಾವುದೇ ಕರಪತ್ರ ಹಂಚುವುದು ಮಾಡಲಿಲ್ಲ ಇದರಿಂದಾಗಿ ಗ್ರಾಮೀಣ ಪ್ರದೇಶದ ಬಹುಪಾಲು ಜನತೆಗೆ ಆರೋಗ್ಯ ಮೇಳದ ಮಾಹಿತಿ ದೊರಕದೇ ತಪಾಸಣೆಗೆ ಆಗಮಿಸಲಿಲ್ಲ.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಆರೋಗ್ಯ ಮೇಳದ ಉದ್ಘಾಟನೆಗೆ ಪಟ್ಟಣ ಪಂಚಾಯಿತಿ ಜನಪ್ರತಿನಿಧಿಗಳನ್ನಾಗಲೀ ಅಧಿಕೃತವಾಗಿ ಆಹ್ವಾನಿಸುವ ಶಿಷ್ಟಾಚಾರವನ್ನೂ ಆರೋಗ್ಯ ಇಲಾಖೆ ಅಧಿಕಾರಿಗಳು ಪಾಲಿಸಲು ಮುಂದಾಗಲಿಲ್ಲ. ಪ್ರಚಾರದ ಮೂಲಕ ಜನಸಾಮಾನ್ಯರಿಗೆ ಮಾಹಿತಿ ನೀಡುವಲ್ಲಿ ಮುಖ್ಯ ಪಾತ್ರ ವಹಿಸುವ ಮಾಧ್ಯಮಗಳ ಸಹಕಾರವನ್ನೂ ಕೇಳದಿರುವುದು ವಿಪರ್ಯಾಸವೆನಿಸಿತು.
