ಹೊಸನಗರದ ಸರ್ಕಾರಿ ಹೈಸ್ಕೂಲ್‌ನಲ್ಲಿ ಶೌಚಾಲಯವಿಲ್ಲದೇ ವಿದ್ಯಾರ್ಥಿನಿಯರ ಪರದಾಟ ; ಮನವಿ ನೀಡಿದರೂ ಸ್ಪಂದಿಸುವವರಿಲ್ಲ !

0
379

ಹೊಸನಗರ: ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜ್ ಪಕ್ಕದಲ್ಲಿರುವ ಸರ್ಕಾರಿ ಹೈಸ್ಕೂಲ್ ಆದರೆ ಇಲ್ಲಿನ ವಿದ್ಯಾರ್ಥಿನಿಯರಿಗೆ ಶೌಚಾಲಯವಿಲ್ಲದೇ ಪರದಾಟದ ಪರಿಸ್ಥಿತಿ ಬಂದಿದೆ ಎಂದರೆ ತಪ್ಪಾಗಲಾರದು.

ಹೊಸನಗರದ ಸರ್ಕಾರಿ ಹೈಸ್ಕೂಲ್‌ನಲ್ಲಿ ಸುಮಾರು 300 ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ 8ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿಯವರೆಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದರಲ್ಲಿ ಬಹುಪಾಲು ವಿದ್ಯಾರ್ಥಿನಿಯರೇ ಆಗಿದ್ದಾರೆ. ವಿದ್ಯಾರ್ಥಿಗಳಿಗೆ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ ಆದರೆ ವಿದ್ಯಾರ್ಥಿನಿಯರು ಕಂಕಣ ಸುತ್ತಿ ಮೈಲಾರಕ್ಕೆ ಹೋಗುವ ಗಾದೆಯ ಹಾಗೆ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯಕ್ಕೆ ಹೋಗುವ ಪರಿಸ್ಥಿತಿ ಬಂದಿದೆ. ಕೆಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಇದರ ಬಗ್ಗೆ ಹಿಂದಿನ ಶಿಕ್ಷಕ ವರ್ಗವಾಗಲಿ ಅಥವಾ ಎಸ್‌ಡಿಎಂಸಿ ಕಮಿಟಿಯವರಾಗಲಿ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಆದರೆ ವಿದ್ಯಾರ್ಥಿನಿಯರ ಪರದಾಟ ತಪ್ಪಿಲ್ಲ.

ಸ್ಪಂದಿಸದ ಶಿಕ್ಷಣ ಇಲಾಖೆ ಮತ್ತು ಶಾಸಕರು:

ಸರ್ಕಾರಿ ಹೈಸ್ಕೂಲಿನಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ ಎಂದು ಈ ಹಿಂದಿನ ಸಾಲಿನಲ್ಲಿ ಹೊಸನಗರ ಕಛೇರಿ ಶಿಕ್ಷಣಾಧಿಕಾರಿಗಳಿಗೆ ಹಾಗೂ ನಮ್ಮ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪನವರಿಗೆ ಮನವಿ ಪತ್ರದ ಮೂಲಕ ತಿಳಿಸಲಾಗಿದ್ದು ಆದರೆ ಇಲ್ಲಿಯವರೆಗೆ ಸ್ಪಂದಿಸದಿರುವುದು ನೋವಿನ ಸಂಗತಿ ಎಂದು ಇಂದಿನ ಎಸ್‌ಡಿಎಂಸಿ ಸದಸ್ಯರಾದ ಸತ್ಯನಾರಾಯಣರವರು ಬೇಸರ ವ್ಯಕ್ತಪಡಿಸಿದ್ದು ಸರ್ಕಾರ, ಶಿಕ್ಷಣ ಇಲಾಖೆ ಮತ್ತು ಶಾಸಕರು, ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರರವರು ತಕ್ಷಣ ಸ್ಪಂದಿಸಿ ಈ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಶೌಚಾಲಯದ ವ್ಯವಸ್ಥೆ ತಕ್ಷಣ ಮಾಡಿಕೊಡಿ ಎಂಬುದು ಇಲ್ಲಿನ ವಿದ್ಯಾರ್ಥಿನಿಯರ ಬೇಡಿಕೆಯಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here