ಹೊಸನಗರ ತಹಶೀಲ್ದಾರ್ ಖಡಕ್ ಆದೇಶದ ಮೇರೆಗೆ ಅಕ್ರಮ ಮರಳು ಅಡ್ಡೆ ಮೇಲೆ ದಾಳಿ: ಬಾರಿ ಪ್ರಮಾಣದ ಮರಳು ವಶಕ್ಕೆ !

0
1143

ಹೊಸನಗರ: ತಹಶೀಲ್ದಾರ್ ವಿ.ಎಸ್. ರಾಜೀವ್‌ರವರ ಖಡಕ್ ಆದೇಶದ ಮೇರೆಗೆ ಹೊಸನಗರ ತಾಲ್ಲೂಕಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳು ದಂಧೆಗೆ ಇಂದಿನಿಂದ ಕಡಿವಾಣ ಬಿದ್ದಂತಾಗಿದೆ.

ಹೌದು, ಹುಂಚ ಹೋಬಳಿಯ ಕಡಸೂರು ಮತ್ತು ಹೊನ್ನೆಬೈಲು ಗ್ರಾಮದ ಸ.ನಂ 36 ಹಾಗೂ 99ರ ಸಮಟಗಾರು ಸ.ಹಿ.ಪ್ರಾ. ಶಾಲೆ ಆಟದ ಮೈದಾನದಲ್ಲಿ ಸಂಗ್ರಹಿಸಲಾದ ಸುಮಾರು ಒಟ್ಟು 30 ಲೋಡ್ ಗಳಿಗೂ ಅಧಿಕವಾಗಿ ಸಂಗ್ರಹಿಸಿಡಲಾಗಿತ್ತು.

ಇಲ್ಲಿನ ಮರಳು ದಂಧೆಕೋರರು ಅಕ್ರಮವಾಗಿ ಮರಳು ಸಂಗ್ರಹ ಮಾಡಲು ಶಾಲಾ ಆಟದ ಮೈದಾನ ಬಳಸುತ್ತಿದ್ದಾರೆಂದು ಆಗಾಗ ದೂರು ನೀಡಿದರೂ ಅದಕ್ಕೆ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಇಂದು ದಾಳಿ ನಡೆಸಿ ಇದಕ್ಕೆ ಕಡಿವಾಣ ಹಾಕಿದ್ದಾರೆ.

 

ದೂರು ಎಷ್ಟೆ ಬಂದರೂ ನಮಗೆ ಸಂಬಂಧವೇ ಇಲ್ಲವೆಂದು ಕುಳಿತಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಮತ್ತು ತಹಶೀಲ್ದಾರ್ ಇಂದು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ನಿರಂತರವಾಗಿ ‘ಮಲ್ನಾಡ್ ಟೈಮ್ಸ್’ ವರದಿ ಪ್ರಕಟ ಮಾಡುತ್ತಲೇ ಬಂದಿದ್ದು ಈ ಬಗ್ಗೆ ಇತ್ತೀಚೆಗೆ ತಹಶೀಲ್ದಾರ್ ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯ ಬಗ್ಗೆ ಎಳೆ ಎಳೆಯಾಗಿ ವಿವರಣೆ ನೀಡಿತ್ತು. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳುವ ಭರವಸೆ ಸಹ ಈ ವೇಳೆ ತಹಶೀಲ್ದಾರ್ ವಿ.ಎಸ್ ರಾಜೀವ್ ರವರು ನೀಡಿದ್ದರು. ಇಂದು ಮೈ ಕೊಡವಿ ಎದ್ದ ಇಲ್ಲಿನ ತಾಲೂಕು ಆಡಳಿತ ತಾಲೂಕಿನ ಹಲವೆಡೆ ದಾಳಿ ನಡೆಸಿದೆ.

ಕಡಸೂರು ಹಾಗೂ ಸಮಟಗಾರು ಗ್ರಾಮದ ಸರ್ವೆ ನಂಬರ್ 36 ಮತ್ತು 99 ರಲ್ಲಿನ ಶಾಲೆ ಆವರಣದಲ್ಲಿ ಸಂಗ್ರಹಿಸಲಾದ ಸುಮಾರು 30 ಲೋಡ್ ಗಳಿಗೂ ಅಧಿಕವಾಗಿ ಅಕ್ರಮ ಮರಳನ್ನ ಇಲಾಖೆ ವಶಕ್ಕೆ ಪಡೆದಿದೆ. ಶಾಲಾ ಆಟದ ಮೈದಾನದಲ್ಲಿ ಮರಳು ಸಂಗ್ರಹವಾಗಿದೆ ಎಂದರೆ ಮರಳು ಮಾಫಿಯಾ ಎಷ್ಟು ಪ್ರಭಾವಶಾಲಿಯಾಗಿ ಬೆಳೆದಿರಬೇಕು? ಅಧಿಕಾರಿಗಳು ಎಚ್ಚೆತ್ತುಕೊಂಡು ಪರಿಸರ ಸಾರ್ವಜನಿಕ ಆಸ್ತಿ ಉಳಿಸಬೇಕಾದ ಶಾಸಕರು, ಸಚಿವರು, ಅಧಿಕಾರಿಗಳು ಈ ಅವ್ಯವಸ್ಥೆಯ ಭಾಗವಾಗಿರುವುದರಿಂದ ಮರಳು ಮಾಫಿಯಾ ತಾಲೂಕಿನಲ್ಲಿ ತಾಂಡವವಾಡುತ್ತಿದೆ ಎಂಬ ಮಾತು ಸಾರ್ವಜನಿಕರ ವಲಯದಿಂದ ಕೇಳಿ ಬಂದಿದೆ.

ಅಧಿಕಾರಿ ವರ್ಗ ಯಾವುದೇ ರಾಜಕೀಯ ನಾಯಕರ ಮಾತಿಗೆ ಕಿಮ್ಮತ್ತು ನೀಡದೇ ತಮ್ಮ ಕೆಲಸವನ್ನು ನಿರ್ವಹಿಸಿದರೆ ಖಂಡಿತವಾಗಿ ಸರ್ಕಾರದ ಬೊಕ್ಕಸ ತುಂಬಿಸುವ ಜೊತೆಗೆ ಅಕ್ರಮ ಮರಳು ದಂಧೆ ಕಡಿವಾಣ ಹಾಕಿರುವ ದಕ್ಷ ಅಧಿಕಾರಿ ಎಂದು ಹೆಸರುಗಳಿಸಬಹುದು. ಇದು ಒಂದೆರಡು ದಿನಕ್ಕೆ ಸೀಮಿತವಾಗದೇ ನಿರಂತರ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವಂತಾಗಲಿ ಎಂಬುದೇ ಸಾರ್ವಜನಿಕರ ಅಭಿಪ್ರಾಯವಾಗಿದೆ.

 

ಈ ದಾಳಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅವಿನಾಶ್, ಪೊಲೀಸ್ ಸಿಬ್ಬಂದಿಯಾದ ಸೋಮಶೇಖರ್, ರಾಜಸ್ವ ನಿರೀಕ್ಷಕ ಇನಾಯತ್ ಇನ್ನೂ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here