ಹೊಸನಗರ ತಾಲೂಕಿನಾದ್ಯಂತ ಸಂಭ್ರಮದ ಭೂಮಿ ಹುಣ್ಣಿಮೆ ಹಬ್ಬ: ಭೂತಾಯಿಗೆ ಬಸಿರ ಬಯಕೆ ತೀರಿಸಿದ ಅನ್ನದಾತರು

0
843

ಹೊಸನಗರ: ಶೀಗಿ ಹುಣ್ಣಿಮೆಯಾದ ಇಂದು ತಾಲೂಕಿನಾದ್ಯಂತ ಅನ್ನದಾತರು ಭೂತಾಯಿಗೆ ಬಸಿರ ಬಯಕೆ ತೀರಿಸುವ ಮೂಲಕ ಭೂಮಿ ಹುಣ್ಣಿಮೆ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ಭೂತಾಯ ಮಡಿಲಿಗೆ ವೈವಿಧ್ಯಮಯ ಖಾದ್ಯಗಳನ್ನು ನೈವೇದ್ಯ ಮಾಡುವ ಮೂಲಕ ಭೂರಮೆಯ ಸೀಮಂತವನ್ನು ಸಂಭ್ರಮದಿಂದ ಆಚರಿಸಲಾಯಿತು.

ಎಲ್ಲ ವರ್ಗದವರು ಭೂಮಿ ಹುಣ್ಣಿಮೆ ಹಬ್ಬವನ್ನ ಆಚರಿಸುತ್ತಾರೆ ಆದರೂ ಈ ಭಾಗದ ದೀವರ (ಈಡಿಗ) ಜನಾಂಗಕ್ಕೆ ಈ ಹಬ್ಬ ಎಲ್ಲ ಹಬ್ಬಕ್ಕಿಂತ ಮಿಗಿಲಾಗಿ ಸಂಭ್ರಮಿಸುತ್ತಾರೆ. ತಾವೇ ಭೂಮಣ್ಣಿ ಬುಟ್ಟಿ ರಚಿಸುವ ಮೂಲಕ ಹಬ್ಬದ ಸಂಭ್ರಮಕ್ಕೆ ಓನಾಮ ಬರೆಯುತ್ತಾರೆ.

ಹಬ್ಬದ ಹಿಂದಿನ ರಾತ್ರಿ ಮನೆಯಲ್ಲಿನ ಮಹಿಳೆಯರು ಭೂರಮೆಯ ಮಡಿಲು ತುಂಬಲು ವಿಧವಿಧದ ಕಜ್ಜಾಯ ತಿಂಡಿ-ತಿನಿಸುಗಳನ್ನು ತಯಾರಿಸಿ ಅಮಟೆಕಾಯಿ, ಹಾಗಲಕಾಯಿ, ಹರಿವೆ ಸೊಪ್ಪು, ತೊಂಡೆಸೊಪ್ಪು, ನುಗ್ಗೆ ಸೊಪ್ಪು, ಕೆಸವಿನಸೊಪ್ಪು ಮೊದಲಾದ ಸೊಪ್ಪುಗಳನ್ನು ಉಪ್ಪು ಹಾಕದೆ ಮಣ್ಣಿನ ಮಡಿಕೆಗಳಲ್ಲಿ ಬೇಯಿಸಿ ಹಚ್ಚಂಬಲಿ ಎಂಬ ವಿಶೇಷ ಖಾದ್ಯ ತಯಾರಿಸಿ ಗರ್ಭ ಧರಿಸಿದ ಭೂತಾಯಿಗೆ ನಂಜು ಆಗ ಬಾರದು ಎಂದು ನೈವೇದ್ಯ ಮಾಡಿ ಗದ್ದೆಗೆ ಹಚ್ಚಂಬಲಿ (ಚರಗ) ಬೀರುವ ಮೂಲಕ ಹಬ್ಬದ ಸಂಭ್ರಮದಲ್ಲಿ ತೊಡಗುತ್ತಾರೆ.

ಸೌತೆಕಾಯಿ, ಕೊಟ್ಟೆಕಡುಬು, ಹೋಳಿಗೆ, ಪಾಯಸ, ಅಮಟೆಕಾಯಿ ಸೀಕಲು, ಚಿತ್ರಾನ್ನ, ಮೊಸರನ್ನ ಹಬ್ಬದ ವಿಶೇಷ ಖಾದ್ಯಗಳಾಗಿದ್ದು ಗದ್ದೆಯಲ್ಲಿ ಮಾವಿನೆಲೆ, ಕಬ್ಬು, ಬಾಳೆಕಂದುಗಳಿಂದ ಹಸಿರು ತೋರಣದ ಮಂಟಪ ಕಟ್ಟಿ ಹೊಡೆ ತುಂಬಿದ ಭತ್ತದ ಸಸಿಯ ಬುಡದಲ್ಲಿ ಹಸಿರು ಬಳೆ, ಹೊಸಬಟ್ಟೆ, ನೂಲು ಇಟ್ಟು ಆಭರಣ ತೊಡಿಸಿ ಭೂದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಮಹಿಳೆಯರು ತಮ್ಮ ಮಾಂಗಲ್ಯ ಸರವನ್ನು ಈ ಸಂದರ್ಭದಲ್ಲಿ ಭೂತಾಯಿಗೆ ತೊಡಿಸಿ ಸಂಭ್ರಮಿಸುತ್ತಾರೆ‌.

ಪೂಜೆ ನಂತರ ಭೂಮಿ, ಪಶುಪಕ್ಷಿಗಳಿಗೆ ಎಂದು ಮೂರು ಕುಡಿ ಬಾಳೆ ಎಲೆಯಲ್ಲಿ ಎಡೆಯಿಟ್ಟು ಬುಟ್ಟಿಯಲ್ಲಿರುವ ಖಾದ್ಯವನ್ನು ಭೂಮಿಗೆ ಬೀರಿ ನಂತರ ಎರಡು ಕೊಟ್ಟೆಕಡುಬನ್ನು ಗದ್ದೆಯಲ್ಲಿ ಹುಗಿದು ನಂತರ ಮನೆಯವರು ಗದ್ದೆಯ ಬದುವಿನಲ್ಲಿ ಕುಳಿತು ಊಟ ಮಾಡುವುದು ಈ ಹಬ್ಬದ ಸಂಪ್ರದಾಯವಾಗಿದೆ‌.

ಜಾಹಿರಾತು

LEAVE A REPLY

Please enter your comment!
Please enter your name here